ಚನ್ನಪಟ್ಟಣ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು. ಚನ್ನಪಟ್ಟಣ ಉಪಚುನಾವಣೆಯ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಶುಕ್ರವಾರ ಚಕ್ಕೆರೆ, ಹೊನ್ನನಾಯಕನಹಳ್ಳಿ ಮತ್ತಿತರ ಚುನಾವಣೆ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ದೇವೇಗೌಡರು ನಿನ್ನೆ ಚುನಾವಣೆ ಪ್ರಚಾರ ಮಾಡುತ್ತಾ ಡಿ.ಕೆ. ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆ ದೊಡ್ಡಆಲಹಳ್ಳಿ ಕೆಂಪೇಗೌಡರಿಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು.
ಈ ಸುದ್ದಿಯನ್ನೂ ಓದಿ | Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ
ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ನಿಮ್ಮನ್ನು ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ನಾನು ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ನೀವು ಹಾಗೂ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ಕುಮಾರಸ್ವಾಮಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ?
ಯೋಗೇಶ್ವರ್ ಅವರು 4-5 ಕೋಟಿ ರೂ. ವೆಚ್ಚ ಮಾಡಿ ಬಿಸಿಲಮ್ಮ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಮಹದೇಶ್ವರ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಅದನ್ನು ನೋಡಿ ಸಂತೋಷವಾಗಿದೆ. ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದೇವಾಲಯ ಅಭಿವೃದ್ಧಿ ಮಾಡಿದ್ದಾರಾ? ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರಾ? ಇಲ್ಲವಾದರೆ, ಮತ್ತೆ ಯಾಕೆ ನೀವು ಮತ ಕೇಳುತ್ತಿದ್ದೀರಿ? ನಿಮಗೆ ಹಣವೇ ಮುಖ್ಯವೇ? ನೀವು ಒಂದೊಂದು ಮತಕ್ಕೆ 2-3 ಸಾವಿರ ಹಣ ನೀಡಬಹುದು. ಆದರೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ. ಇದಕ್ಕಾಗಿ 56 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಅವರೇ ನೀವು ಹಾಗೂ ನಿಮ್ಮ ಧರ್ಮಪತ್ನಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದವರು. ನೀವು ಕೋವಿಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದೀರಾ? ಡಿ.ಕೆ. ಸುರೇಶ್ ಜನರಿಗೆ ನೆರವಾಗಲಿಲ್ಲವೇ? ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಲಿಲ್ಲವೇ? ಇಂತಹ ಒಂದು ಕೆಲಸವನ್ನು ನೀವು ಮಾಡಲಿಲ್ಲ. ಮನೆಯಲ್ಲಿ ಅವಿತು ಕುಳಿತ್ತಿದ್ರಿ. ಯಾರಿಗೂ ಸಹಾಯ ಮಾಡಲಿಲ್ಲ. ಕಷ್ಟಕ್ಕೆ ಆಗಲಿಲ್ಲವಾದರೆ ಮತ್ತೆ ಯಾವಾಗ ಜನರ ಜತೆ ನಿಲ್ಲುತ್ತೀರಾ? ಎಂದು ಪ್ರಶ್ನಿಸಿದರು.
ಕಾರ್ಯಕರ್ತರ ಪರಿಸ್ಥಿತಿ ಏನು?
ನನ್ನ ಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಬಹಳ ಸಂತೋಷ, ನೀವು ನಿಮ್ಮ ಮೊಮ್ಮಗನ ಪಟ್ಟಾಭಿಷೇಕ ಮಾಡಿ. ಆದರೆ ನಿಮಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು ಎಂದು ನಿಮ್ಮನ್ನು ಕೇಳಲು ಬಯಸುತ್ತೇನೆ. ಕುಮಾರಸ್ವಾಮಿ ಅವರು ಕ್ಷೇತ್ರದ ಯಾವುದಾದರೂ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ಕೊಟ್ಟಿದ್ದಾರಾ? ಇಲ್ಲ. ಈ ಕ್ಷೇತ್ರದ ಬಡವರನ್ನು ಮೇಲೆತ್ತಲು ನಾವಿದ್ದೇವೆ, ಯೋಗೇಶ್ವರ್ ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜನರ ಕಷ್ಟಕ್ಕೆ ಸ್ಪಂದಿಸಿದಕ್ಕೆ 1.23 ಲಕ್ಷ ಮತಗಳಿಂದ ಗೆಲ್ಲಿಸಿದರು
ನೀವು ಕುಮಾರಸ್ವಾಮಿ ಅವರನ್ನು 2 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಖಾಲಿ ಮಾಡಿದ ನಂತರ ನಾನು ಜನರ ಮನೆಬಾಗಿಲಿಗೆ ಸರ್ಕಾರ ಹಾಗೂ ಅಧಿಕಾರಿಗಳನ್ನು ಕರೆದುಕೊಂಡು ಬಂದು ಅವರ ಕಷ್ಟ ಆಲಿಸಿದೆ. 26 ಸಾವಿರ ಜನ ಮನೆ, ನಿವೇಶನ, ಸಾಲಸೌಲಭ್ಯ, ಪಿಂಚಣೆ, ರಸ್ತೆ, ನೀರಾವರಿ ಸೌಲಭ್ಯ ಸೇರಿದಂತೆ ತಮ್ಮ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ನಮಗೆ ಅರ್ಜಿ ಸಲ್ಲಿಸಿದಿರಿ.
ಶಾಸಕರು ಹಾಗೂ ಸಂಸದರು ನಮ್ಮ ಕಷ್ಟಕ್ಕೆ ಸ್ಪಂದಿಸಿ ನಿಮ್ಮ ಸೇವೆ ಮಾಡುವ ಉದ್ದೇಶದಿಂದ ನೀವು ಅವರಿಗೆ ಮತ ಹಾಕುತ್ತೀರಿ. ಕಳೆದ ಎಂಟು ಚುನಾವಣೆಗಳಿಂದ ನಾನು ಸತತವಾಗಿ ಶಾಸಕನಾಗಿ ಗೆದ್ದಿದ್ದೇನೆ. ಕಳೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದು ಬಿಟ್ಟರೆ ಮತ್ತೆ ಕ್ಷೇತ್ರಕ್ಕೆ ಹೋಗಿ ಮತ ಕೇಳಲಿಲ್ಲ. ಆದರೂ ಕನಕಪುರದ ಜನ ನನನ್ನು 1.23 ಲಕ್ಷ ಮತಗಳ ಭಾರಿ ಅಂತರದಿಂದ ಗೆಲ್ಲಿಸಿದರು. ನಾನು ನಿರಂತರವಾಗಿ ಕ್ಷೇತ್ರದ ಜನರ ಜತೆ ಸಂಪರ್ಕ ಸಾಧಿಸಿ ಆ ಕ್ಷೇತ್ರದ ಸಮಸ್ಯೆಗಳನ್ನು ನಿರಂತರವಾಗಿ ಬಗೆಹರಿಸುತ್ತಾ ಬಂದೆ. ಹೀಗಾಗಿ ಅವರು ಮತ ಹಾಕಿದರು.
ಕುಮಾರಸ್ವಾಮಿ ಅವರು ಸಂಸದರಾಗಬೇಕು ಎಂದು ಈ ಕ್ಷೇತ್ರ ಬಿಟ್ಟು ಹೋದರು. ಈ ಕ್ಷೇತ್ರದಲ್ಲಿ ಇದುವರೆಗೂ ನಿಖಿಲ್ ಸ್ಪರ್ಧೆ ಮಾಡಿರಲಿಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಶಾಸಕರಾಗಿ ಹಾಗೂ ದೇವೇಗೌಡರು ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕುಮಾರಸ್ವಾಮಿ ಅವರು ಈ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಮಂತ್ರಿಯಾದ ನಂತರ ಮತ್ತೆ ನಿಮ್ಮ ಬಳಿ ಬಂದು ಈ ಭಾಗದಲ್ಲಿ ಕೈಗಾರಿಕೆ, ಕಾರ್ಖಾನೆ ಮಾಡುತ್ತೇವೆ, ನಿಮಗೆ ಉದ್ಯೋಗ ನೀಡುತ್ತೇವೆ ಎಂದು ಜನರಿಗೆ ಭರವಸೆ ನೀಡಬಹುದಿತ್ತು. ಆದರೆ ಆ ಕೆಲಸ ಮಾಡಲಿಲ್ಲ ಎಂದು ದೂರಿದರು.
ಕುಮಾರಸ್ವಾಮಿ ಕೈಗಾರಿಕೆ ಮಾಡುವುದಾದರೆ ಜಾಗ ನೀಡಲು ಸಿದ್ಧ
ನಾನು ಈ ಕ್ಷೇತ್ರದಲ್ಲಿ ಉದ್ಯೋಗ ಮೇಳೆ ನಡೆಸಿದ ಬಳಿಕ, ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಅದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾಕೆ ಮಾಡಲಿಲ್ಲ? ನಾವು ಕೈಗಾರಿಕೆ ಮಾಡಲು ಡಿ.ಕೆ. ಶಿವಕುಮಾರ್ ಜಮೀನು ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅವರು ಕೇಂದ್ರದ ಮಂತ್ರಿಯಾಗಿ ಕೇವಲ ಆರು ತಿಂಗಳಾಗಿದೆ. ಅವರು ಯಾವತ್ತೂ ಇಂತಹ ಕಡೆ ಕಾರ್ಖಾನೆ, ಕೈಗಾರಿಕೆ ಮಾಡುತ್ತೇವೆ ಎಂದು ಹೇಳಿಲ್ಲ. ಒಂದು ವೇಳೆ ಅವರು ಕೈಗಾರಿಕೆ, ಕಾರ್ಖಾನೆ ಮಾಡಲು ಅನುಮತಿ ನೀಡಿದರೆ, ಕೇತಗಾನಹಳ್ಳಿಯಲ್ಲಿ 200-300 ಎಕರೆ ಸೇರಿದಂತೆ ಇತರೆ ಕಡೆಗಳಲ್ಲಿ ಜಮೀನಿದ್ದು, ಅವುಗಳನ್ನು ನೀಡಲು ಸಿದ್ಧರಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಕೆಲಸಕ್ಕೆ ನಾವು ಎಂದಿಗೂ ಬೇಡ ಎನ್ನುವುದಿಲ್ಲ.
ಕುಮಾರಸ್ವಾಮಿ ಅವರೇ, ಸುಳ್ಳು ಹೇಳುವುದಕ್ಕೂ ಒಂದು ಇತಿಮಿತಿ ಇರಬೇಕು. ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಆರು ವರ್ಷ ಶಾಸಕರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಊರಿಗೆ ಎಂದಾದರೂ ಬಂದಿದ್ದಾರಾ? ನೀವು ದೇವರಾಜ ಅರಸು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಅವರ ಹೆಸರು ಕೇಳಿದ್ದೀರಿ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದೇವೇಗೌಡರೂ ಕೂಡ ಪ್ರಧಾನಮಂತ್ರಿಯಾಗಿದ್ದರು ಎಂದರು.
ಕಾಂಗ್ರೆಸ್ ಕೊಟ್ಟಂತಹ ಒಂದು ಯೋಜನೆ ಕೊಟ್ಟಿದ್ದಾರಾ?
ಅರಸು, ಎಸ್.ಎಂ ಕೃಷ್ಣ, ವಿರೇಂದ್ಪ ಪಾಟೀಲ್, ಸಿದ್ದರಾಮಯ್ಯ, ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದವರು. ಇವರ ಜತೆಗೆ ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಯೋಜನೆ ಕೊಟ್ಟರು. ಇಂದಿರಾ ಗಾಂಧಿ ಅವರು ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಯೋಜನೆ ಜಾರಿ, ನಿವೇಶನ, ವಸತಿ ನೀಡುವ ಯೋಜನೆ ತಂದರು. ವಿರೇಂದ್ರ ಪಾಟೀಲ್ ಅವರ ಕಾಲದಲ್ಲಿ ಬಗರ್ ಹುಕುಂ ಸಾಗುವಳಿ ಅವಕಾಶ ನೀಡಿದರು. ಬಂಗಾರಪ್ಪನವರ ಕಾಲದಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. ನಾನು ಇಂಧನ ಸಚಿವನಾಗಿದ್ದಾಗ ರೈತರಿಗೆ 6 ರಿಂದ 7 ಗಂಟೆಗೆ ವಿದ್ಯುತ್ ನೀಡುವುದನ್ನು ಏರಿಸಿದೆ. ಕೃಷ್ಣ ಅವರ ಕಾಲದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ, ಸ್ತ್ರೀಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ, ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡಿದರು,
ಸಿದ್ದರಾಮಯ್ಯ ಅವರು ತಮ್ಮ ಮೊದಲ ಸರ್ಕಾರದ ಅಧಿಯಲ್ಲಿ ಬಡವರ ಹೊಟ್ಟೆ ತುಂಬಿಸಲು ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ನೀಡಿದರು. ಈ ಬಾರಿ ಅಧಿಕಾರಕ್ಕೆ ಬರುವ ಮುನ್ನ ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತು. ಅಧಿಕಾರಕ್ಕೆ ಬಂದ ಕೂಡಲೇ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 2 ಸಾವಿರ ಆರ್ಥಿಕ ನೆರವು, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಹಾಗೂ ರೈತರ ಹಾಲಿನ ಪ್ರೋತ್ಸಾಹ ಬಾಕಿ ಹಣ ಶೀಘ್ರದಲ್ಲೇ ದೊರೆಯಲಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Tirupati Laddu row: ತಿರುಪತಿ ಲಡ್ಡು ವಿವಾದ; ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಯೋಗೇಶ್ವರ್ ಕೆರೆಗೆ ನೀರು ತುಂಬಿಸಿ ರೈತರಿಗೆ ನೆರವಾಗಿದ್ದಾರೆ. ಸತ್ತೇಗಾಲದಿಂದ ನೀರು ತರುವ ಯೋಜನೆ ಮಾಡುತ್ತಿದ್ದೇವೆ. ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ಮಾಡಿದ್ದಾರಾ ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಕೇಳಲು ಬಯಸುತ್ತೇನೆ. ಇಂತಹ ಕಾರ್ಯಕ್ರಮವನ್ನು ನಾವು ಕೊಟ್ಟಿದ್ದೇವೆ ಎಂದು ಅವರು ಹೇಳಿದರೆ ಈ ಕೂಡಲೇ ನಾನು ಈ ಚುನಾವಣಾ ಪ್ರಚಾರ ನಿಲ್ಲಿಸಿ ಇಲ್ಲಿಂದ ಹೊರಟುಹೋಗುತ್ತೇನೆ ಎಂದರು.
ಜೆಡಿಎಸ್ 19 ಕ್ಷೇತ್ರದಲ್ಲಿ ಗೆದ್ದಿತ್ತು, ಈಗ 18 ಸ್ಥಾನಕ್ಕೆ ಕುಸಿದಿದೆ. ಇಲ್ಲಿ ಐದು ಬಾರಿ ಶಾಸಕರಾಗಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಲು ಯೋಗೇಶ್ವರ್ ದಡ್ಡರೇ? ಈ ಕ್ಷೇತ್ರದ ಜನರ ಋಣ ತೀರಿಸಬೇಕು ಎಂದರೆ ಕಾಂಗ್ರೆಸ್ ಸರ್ಕಾರದ ಜತೆ ಕೈಜೋಡಿಸಬೇಕು. ಆಗ ಮಾತ್ರ ಜನರ ಬದುಕು ಬದಲಾವಣೆ ಮಾಡಲು ಸಾಧ್ಯ ಎಂದು ಅರಿತಿದ್ದಾರೆ. ನಾನು ಕೆಲವು ಬಾರಿ ಯೋಗೇಶ್ವರ್ ಅವರನ್ನು ಬೈದಿದ್ದೇನೆ, ತಿಳುವಳಿಕೆ ಹೇಳಿದ್ದೇನೆ. ಆದರೂ ಇದು ನಮ್ಮ ಕ್ಷೇತ್ರ, ನಮ್ಮ ಜನ ಇದ್ದಾರೆ. ನನ್ನ ಹೆಣ ದೊಡ್ಡಾಲಹಳ್ಳಿಯಲ್ಲಿ, ಯೋಗೇಶ್ವರ್ ಅವರ ಹೆಣ ಚಕ್ಕೆರೆಯಲ್ಲಿ ಹಾಕಲಾಗುವುದು. ಹಾಸನಕ್ಕೆ ಹೋಗುವುದಿಲ್ಲ. ನಮ್ಮ ಪಲ್ಲಕ್ಕಿ ಹಾಗೂ ಚಟ್ಟ ಹೊರುವುದು ಇಲ್ಲೇ ಎಂದು ಅವರು ಹೇಳಿದರು.
ನಮ್ಮಿಂದ ಸಾಧ್ಯವಾಗಿದ್ದು, ಕುಮಾರಸ್ವಾಮಿಯಿಂದ ಸಾಧ್ಯವಾಗಲಿಲ್ಲ ಯಾಕೆ?
ನಾನು ಇಂಧನ ಸಚಿವನಾಗಿದ್ದಾಗ 10 ಕಡೆಗಳಲ್ಲಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿದ್ದೇನೆ. ಪ್ರತಿ ಹಳ್ಳಿಯಲ್ಲಿ ಪ್ರತಿ ಇಬ್ಬರು ರೈತರಿಗೆ ಎಚ್‌ವಿಡಿ ಯೋಜನೆಯಡಿ ಟ್ರಾನ್ಸ್‌ಫಾರ್ಮರ್ಸ್ ಅಳವಡಿಸಿಕೊಟ್ಟಿದ್ದೇನೆ. ಈ ಕೆಲಸ ಕುಮಾರಸ್ವಾಮಿಯಿಂದ ಯಾಕೆ ಸಾಧ್ಯವಾಗಿಲ್ಲ? ಕುಮಾರಸ್ವಾಮಿ ಕ್ಷೇತ್ರದಲ್ಲಿ ಯಾರಿಗಾದರೂ ಒಬ್ಬರಿಗೆ ನಿವೇಶನ ಹಂಚಿದ್ದಾರಾ? ನಾವು ನಿವೇಶನ ನೀಡಲು ಬಂದಾಗ, ಜಿಲ್ಲಾಧಿಕಾರಿಗೆ ಕರೆ ಮಾಡಿ ನನ್ನ ಅವಧಿಯಲ್ಲಿ ಈ ಕೆಲಸ ಮಾಡಲು ಆಗಿಲ್ಲ, ಈಗ ಯಾಕೆ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ. ಕುಮಾರಣ್ಣ ನಿನಗೆ ಬಡವರ ಬಗ್ಗೆ ವಿಶ್ವಾಸ ಇರಲಿಲ್ಲ, ಅದಕ್ಕೆ ನೀನು ಮಾಡಲಿಲ್ಲ ಎಂದು ದೂರಿದರು.
ಮಹಿಳೆಯರದ್ದು ಹೆಂಗರುಳು, ಅವರಿಗೆ ಸಹಾಯ ಮಾಡಿದರೆ ಅವರು ಋಣ ತೀರಿಸುತ್ತಾರೆ. ಹೀಗಾಗಿ ಅವರಿಗೆ ಹೆಚ್ಚು ಕಾರ್ಯಕ್ರಮ ನೀಡಿದ್ದೇವೆ. ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆ ನೀಡಿದ್ದು, ನೀವು ಯಾವುದೇ ಪುಣ್ಯಕ್ಷೇತ್ರಕ್ಕೆ ಉಚಿತವಾಗಿ ಹೋಗಬಹುದು. ಈ ಯೋಜನೆಯಿಂದ ನಮ್ಮ ದೇವಾಲಯಗಳ ಹುಂಡಿಯಲ್ಲಿ ಹಣ ಹೆಚ್ಚಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂದರು.
ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ?
ರಾಮನಗರದಲ್ಲಿ ಕುಮಾರಸ್ವಾಮಿ ಅವರೂ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? ಕೆಲಸ ಮಾಡಿ, ಜನರ ಸೇವೆ ಮಾಡಿದ್ದರೆ ಸೋಲುತ್ತಿರಲಿಲ್ಲ. 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿಕಾರ್ಮಿಕರೇ? ಮತದಾನದ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ ಎಂದರು.
ಸರ್ಕಾರ ನಿಮ್ಮ ಜತೆಗಿದೆ
ಕೊಟ್ಟ ಕುದುರೆ ಏರಲು ಅರಿಯದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಅಧಿಕಾರ ಇದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಬಡವರಿಗೆ ಸಹಾಯ ಮಾಡದಿದ್ದರೆ, ಜನರಿಗೆ ನೆರವಾಗದಿದ್ದರೆ, ಶಾಸಕನಾಗಿ ಒಂದೇ ಒಂದು ಬಗರ್ ಹುಕ್ಕುಂ ಸಭೆ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆಯೂ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲಿಲ್ಲ. ಈ ದೇಶಕ್ಕೆ ಗೌರವ ಕೊಡದಿದ್ದರೆ, ಜನರಿಗೆ ಗೌರವ ಕೊಡುತ್ತಾರಾ? ಕುಮಾರಸ್ವಾಮಿಗೆ ಅವರಾಯ್ತು, ಅವರ ಕುಟುಂಬವಾಯ್ತು ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Building Collapse: ಬಂಗಾರಪೇಟೆಯಲ್ಲಿ ಏಕಾಏಕಿ ಕುಸಿದ 3 ಅಂತಸ್ತಿನ ಕಟ್ಟಡ; ತಪ್ಪಿದ ಭಾರಿ ಅನಾಹುತ!
ಇಡೀ ಸರ್ಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್‌ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ. ನಿಮ್ಮ ಜತೆಗೆ ನಾವು ನಿಂತು ನಿಮ್ಮ ಸೇವೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.