Thursday, 19th September 2024

Yograj Sing: ಧೋನಿ ವಿರುದ್ಧ ವಾಗ್ದಾಳಿ ನಡೆಸಿ ಮಗನಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ ಮಾಜಿ ಆಟಗಾರ

Yograj Singh

ಮುಂಬಯಿ: ಟೀಮ್‌ ಇಂಡಿಯಾದ ಮಾಜಿ ಸ್ಟಾರ್‌ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಮತ್ತೆ ಮಹೇಂದ್ರ ಸಿಂಗ್‌ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧೋನಿ ಒಂದು ಬಾರಿ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳಲಿ, ನನ್ನ ಮಗನ ಕ್ರಿಕೆಟ್‌ ಕೆರಿಯರ್‌ ಹಾಳು ಮಾಡಿದ್ದೇ ಧೋನಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಯುವರಾಜ್‌ಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಗನಿಗೆ ಅನ್ಯಾಯವಾದಾಗಲೆಲ್ಲ ಯೋಗರಾಜ್‌ ಎಲ್ಲರ ಮೇಲೆರಗಿ ಹೋಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಬಹಿರಂಗವಾಗಿಯೇ  ಬಿಸಿಸಿಐ, ಧೋನಿ ವಿರುದ್ಧ ನೇರ ಆರೋಪ ಮಾಡಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದರು. ಯೋಗರಾಜ್‌ ಸಿಂಗ್‌ ಕೂಡ ಭಾರತ ತಂಡದ ಮಾಜಿ ಆಟಗಾರನಾಗಿದ್ದಾರೆ. ಭಾರತವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದ ಅವರು ಒಂದು ಕಾಲದಲ್ಲಿ ಕಪಿಲ್‌ದೇವ್‌ ಅವರ ಬೌಲಿಂಗ್‌ ಜತೆಗಾರನಾಗಿದ್ದರು. ಜತೆಗೆ ಉತ್ತಮ ಕ್ಷೇತ್ರರಕ್ಷಕನೂ ಆಗಿದ್ದರು. ಆದರೆ, ಮಗನ ವಿಚಾರದಲ್ಲಿ ಮಾತ್ರ ಈಗಲೂ ಎಲ್ಲರ ಮೇಲೆ ಕಿಡಿ ಕಾರುತ್ತಲೇ ಇದ್ದಾರೆ.

https://x.com/riseup_pant17/status/1830118757202632783

ಜೀ ಸ್ವಿಚ್‌ನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯುವಿ ತಂದೆ ಯೋಗರಾಜ್‌, ನನ್ನ ಮಗ ಯುವರಾಜ್‌ ಸಿಂಗ್‌ಗೆ ಒಂದೊಲ್ಲೆ ವಿದಾಯ ಪಂದ್ಯವನ್ನು ಕೂಡ ಆಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಅಂದು ನಾಯಕನಾಗಿದ್ದ ಧೋನಿ. 2011ರ ವಿಶ್ವಕಪ್‌ ವೇಳೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಕೂಡ ಆತ ದೇಶಕ್ಕಾಗಿ ಛಲ ಬಿಡದೆ ಆಡಿದ್ದ. ಫೈನಲ್‌ ಪಂದ್ಯದ ಹಿಂದಿನ ದಿನ ರಕ್ತ ಕಾರಿದ್ದು ನೀವೆಲ್ಲ ನೋಡಿದ್ದೀರಿ. ಅಂತಹ ಆಟಗಾರನ ಕ್ರಿಕೆಟ್‌ ವೃತ್ತಿಜೀವನವನ್ನು ಹಾಳು ಮಾಡಿದ್ದು ಧೋನಿ. ಹೀಗಾಗಿ ನಾನು ಧೋನಿಯನ್ನು ಎಂದಿಗೂ ಎಂದಿಗೂ ಕ್ಷಮಿಸುವುದಿಲ್ಲ. ಧೋನಿ ಒಂದು ಬಾರಿ ತನ್ನ ಮುಖವನ್ನು ಕನ್ನಡಿಯಲ್ಲಿ ತಾನೇ ನೋಡಿಕೊಳ್ಳಲಿ. ಎಂದು ಮತ್ತೊಮ್ಮೆ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆಯೂ ಕೂಡ ಧೋನಿ ವಿರುದ್ಧ ಯೋಗರಾಜ್‌ ಕಿಡಿಕಾರಿದ್ದರು.

ಟಿ20 ಮತ್ತು ಏಕದಿನ ವಿಶ್ವಕಪ್‌ ಟ್ರೋಫಿ ಗೆಲ್ಲುವಲ್ಲಿ ನನ್ನ ಮಗ ಯುವರಾಜ್‌ ಪ್ರಮುಖ ಪಾತ್ರವಹಿಸಿದ್ದ. ಭಾರತ ತಂಡಕ್ಕೆ ಆತ ನೀಡಿದ ಕೊಡುಗೆಯನ್ನು ಪರಿಗಣಿಸಿ ಆತನಿಗೆ ಇನ್ನಾದರೂ ಭಾರತ ರತ್ನ ನೀಡಬೇಕು ಮನವು ಮಾಡಿದರು. ಭಾರತ ಪರ ಒಟ್ಟು 402 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್, 11,178 ರನ್ ಗಳನ್ನು ಗಳಿಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಒಟ್ಟು 17 ಶತಕ ಹಾಗೂ 71 ಅರ್ಧಶತಕ ಬಾರಿಸಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.