Tuesday, 28th May 2024

ಇಂದು ಎರಡನೇ ಏಕದಿನ ಪಂದ್ಯ: ಸರಣಿ ಕೈವಶಕ್ಕೆ ಟೀಂ ಇಂಡಿಯಾ ಯತ್ನ

ಗೆಬೆಹಾ: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನೂ ಗೆದ್ದು ಭಾರತ ತಂಡ ಸರಣಿ ಕೈವಶ ಮಾಡಿ ಕೊಳ್ಳುವ ಉತ್ಸಾಹದಲ್ಲಿದೆ.

ರಜತ್ ಪಾಟೀದಾರ ಮತ್ತು ರಿಂಕು ಸಿಂಗ್ ಅವರು ತಂಡದಲ್ಲಿರುವ ಒಂದು ಬ್ಯಾಟಿಂಗ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ.

ಯುವ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಅವರ ಅಚ್ಚುಕಟ್ಟಾದ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ಮೊದಲ ಪಂದ್ಯ ವನ್ನು ಎಂಟು ವಿಕೆಟ್‌ಗಳಿಂದ ಜಯಿಸಿತ್ತು. 2022ರಲ್ಲಿ ಭಾರತ ತಂಡ ಇಲ್ಲಿ ಪ್ರವಾಸ ಮಾಡಿದ್ದಾಗ 0-3 ಅಂತರದಲ್ಲಿ ಸರಣಿ ಸೋತಿತ್ತು. ಆಗಲೂ ನಾಯಕರಾಗಿದ್ದ ರಾಹುಲ್ ಇದನ್ನು ಮರೆತಿರಲಿಕ್ಕಿಲ್ಲ.

ಶ್ರೇಯಸ್‌ ಅಯ್ಯರ್‌ ಅವರು ಟೆಸ್ಟ್‌ ತಂಡದ ಜೊತೆ ಸೇರುವುದರಿಂದ ಸರಣಿಯ ಉಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಮೀಸಲು ಆಟಗಾರರಲ್ಲಿ ಒಬ್ಬರಿಗೆ ಅವಕಾಶ ದೊರೆಯಲಿದೆ. ಟೆಸ್ಟ್ ಸರಣಿ ‘ಬಾಕ್ಸಿಂಗ್ ಡೇ’ (ಡಿ. 26) ದಿನ ಆರಂಭವಾಗಲಿದೆ.

‌ಪಾಟೀದಾರ್ ನಾಲ್ಕನೇ ಕ್ರಮಾಂಕದಲ್ಲಿ ಪರಿಣತ ಆಟಗಾರ. ಮಧ್ಯಪ್ರದೇಶ ತಂಡಕ್ಕೂ ಅವರು ಇದೇ ಕ್ರಮಾಂಕದಲ್ಲಿ ಆಡುವವರು. ಫಿನಿಷರ್ ಪಾತ್ರ ವಹಿಸುವ ರಿಂಕು ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. 2022ರಲ್ಲೇ ಅವರು ಭಾರತ ತಂಡಕ್ಕೆ ಆಡಿದ್ದರೂ ನಂತರ ಗಾಯಾಳಾಗಿ, ಹಿಮ್ಮಡಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು.

ಈಗ ಆರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅವರು ಆಡುತ್ತಿದ್ದಾರೆ. ಆದರೆ ಕೀಪರ್ ಆಗಿದ್ದರೂ, ರಾಹುಲ್ ಆ ಹೊಣೆ ವಹಿಸುವ ಕಾರಣ ಸ್ಯಾಮ್ಸನ್‌ ಪರಿಣತ ಬ್ಯಾಟರ್‌ ಪಾತ್ರ ವಹಿಸಬಹುದು.

ಆರಂಭ ಆಟಗಾರ ಸಾಯಿ ಸುದರ್ಶನ್, ಆಕರ್ಷಕ ಅರ್ಧ ಶತಕದೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿ ಕಾಕ್‌ ಅವರ ಅನುಪಸ್ಥಿತಿ ಕಾಡುತ್ತಿದೆ. ಎರಡನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿ ಈಗ ದಕ್ಷಿಣ ಆಫ್ರಿಕಾ ತಂಡವಿದೆ.

Leave a Reply

Your email address will not be published. Required fields are marked *

error: Content is protected !!