Saturday, 23rd November 2024

IND vs NZ: ಭಾರತ ತಂಡವನ್ನು ಗೇಲಿ ಮಾಡಿದ ಮೈಕಲ್‌ ವಾನ್‌

ಬೆಂಗಳೂರು: ಭಾರತ(IND vs NZ) ಕ್ರಿಕೆಟ್‌ ತಂಡದ ಮತ್ತು ಆಟಗಾರರ ವಿರುದ್ಧ ಸದಾ ಟೀಕೆ ಮಾಡುವ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಮೈಕಲ್‌ ವಾನ್‌(Michael Vaughan) 46ರನ್‌ಗೆ ಆಲೌಟ್‌ ಆದ ಟೀಮ್‌ ಇಂಡಿಯಾವನ್ನು ಟ್ರೋಲ್‌ ಮಾಡಿದ್ದಾರೆ. ಭಾರತದ ಕಳಪೆ ಪ್ರದರ್ಶನದ ಬಳಿಕ ಟ್ವೀಟ್ ಮಾಡಿರುವ ವಾನ್‌, ​’ಭಾರತೀಯ ಅಭಿಮಾನಿಗಳೇ, ಇದರಲ್ಲಿ ಒಳ್ಳೆಯದನ್ನು ನೋಡಲು ಪ್ರಯತ್ನಿಸಿ. ಕನಿಷ್ಠ 36 ರನ್‌ಗಳನ್ನು ದಾಟಲು ನಿಮ್ಮ ತಂಡ ಯಶಸ್ವಿಯಾಗಿದೆ’ ಎಂದು ತಂಡದ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ.

2020ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ ಓವಲ್‌ನಲ್ಲಿ ನಡೆದ ಡೇ-ನೈಟ್‌ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 36 ರನ್‌ಗಳಿಗೆ ಪತನವಾಗಿತ್ತು. ಇದು ಭಾರತದ ಕನಿಷ್ಠ ಮೊತ್ತವಾಗಿದೆ. ಈ ಮೊತ್ತಕ್ಕಿಂತ ಅಧಿಕ ರನ್‌ ಬಾರಿಸಿದ ಕಾರಣ ಅಂದಿನ ಘಟನೆಯನ್ನು ಮುಂದಿಟ್ಟು ವಾನ್‌ ಭಾರತ ತಂಡವನ್ನು ಟ್ರೋಲ್‌ ಮಾಡಿದ್ದಾರೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಬೇಗನೆ ಆರಂಭಗೊಂಡ ಪಂದ್ಯದ ಎರಡನೇ ದಿನ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ವಿಲಿಯಂ ಓರೂರ್ಕಿ (22ಕ್ಕೆ 4) ದಾಳಿಗೆ ಕುಸಿದು ಭೋಜನಾ ವಿರಾಮದ ಬಳಿಕ 31.2 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇದು ಟೀಮ್ ಇಂಡಿಯಾ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಪೇರಿಸಿದ 3ನೇ ಕನಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ Rishabh Pant: ಪಂತ್‌ ಗಾಯದ ಬಗ್ಗೆ ಅಪ್​ಡೇಟ್ ನೀಡಿದ ನಾಯಕ ರೋಹಿತ್

ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬೃಹತ್‌ ಮೊತ್ತ ಕಲೆಹಾಕಿ ಭಾರೀ ಮುನ್ನಡೆ ಸಾಧಿಸಿದೆ. ಭಾರತೀಯ ಮೂಲದವರೇ ಆಗಿರುವ ರಚಿನ್‌ ರವೀಂದ್ರ ಶತಕ ಬಾರಿಸಿ ಮಿಂಚಿದರೆ, ವೇಗಿ ಟಿಮ್‌ ಸೌಥಿ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಥಶತಕ ಬಾರಿಸಿದ್ದಾರೆ.

ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದ ಬಗ್ಗೆ, ಕ್ರಿಕೆಟ್ ವಿಶ್ಲೇಷಕ ಮತ್ತು ಮಾಜಿ ಟೀಮ್‌ ಇಂಡಿಯಾ ಕ್ರಿಕೆಟಿಗ ಸಂಜಯ್ ಮಂಜ್ರೇಕರ್(Sanjay Manjrekar) ಕಿಡಿ ಕಾರಿದ್ದಾರೆ. ʼವಿರಾಟ್ ಪ್ರತಿ ಬಾಲ್‌ಗೆ ಫ್ರಂಟ್ ಫೂಟ್‌ನಲ್ಲಿ ಆಡಲು ಹೋಗಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ನಾನು ಈ ಹಿಂದೆ ಹಲವು ಬಾರಿ ಹೇಳಿದ್ದೆʼ ಎಂದು ಹೇಳುವ ಮೂಲಕ ಕೊಹ್ಲಿ ಕಳಪೆ ಪ್ರದರ್ಶನವನ್ನು ಟೀಕಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಒಟ್ಟು ಐದು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ನಿರ್ಗಮಿಸಿದ್ದರು.