ಕೆ.ಎಲ್ ರಾಹುಲ್ ಜನ್ಮದಿನದಂದೇ ಪುತ್ರಿಯ ಹೆಸರು ಬಹಿರಂಗ
Evaarah Vipula Rahul: ರಾಹುಲ್ ದಂಪತಿಗಳ ಜಂಟಿ ಪೋಸ್ಟ್ ಗೆ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಹೃದಯದ ಎಮೋಜಿ ಹಾಕಿ ಸಂತಸ ವ್ಯಕ್ತಪಡಿಸಿದ್ದರೆ. ಡೆಲ್ಲಿ ಕ್ಯಾಪಿಟಲ್ಸ್ ಸೇರಿ ಹಲವು ಹಾಲಿ ಮತ್ತು ಮಾಜಿ ಆಟಗಾರರು ರಾಹುಲ್ ದಂಪತಿಗೆ ಶುಭ ಕೋರಿದ್ದಾರೆ. ಮಾರ್ಚ್ 24 ರಂದು ಅತಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ತಮ್ಮ ಮೊದಲ ಮಗುವಾದ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.


ಮುಂಬಯಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರಿಗೆ ಇಂದು(ಶುಕ್ರವಾರ) 33ನೇ ಹುಟ್ಟುಹಬ್ಬದ ಸಂಭ್ರಮ. ಇದೇ ಶುಭ ದಿನದಂದು ಅವರ ಪತ್ನಿ ಅಥಿಯಾ ಶೆಟ್ಟಿ(Athiya Shetty) ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮಗಳಿಗೆ ಇವಾರಾ ವಿಪುಲಾ ರಾಹುಲ್(Evaarah Vipula Rahul) ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಥಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಈ ಹೆಸರಿನ ಅರ್ಥ ಏನೆಂಬುದನ್ನು ಕೂಡ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅಥಿಯಾ ಶೆಟ್ಟಿ, 'ಇವಾರಾ'( ಸಂಸ್ಕೃತ ಮೂಲದ ಪದ) ಎಂದರೆ ದೇವರ ಉಡುಗೊರೆ. 'ವಿಪುಲಾ'(ಸುನೀಲ್ ಶೆಟ್ಟಿಯ ತಾಯಿ) ಅಜ್ಜಿಯ ಗೌರವಾರ್ಥವಾಗಿ ಇಡಲಾಗಿದೆ. ಮತ್ತು ಅವಳ ಹೆಸರಿನಲ್ಲಿರುವ ಕೊನೆಯ ಪದ ಅವಳ ತಂದೆ ಕೆ.ಎಲ್. ರಾಹುಲ್ ಅವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ.
ರಾಹುಲ್ ದಂಪತಿಗಳ ಜಂಟಿ ಪೋಸ್ಟ್ ಗೆ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಹೃದಯದ ಎಮೋಜಿ ಹಾಕಿ ಸಂತಸ ವ್ಯಕ್ತಪಡಿಸಿದ್ದರೆ. ಡೆಲ್ಲಿ ಕ್ಯಾಪಿಟಲ್ಸ್ ಸೇರಿ ಹಲವು ಹಾಲಿ ಮತ್ತು ಮಾಜಿ ಆಟಗಾರರು ರಾಹುಲ್ ದಂಪತಿಗೆ ಶುಭ ಕೋರಿದ್ದಾರೆ. ಮಾರ್ಚ್ 24 ರಂದು ಅತಿಯಾ ಶೆಟ್ಟಿ ಮತ್ತು ಕೆ.ಎಲ್. ರಾಹುಲ್ ತಮ್ಮ ಮೊದಲ ಮಗುವಾದ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. 2023ರ ಜನವರಿ 23ರಂದು ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವಿವಾಹವಾಗಿತ್ತು.
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ರಾಹುಲ್ ಅತ್ಯತ್ತಮ ಪ್ರದರ್ಶದ ನೀಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಮೊದಲ ಮಗುವಿನ ಜನನದ ಕಾರಣ ರಾಹುಲ್ ಡೆಲ್ಲಿ ತಂಡದ ಮೊದಲ ಪಂದ್ಯಕ್ಕೆ ಗೈರಾಗಿದ್ದರು.
2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಎರಡು ವರ್ಷಗಳ ನಂತರ ಏಕದಿನ ಕ್ರಿಕೆಟ್ ಗೆ ಕಾಲಿಡುವ ಅವಕಾಶ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಲವು ಬಾರಿ ಫಾರ್ಮ್ ಕಳೆದುಕೊಂಡಿದ್ದಾರೆ. ಗಾಯಗೊಂಡಿದ್ದಾರೆ, ಘಾಸಿಯಾಗಿದ್ದಾರೆ. ಆದರೂ ಪ್ರತಿ ಬಾರಿಯೂ ಪುಟಿದೆದ್ದು ನಿಂತಿದ್ದಾರೆ. ತಮ್ಮೆದುರಿಗೆ ಬಂದ ಸ್ಪರ್ಧೆಗಳನ್ನು ದಿಟ್ಟವಾಗಿ ಎದುರಿಸಿ ಇಂದು ಸ್ಟಾರ್ ಆಟಗಾರನಾಗಿ ಮಿಂಚುತ್ತಿದ್ದಾರೆ.
ಆರಂಭಿಕ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದವರು ರಾಹುಲ್ ಆ ಬಳಿಕ ಮಧ್ಯಮ ಕ್ರಮಾಂಕ, ಫಿನಿಷರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. 3 ಮಾದರಿಗಳಲ್ಲಿಯೂ ಶತಕ ಹೊಡೆದ ಕೆಲವೇ ಕೆಲವು ಭಾರತೀಯ ಆಟಗಾರರ ಪೈಕಿ ರಾಹುಲ್ ಕೂಡ ಒಬ್ಬರು. ರನ್ ಗಳಿಕೆ, ಕೀಪಿಂಗ್ ಪ್ರದರ್ಶನ ಏನೇ ಇರಲಿ. ಶಾಂತಚಿತ್ತದಿಂದ ಸಾಧನೆ ಮಾಡುವ ಛಲ ಅವರದ್ದು.