Wednesday, 13th November 2024

Grammy Award: ಬೆಂಗಳೂರು ಮೂಲದ ವಾರಿಜಶ್ರೀ ವೇಣುಗೋಪಾಲ್ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

Grammy Award

ಬೆಂಗಳೂರು: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ – ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯ (Grammy Award) ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ (Best global music performance) ವಿಭಾಗದಲ್ಲಿ ಇಂಗ್ಲೆಂಡ್‌ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಂನ ‘ಎ ರಾಕ್ ಸಮ್‌ವೇರ್’ ಹಾಡಿನಲ್ಲಿನ ಗಾಯನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದೇ ವಿಭಾಗದಲ್ಲಿ ಪ್ರಸಿದ್ಧ ಸಿತಾರ್ ಕಲಾವಿದೆ ಅನುಷ್ಕಾ ಶಂಕರ್ (Anoushka Shankar) ಕೂಡ ನಾಮನಿರ್ದೇಶನಗೊಂಡಿದ್ದಾರೆ.

30 ವರ್ಷಗಳ ಪ್ರದರ್ಶನದ ಅನುಭವದೊಂದಿಗೆ, ವಾರಿಜಶ್ರೀ ವೇಣುಗೋಪಾಲ್ ಅವರು ಅಂತರ-ಶೈಲಿ ಮತ್ತು ಅಂತರ-ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾರತೀಯ ಗಾಯನದ ಅನನ್ಯ ಪ್ರಸ್ತುತಿಗಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಮೆಚ್ಚುಗೆ ಪಡೆದಿದ್ದಾರೆ. ಅಪರೂಪದ ಕಲಾವಿದೆಯಾಗಿ, ವಾರಿಜಶ್ರೀ ಇಂದು ವಿಶ್ವದ ಬಹು ಶ್ರೇಷ್ಠ ಕಲಾವಿದರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿವಿಧ ಸಂಸ್ಕೃತಿಗಳು ಮತ್ತು ಜಾಗತಿಕ ಶೈಲಿಗಳೊಂದಿಗೆ ಭಾರತೀಯ ಸಂಗೀತದ ಸಾರವನ್ನು ಮೇಳೈಸುವ ಅವರ ಅನನ್ಯ ಸಾಮರ್ಥ್ಯವು ಮೆಚ್ಚುಗೆ ಗಳಿಸಿದೆ ಮತ್ತು ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಗಳಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ಅವರ ಆಲ್ಬಂ ‘ವಾರಿ’ ಬಹು ಜನಪ್ರಿಯವಾಗಿದೆ. ಸಂಗೀತ ಸಂಯೋಜಕಿಯಾಗಿ, ಗೀತ ರಚನೆಗಾರ್ತಿಯಾಗಿ ಮತ್ತು ಗಾಯಕಿಯಾಗಿ ಇದು ಅವರ ಆಕೆಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದ. ಇದನ್ನು ಅಮೆರಿಕದ ಬಹು ಗ್ರ್ಯಾಮಿ ವಿಜೇತ ಕಲಾವಿದ ಹಾಗೂ ವಿಶ್ವ ವಿಖ್ಯಾತ ಜಾಝ್ ಫ್ಯೂಶನ್ ಬ್ಯಾಂಡ್ ಸ್ನಾರ್ಕಿ ಪಪ್ಪಿಯ ಸ್ಥಾಪಕ ಮೈಕಲ್ ಲೀಗ್ ಅವರು ನಿರ್ಮಿಸಿದ್ದಾರೆ.

ಇನ್ನು ಮತ್ತೊಬ್ಬ ಕನ್ನಡಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಅವರೂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ರಿಕ್ಕಿ ಕೇಜ್‌ ಈ ಹಿಂದೆ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ. ರಿಕ್ಕಿ ಕೇಜ್‌ 2015ರಲ್ಲಿ ʼವಿಂಡ್ಸ್‌ ಆಫ್‌ ದಿ ಸಂಸಾರʼಕ್ಕಾಗಿ ಬೆಸ್ಟ್‌ ನ್ಯೂ ಏಜ್‌ ವಿಭಾಗದಲ್ಲಿ ಮತ್ತು 2022ರಲ್ಲಿʼ ಡಿವೈನ್‌ ಟೈಡ್ಸ್‌ʼಗಾಗಿ ಸ್ಟೀವನ್‌ ಕೋಪ್‌ಲ್ಯಾಂಡ್‌ನೊಂದಿಗೆ ಗ್ರ್ಯಾಮಿ ಗೆದ್ದಿದ್ದರು. ಕಳೆದ ವರ್ಷ ʼಡಿವೈನ್‌ ಟೈಡ್ಸ್‌ʼಗಾಗಿ ರಿಕ್ಕಿ ಕೇಜ್‌ ಮತ್ತು ಕೋಪ್‌ಲ್ಯಾಂಡ್‌ ಅವರನ್ನು ಮತ್ತೊಮ್ಮೆ ಗೌರವಿಸಲಾಗಿತ್ತು. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳನ್ನು 2025ರ ಫೆ. 2ರಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಪ್ರದಾನ ಮಾಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: ಗಾಯಕ ಮಹಾದೇವನ್, ತಬಲಾ ವಾದಕ ಜಾಕಿರ್ ಹುಸೇನ್ ಸೇರಿ ನಾಲ್ವರು ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ