ರಾಜ್ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ರವೀಂದ್ರ ಜಡೇಜಾ ಮತ್ತು ಚೇತೇಶ್ವರ ಪೂಜಾರ ಅವರಿಗೆ ಗೌರವ ಸನ್ಮಾನ ಮಾಡಲಿದೆ.
ಭಾರತ ಕ್ರಿಕೆಟ್‌ಗೆ ನೀಡಿದ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಎಸ್ಸಿಎ ಅಧ್ಯಕ್ಷ ಜಯದೇವ್ ಶಾ ಹೇಳಿದ್ದಾರೆ.
ಫೆ.14 ರಂದು ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನ ಹೊಸ ಹೆಸರನ್ನು ಅನಾವರಣಗೊಳಿಸುವ ಸಮಾರಂಭದಲ್ಲಿ ಜಡೇಜಾ ಮತ್ತು ಪೂಜಾರ ಅವರನ್ನು ಗೌರವಿಸಲಾಗುದು ಎಂದು ಜಯದೇವ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೂಜಾರ ಅವರು ಎಲೈಟ್ 100-ಟೆಸ್ಟ್ ಕ್ಲಬ್‌ಗೆ ಪ್ರವೇಶಿಸಿದ ಕೇವಲ ಹದಿಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಜಡೇಜಾ ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಭಾರತದ ಮ್ಯಾಚ್ ವಿನ್ನರ್ ಮತ್ತು ಪ್ರಸ್ತುತ ಐಸಿಸಿ ಟೆಸ್ಟ್ ಆಲ್-ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದ ಹೆಸರು ನಾಮಕರಣವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಫೆಬ್ರವರಿ 14ರಂದು ಈ ಕ್ರೀಡಾಂಗಣಕ್ಕೆ ಬಿಸಿಸಿಐನ ಮಾಜಿ ಕಾರ್ಯದರ್ಶಿ, ಹಿರಿಯ ಕ್ರಿಕೆಟ್ ಆಡಳಿತಗಾರ ನಿರಂಜನ್ ಶಾ ಹೆಸರನ್ನು ಇಡಲಾಗುವುದು. 2013ರಲ್ಲಿ ಉದ್ಘಾಟನೆ ಗೊಂಡಿರುವ ಕ್ರೀಡಾಂಗಣದಲ್ಲಿ ಈ ವರೆಗೂ 2 ಟೆಸ್ಟ್, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.
ನಿರಂಜನ್ ಶಾ ಅವರು ಭಾರತ ತಂಡವನ್ನು ಪ್ರತಿನಿಧಿಸದಿದ್ದರೂ ದೇಶಿಯ ಕ್ರಿಕೆಟ್ನಲ್ಲಿ ಮತ್ತು ಬಿಸಿಸಿಐನಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಸೌರಾಷ್ಟ್ರ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಸ್ಟೇಡಿಯಂಗೆ ಇಡಲು ನಿರ್ಧರಿಸಲಾಗಿದೆ.