ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs SA) ಅಕ್ಷರ್ ಪಟೇಲ್‌ಗೆ ಕೇವಲ ಒಂದೇ ಒಂದು ಓವರ್ ನೀಡಲು ಕಾರಣವೇನೆಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ತಂಡದಲ್ಲಿ ಅಕ್ಷರ್ ಪಟೇಲ್ ಅವರ ಪಾತ್ರವೇನೆಂದು ನಾಯಕ ಸ್ಪಷ್ಟತೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಭಾನುವಾರ ಮೆಬೇಕದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 125 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ, ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ನಲುಗಿ ಒಂದು ಹಂತದಲ್ಲಿ 86 ರನ್‌ಗಳಿಗೆ 7ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಆವೇಶ ಖಾನ್ ಹಾಗೂ ಅರ್ಷದೀಪ್ ಸಿಂಗ್ ದುಬಾರಿಯಾಗಿದ್ದರು. ಅಲ್ಲದೆ ಅಕ್ಷರ್ ಪಟೇಲ್‌ಗೆ ನಾಯಕ ಸೂರ್ಯಕುಮಾರ್ ಯಾದವ್ ಕೇವಲ ಒಂದೇ ಒಂದು ಓವರ್ ಬೌಲ್ ಮಾಡಲು ಅವಕಾಶ ನೀಡಿದ್ದರು. ನಾಯಕನ ಈ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ, ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ನಿರ್ವಹಿಸಿದ ಹಾದಿಯನ್ನು ಪ್ರಶ್ನೆ ಮಾಡಿದ್ದಾರೆ. ಸ್ಪಿನ್ ಸ್ನೇಹಿ ವಿಕೆಟ್‌ನಲ್ಲಿ ಅಕ್ಷರ್‌ಗೆ ಕೇವಲ ಒಂದೇ ಒಂದು ಓವರ್ ನೀಡಿದ್ದೇಕೆಂದು ಸ್ಪಷ್ಟತೆ ಕೇಳಿದ್ದಾರೆ.
“ಅಕ್ಷರ್ ಪಟೇಲ್ ಅವರೊಂದಿಗೆ ನಾವು ಏನು ಮಾಡಿದ್ದೇವೆ? ಅವರನ್ನು ನೀವು ಏಕೆ ಆಡಿಸಿದ್ದೀರಿ? ಇದರ ಬಗ್ಗೆ ಸ್ವಲ್ಪ ಸ್ಪಷ್ಟತೆಯನ್ನು ನೀಡಿ. ಕಿಂಗ್ಸ್‌ಮೀಡ್‌ನಲ್ಲಿ ಅಕ್ಷರ್ ಪಟೇಲ್ ಬೌಲ್ ಮಾಡಿದ್ದು ಕೇವಲ ಒಂದು ಓವರ್ ಮಾತ್ರ ಹಾಗೂ ಎರಡನೇ ಪಂದ್ಯದಲ್ಲಿಯೂ ಕೂಡ ಅವರು ಕೇವಲ ಒಂದೇ ಒಂದು ಓವರ್ ಬೌಲ್ ಮಾಡಿದ್ದರು. ಭಾರತ ಪಡೆದಿದ್ದ 7 ವಿಕೆಟ್‌ಗಳ ಪೈಕಿ ಸ್ಪಿನ್ನರ್‌ಗಳು ಪಡೆದಿದ್ದು 6 ವಿಕೆಟ್‌ಗಳು. ಆದರೆ, ಅಕ್ಷರ್ ಪಟೇಲ್ ಬೌಲ್ ಮಾಡಿದ್ದು ಒಂದೇ ಓವರ್,” ಎಂದು ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
“ನನಗೆ ಅನಿಸಿದ ಹಾಗೆ ಅಕ್ಷರ್ ಪಟೇಲ್ ಸರಿಯಾಗಿ ಬಳಸಿಕೊಳ್ಳದ ಸಂಪನ್ಮೂಲವಾಗಿದ್ದಾರೆ. ನಾವು ಮೂವರು ಸ್ಪಿನ್ನರ್‌ಗಳನ್ನು ಆಡಿಸಿದ್ದೇವೆ. ಆದರೆ, ಅವರನ್ನು ಸರಿಯಾಗಿ ಬಳಿಸಿಕೊಂಡಿಲ್ಲ. ಬ್ಯಾಟಿಂಗ್ ವೈಫಲ್ಯದ ಬಗ್ಗೆ ನಾನು ಜಾಸ್ತಿ ಯೋಚನೆ ಮಾಡಿಲ್ಲ. ಆದರೆ, ಅಕ್ಷರ್ ಪಟೇಲ್‌ಗೆ ಸ್ಪೆಲ್ ಪೂರ್ಣಗೊಳಿಸಲು ಅವಕಾಶ ನೀಡದೆ ಇರುವುದು ಸೂರ್ಯ ಮಾಡಿದ ದೊಡ್ಡ ತಪ್ಪು,” ಎಂದು ಮಾಜಿ ಆರಂಭಿಕ ತಿಳಿಸಿದ್ದಾರೆ.
“ಟ್ರಿಸ್ಟನ್ ಸ್ಟಬ್ಸ್ ಅವರು ತಮ್ಮ ಇನಿಂಗ್ಸ್‌ನ ಆರಂಭದಲ್ಲಿ ಸ್ಪಿನ್ನರ್‌ಗಳಿಗೆ ತಿಣುಕಾಡುತ್ತಿದ್ದರು. ಈ ವೇಳೆ ಅಕ್ಷರ್ ಪಟೇಲ್‌ಗೆ ಬೌಲ್ ಮಾಡಿದ್ದರೆ ಸ್ಟಬ್ಸ್ ಅವರನ್ನು ಕಟ್ಟಿ ಹಾಕಬಹುದಿತ್ತು,” ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಓದಿ:IND vs SA: ಜಿತೇಶ್ ಶರ್ಮಾ ಇನ್? 3ನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!