ಮೆಲ್ಬೋರ್ನ್: ಆಸ್ಟ್ರೇಲಿಯ ‘ಎ'(IND A vs AUS A) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್ನಲ್ಲಿ ಶೋಚನೀಯ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಭಾರತ ‘ಎ’ತಂಡದ ಕಳಪೆ ಪ್ರದರ್ಶನ, ದ್ವಿತೀಯ ಇನಿಂಗ್ಸ್ನಲ್ಲಿಯೂ ಮುಂದುವರಿದಿದೆ. ದಿನದಾಟದ ಅಂತ್ಯಕ್ಕೆ 73 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ 11 ರನ್ ಮುನ್ನಡೆ ಸಾಧಿಸಿದ್ದು ಧ್ರುವ ಜುರೆಲ್(19) ಮತ್ತು ನಿತೀಶ್ ರೆಡ್ಡಿ(9) ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಉಭಯ ಆಟಗಾರರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಭಾರತದ ಗೆಲುವು ನಿರ್ಧಾರವಾಗಲಿದೆ.
2 ವಿಕೆಟಿಗೆ 53 ರನ್ ಗಳಿಸಿದ್ದಲ್ಲಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಇಂದು 223 ರನ್ ಬಾರಿಸಿ 62 ರನ್ಗಳ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 50 ರನ್ ಒಟ್ಟುಗೂಡಿಸುವ ಮುನ್ನವೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂಬುಗೆ ಬ್ಯಾಟರ್ಗಳಾದ ಅಭಿಮನ್ಯು ಈಶ್ವರನ್(17), ಕೆ.ಎಲ್ ರಾಹುಲ್(10), ಸಾಯಿ ಸುದರ್ಶನ್(3), ನಾಯಕ ಋತುರಾಜ್ ಗಾಯಕ್ವಾಡ್(11), ದೇವದತ್ತ ಪಡಿಕ್ಕಲ್(1) ಪೈಪೋಟಿಗೆ ಬಿದ್ದವರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಇದನ್ನೂ ಓದಿ PAK vs AUS: ರವೂಫ್ ಘಾತಕ ದಾಳಿ; ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಸೋಲು
ಮೊದಲ ಇನಿಂಗ್ಸ್ನಲ್ಲಿ ಏಕಾಂಗಿಯಾಗಿ ಹೋರಾಡಿ 80 ರನ್ ಹೊಡೆದಿದ್ದ ಧ್ರುವ ಜುರೆಲ್ ದ್ವಿತೀಯ ಇನಿಂಗ್ಸ್ನಲ್ಲಿಯೂ ತಂಡಕ್ಕೆ ಆಸರೆಯಾಗಬೇಕಿದೆ. ಕೆ.ಎಲ್ ರಾಹುಲ್ ದ್ವಿತೀಯ ಇನಿಂಗ್ಸ್ನಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಕಂಡರು. ಇನ್ನಿಂಗ್ಸ್ ಆರಂಭಿಸಿದ ಅವರು ಕೇವಲ 10 ರನ್ ಮಾಡಿ ಕ್ಲೀನ್ ಬೌಲ್ಡ್ ಆದರು. ಮೊದಲ ಇನಿಂಗ್ಸ್ನಲ್ಲಿ 4 ರನ್ ಗಳಿಸಿದ್ದರು.
ರೋಹಿತ್ ಶರ್ಮಾ ಬಾಡರ್ರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಕಾರಣ ಅವರ ಸ್ಥಾನದಲ್ಲಿ ರಾಹುಲ್ರನ್ನು ಆರಂಭಿಕನಾಗಿ ಆಡಿಸಲು ಬಿಸಿಸಿಐ ಯೋಜನೆಯೊಂದನ್ನು ರೂಪಿಸಿತ್ತು. ಬ್ಯಾಟಿಂಗ್ ಪಾರ್ಮ್ ಕಳೆದುಕೊಂಡಿದ್ದ ರಾಹುಲ್ಗೆ ಪಂದ್ಯ ಆರಂಭಕ್ಕೂ ಮುನ್ನ ಲಯ ಕಂಡುಕೊಳ್ಳಲು ʼಎʼ ತಂಡಕ್ಕೆ ಸೇರಿಸಲಾಗಿತ್ತು. ಆದರೆ, ರಾಹುಲ್ ಇಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರನ್ನು ಆಸೀಸ್ ವಿರುದ್ಧ ಆಡಿಸುವುದು ಅನುಮಾನ. ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಧ್ರುವ ಜುರೆಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.
ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್ನ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಹ್ಯಾರಿಸ್(74), ಕೋರೆ ರೊಚ್ಚಿಸಿಯೊಲಿ(35) ಮತ್ತು ಜಿಮ್ಮಿ ಪೀರ್ಸನ್(30). ಕನ್ನಡಿಗ ಪ್ರಸಿದ್ಧ್ ಕೃಷ್ಣ 50 ರನ್ಗೆ 4 ವಿಕೆಟ್ ಕಿತ್ತರೆ, ಮುಕೇಶ್ ಕುಮಾರ್ 41ಕ್ಕೆ 3 ವಿಕೆಟ್ ಪಡೆದರು. ಭಾರತದ ಮೊದಲ ಇನಿಂಗ್ಸ್ನಲ್ಲಿ 161 ರನ್ಗೆ ಆಲೌಟ್ ಆಗಿತ್ತು.