Friday, 13th December 2024

ವಿರಾಟ್ ಕೊಹ್ಲಿ ಮುಂಬೈಗೆ ವಾಪಸ್..!

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನ ಮೊದಲ ಅಭ್ಯಾಸ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಎರಡನೇ ಅಭ್ಯಾಸ ಪಂದ್ಯಕ್ಕೆ ಸಿದ್ದತೆ ನಡೆಸುತ್ತಿದೆ.

ಮಂಗಳವಾರ ನಡೆಯಲಿರುವ ನೆದರ್ಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ತಿರುವನಂತಪುರಂಗೆ ಬಂದಿಳಿದಿದೆ. ಆದರೆ ವಿರಾಟ್ ಕೊಹ್ಲಿ ಅವರು ತಂಡದೊಂದಿಗೆ ಆಗಮಿಸಿಲ್ಲ.

ಕೊಹ್ಲಿ ಅವರು ಟೀಂ ಮ್ಯಾನೇಜ್ ಮೆಂಟ್ ಬಳಿ ಅನುಮತಿ ಪಡೆದು ವೈಯಕ್ತಿಕ ತುರ್ತು ಕಾರಣಗಳಿಂದ ಮುಂಬೈಗೆ ತೆರಳಿದ್ದಾರೆ. ಗುವಾಹಟಿಯಿಂದ ನೇರ ಮುಂಬೈಗೆ ಹೋಗಿದ್ದು, ಸೋಮವಾರ ತಿರುವನಂತಪುರದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ತಂಡದ ಇತರ ಸದಸ್ಯರು ಭಾನುವಾರ ಸಂಜೆ ವಿಶೇಷ ವಿಮಾನದಲ್ಲಿ ನಾಲ್ಕು ಗಂಟೆಗಳ ಹಾರಾಟದ ನಂತರ ಕೇರಳದ ರಾಜಧಾನಿಯಲ್ಲಿ ಬಂದಿಳಿದರು.

ವಿರಾಟ್ ಕೊಹ್ಲಿ ಮತ್ತು ಪತ್ನಿ ನಟಿ ಅನುಷ್ಕಾ ಶರ್ಮಾ ಅವರು ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವರದಿಗಳ ನಡುವೆ ವಿರಾಟ್ ಮನೆಗೆ ತೆರಳಿದ್ದಾರೆ.

ಗುವಾಗಟಿಯಲ್ಲಿ ಇಂಗ್ಲೆಂಡ್ ವಿರುದ್ಧ ರೋಹಿತ್ ಬಳಗ ಅಭ್ಯಾಸ ನಡೆಸಬೇಕಿತ್ತು. ಆದರೆ ನಿರಂತರ ಸುರಿದ ಮಳೆಯ ಕಾರಣದಿಂದ ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿತ್ತು.