Saturday, 27th July 2024

ಕೊನೆ ಎಸೆತದಲ್ಲಿ ಸ್ಯಾಮ್ಸನ್‌ ಎಡವಟ್ಟು, ಗೆದ್ದ ಪಂಜಾಬ್‌

ಮುಂಬೈ: ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ರೋಚಕ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ನಾಲ್ಕು ರನ್ ಅಂತರದ ರೋಚಕ ಗೆಲುವು ಸಾಧಿಸಿದೆ.

ಪಂಜಾಬ್ ನೀಡಿದ 222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ, ನಾಯಕ ಸಂಜು ಸ್ಯಾಮ್ಸನ್ (119) ಶತಕದ ಹೊರತಾ ಗಿಯೂ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಸ್ಯಾಮ್ಸನ್ ಏಕಾಂಗಿ ಹೋರಾಟ ವ್ಯರ್ಥವೆನಿಸಿತ್ತು. ಹಾಗಿದ್ದರೂ ನಾಯಕರಾಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಬಾರಿಸಿದ ಹಿರಿಮೆಗೆ ಪಾತ್ರವಾದರು. ಅಂತಿಮ ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ ಐದು ರನ್‌ಗಳ ಅಗತ್ಯವಿತ್ತು. ಆದರೆ ಸಂಜು ಔಟ್ ಆಗುವುದ ರೊಂದಿಗೆ ರಾಜಸ್ಥಾನ ಗೆಲುವಿನ ಕನಸು ಕಮರಿ ಹೋಯಿತು.

ಈ ಮೊದಲು ನಾಯಕ ಕೆಎಲ್ ರಾಹುಲ್ (91) ಹಾಗೂ ದೀಪಕ್ ಹೂಡಾ (64) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವು 221 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಹಿಂಬಾಲಿಸಿದ ರಾಜಸ್ಥಾನ ಆರಂಭ ಉತ್ತಮವಾಗಿರಲಿಲ್ಲ.

ಬೆನ್ ಸ್ಟೋಕ್ಸ್ (0) ಅವರನ್ನು ಖಾತೆ ತೆರೆಯುವ ಮುನ್ನವೇ ಓಟಾದರು. ಮನನ್ ಮೋಹ್ರಾ (12) ನಿರೀಕ್ಷೆ ತಲುಪಲಿಲ್ಲ. ಈ ಹಂತದಲ್ಲಿ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ (25), ಆರ್‌ಆರ್ ಪಾಳೇಯದಲ್ಲಿ ನಿರೀಕ್ಷೆ ಮೂಡಿಸಿದರು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಬಟ್ಲರ್ ಔಟ್ ಆಗುವುದರೊಂದಿಗೆ ರಾಜಸ್ಥಾನ ಮಗದೊಮ್ಮೆ ಹಿನ್ನೆಡೆಗೊಳಗಾಯಿತು. 13 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿಗಳಿಂದ 25 ರನ್ ಗಳಿಸಿದರು.

ಎರಡು ಜೀವದಾನಗಳ ಪ್ರಯೋಜನ ಪಡೆದ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ ಮುಂದುವರಿಸಿದರು. ಅಂತಿಮ 10 ಓವರ್‌ಗಳಲ್ಲಿ ರಾಜಸ್ಥಾನ ಗೆಲುವಿಗೆ 127 ರನ್‌ಗಳ ಅವಶ್ಯಕತೆಯಿತ್ತು. ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರು. ಈ ಹಂತದಲ್ಲಿ ಜೊತೆಗೂಡಿದ ರಿಯಾನ್ ಪರಾಗ್ ಜೊತೆಗೂಡಿದ ಸಂಜು ಸ್ಯಾಮನ್ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.

ಈ ಜೋಡಿ 19 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ಪಂದ್ಯದಲ್ಲಿ ರಾಜಸ್ಥಾನ ತಂಡವು ತಿರುಗೇಟು ನೀಡಲು ನೆರವಾದರು. ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಪರಾಗ್ ಹೊರದಬ್ಬಿದ ಮೊಹಮ್ಮದ್ ಶಮಿ ಪಂಜಾಬ್‌ಗೆ ಪಂದ್ಯದಲ್ಲಿ ಪುನರಾಗಮನ ಮಾಡಲು ನೆರವಾದರು. 11 ಎಸೆತಗಳಲ್ಲಿ ಪರಾಗ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು.

ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸುವ ವಿಫಲವಾಗುವುದರೊಂದಿಗೆ ರಾಜಸ್ಥಾನ ಹೋರಾಟವು ಅಂತ್ಯಗೊಂಡಿತ್ತು. ಅಲ್ಲದೆ ಏಳು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಮೂಲಕ ನಾಲ್ಕು ರನ್ ಅಂತರದ ಸೋಲಿಗೆ ಶರಣಾಯಿತು.

63 ಎಸೆತಗಳನ್ನು ಎದುರಿಸಿದ ಸಂಜು 12 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 119 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಸಂಜು ಬ್ಯಾಟ್‌ನಿಂದ ಸಿಡಿದ ಮೂರನೇ ಶತಕವಾಗಿದೆ.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದೇ ಮೊದಲ ಬಾರಿ ಐಪಿಎಲ್‌ಗೆ ಆಯ್ಕೆಯಾಗಿರುವ ಸೌರಾಷ್ಟ್ರದ ಚೇತನ್ ಸಕರಿಯ ಮೊದಲ ಪಂದ್ಯದಲ್ಲೇ ಅಂತಿಮ 11ರಲ್ಲಿ ಸ್ಥಾನ ಗಿಟ್ಟಿಸಿ ಕೊಂಡರು.

ರಾಹುಲ್ ಮತ್ತು ಕ್ರಿಸ್ ಗೇಲ್ ಜೊತೆಯಾಟ ಕಳೆಕಟ್ಟಿತು. ಗೇಲ್‌ ಐದನೇ ಓವರ್‌ನಲ್ಲಿ ಮುಸ್ತಫಿಜುರ್ ರಹಮಾನ್ ಅವರನ್ನು ಬೌಂಡರಿಗೆ ಅಟ್ಟಿ ಆಕ್ರಮಣಕಾರಿ ಆಟಕ್ಕೆ ಕುದುರಿಕೊಂಡರು. ಕ್ರಿಸ್ ಮೊರಿಸ್‌, ಶ್ರೇಯಸ್ ಗೋಪಾಲ್ ಮತ್ತು ಬೆನ್ ಸ್ಟೋಕ್ಸ್ ಎಸೆತಗಳಲ್ಲಿ ಬೌಂಡರಿಗಳು ಹರಿದುಬಂದವು.

ಪಂದ್ಯಶ್ರೇಷ್ಠ: ಸಂಜೂ ಸ್ಯಾಮ್ಸನ್‌

Leave a Reply

Your email address will not be published. Required fields are marked *

error: Content is protected !!