Friday, 20th September 2024

ICC World Cup 2023: ಏಕದಿನ ವಿಶ್ವಕಪ್‌ನಿಂದ ಭಾರತಕ್ಕೆ 11,367 ಕೋಟಿ ರೂ. ಲಾಭ

ICC World Cup 2023

ಮುಂಬಯಿ: ಭಾರತದ ಆತಿಥ್ಯದಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್‌ನಿಂದ(ICC World Cup 2023) ಒಟ್ಟು 11,367 ಕೋಟಿ ರೂ. ಆರ್ಥಿಕ ಲಾಭವಾಗಿದೆ ಎಂದು ಐಸಿಸಿ (ICC) ವರದಿಯಲ್ಲಿ ತಿಳಿಸಿದೆ. ವಿಶ್ವಕಪ್‌ ವೇಳೆ ಪ್ರವಾಸೋದ್ಯಮ, ಹೊಟೇಲ್‌, ಸಾರಿಗೆ, ಆಸ್ಪತ್ರೆ ಸೇರಿ ಭಾರತದ ವಿವಿಧ ವಲಯಗಳಲ್ಲಿ ಹಣ ಹರಿದು ಬಂದ ಪರಿಣಾಮ ದೇಶದಲ್ಲಿ ಈ ಮಟ್ಟದ ಆರ್ಥಿಕ ಲಾಭವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ವಿಶ್ವಕಪ್‌ ವೇಳೆ ಪಂದ್ಯ ನೋಡಲು ವಿದೇಶಿ ಮತ್ತು ದೇಶೀಯ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಭಾರತದ ಬೇರೆ ಬೇರೆ ನಗರಗಳಿಗೆ ಭೇಟಿ ನೀಡಿದ್ದಾರೆ. ಜತೆಗೆ ಇಲ್ಲಿದ್ದ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದಾರೆ. ಇದರಿಂದ ಸ್ಥಳೀಯವಾಗಿ ಹಲವಾರು ರೀತಿಯ ವಹಿವಾಟು ನಡೆದಿದೆ ಎಂದು ಐಸಿಸಿ ಹೇಳಿದೆ. ವಿಶ್ವಕಪ್‌ ಪಂದ್ಯಾವಳಿ ನಡೆದಿದ್ದ ತಾಣಗಳಿಂದ ಒಟ್ಟು 7,233 ಕೋಟಿ ರೂ. ವಹಿವಾಟು ನಡೆದಿದೆ ಎಂದು ಐಸಿಸಿ ತಿಳಿಸಿದೆ. ಭಾರತದ ವಿವಿಧ ಕ್ಷೇತ್ರಗಳಲ್ಲಿ 48,000 ಪೂರ್ಣಕಾಲಿಕ, ಅರೆಕಾಲಿಕ ಉದ್ಯೋಗಗಳು ಸೃಷ್ಟಿಯಾಗಿವೆ.

ಐಸಿಸಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒದಗಿಸಿದ ಡೇಟಾವನ್ನು ಬಳಸಿಕೊಂಡು ನ್ಯೂಯಾರ್ಕ್ ಮೂಲದ ಸಂಸ್ಥೆಯಾದ ನೀಲ್ಸನ್ ನಡೆಸಿದ ಆರ್ಥಿಕ ಪರಿಣಾಮದ ಮೌಲ್ಯಮಾಪನವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದುವರೆಗೆ ನಡೆದ ವಿಶ್ವಕಪ್‌ಗಳಲ್ಲಿ ಅತ್ಯಂತ ದೊಡ್ಡ ಆರ್ಥಿಕ ಲಾಭ ಇದಾಗಿದೆ ಎಂದು ಐಸಿಸಿ ಘೋಷಿಸಲಾಗಿದೆ. ಭಾರತದ ಆರ್ಥಿಕತೆಯು ಭಾರಿ ಲಾಭವನ್ನು ಪಡೆದಿದೆ.

ಒಟ್ಟು 46 ದಿನ, 48 ಪಂದ್ಯಗಳನ್ನು ದೇಶದ ಪ್ರಮುಖ 10 ನಗರಗಳಲ್ಲಿ ನಡೆಸಲಾಗಿತ್ತು. ಒಟ್ಟಾರೆಯಾಗಿ 12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದು. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ. ವಸತಿ, ಪ್ರಯಾಣ, ಸಾರಿಗೆ, ಆಹಾರ ಮತ್ತು ಪಾನೀಯಗಳ ಮೂಲಕ ಆಯಾ ನಗರಗಳು ಭಾರಿ ಮೊತ್ತದ ಬ್ಯುಸಿನೆಸ್​ ಪಡೆದಿವೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ನವೆಂಬರ್ 19 ರಂದು ಕೊನೆಗೊಂಡಿತು. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಟ ನಡೆಸಿತ್ತು. ಇಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯವನ್ನು 1.3 ಲಕ್ಷ ಮಂದಿ ನೇರವಾಗಿ ವೀಕ್ಷಿಸಿದ್ದಾರೆ. ಇದು ಮಾತ್ರವಲ್ಲದೆ ದೇಶದ ವಿವಿಧ ನಗರಗಳ ಪಿವಿಆರ್​ ಐನಾಕ್ಸ್​ನ 150 ಸಿನಿಮಾ ಮಂದಿರಗಳಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೊಡ್ಡ ಪರದೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಬೇರೆ ಬೇರೆ ಕಡೆಗಳಲ್ಲಿ ಇದೇಏ ರೀತಿಯ ಪರದೆಯಲ್ಲಿ ಪಂದ್ಯದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.