ಹಾಸನ: ಹೊಳೆನರಸೀಪುರದ ನರ್ಸಿಂಗ್ ಕಾಲೇಜಿನ (Hassan News) ಗಡ್ಡ ವಿವಾದವು ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯ ನಡುವಿನ ಮಾತುಕತೆಯ ಮೂಲಕ ಸುಖಾಂತ್ಯಗೊಂಡಿದೆ. ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿದ್ದು, ಗಡ್ಡ ತೆಗೆಯಬೇಕು ಎಂದು ಯಾರೂ ಒತ್ತಡ ಹಾಕಿಲ್ಲ. ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ಮುಸ್ಲಿಂ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಹೊಳೆನರಸೀಪುರ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಸೂಚಿಸಿದ್ದರು ಆರೋಪ ಕೇಳಿಬಂದಿತ್ತು. ಇದಕ್ಕೆ ಜಮ್ಮು,ಕಾಶ್ಮೀರ ಸ್ಟೂಡೆಂಟ್ ಫೆಡರೇಷನ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಜತೆ ಅಧಿಕಾರಿಗಳು ಸಭೆ ನಡೆಸಿ, ವಿವಾದವನ್ನು ತಣ್ಣಗಾಗಿಸಿದ್ದಾರೆ.
ಸಭೆ ಬಳಿಕ ಜಮ್ಮು-ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿ ಉಮರ್ ಮಾತನಾಡಿ, ನಮಗೆ ಗಡ್ಡ ತೆಗೆಯಬೇಕು ಎಂದು ಯಾರೂ ಒತ್ತಡ ಹಾಕಿಲ್ಲ. ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಕಾಲೇಜು ನಿಯಮದಂತೆ ಶಿಸ್ತಿನಿಂದ ಇರಬೇಕೆಂದು ಹೇಳಿದ್ದಾರೆ. ಮುಂದೆ ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದಿಲ್ಲ, ಸಂಪ್ರದಾಯ ಪಾಲನೆಗೆ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವಿವಾದದ ಬಗ್ಗೆ ಪ್ರಾಂಶುಪಾಲ ಚಂದ್ರಶೇಖರ್ ಪ್ರತಿಕ್ರಿಯಿಸಿ, ನಮ್ಮದು ನರ್ಸಿಂಗ್ ಕೋರ್ಸ್ ಆಗಿರುವುದರಿಂದ ಕ್ಲಿನಿಕಲ್ ಲ್ಯಾಬ್‌ನಲ್ಲಿ ಗಡ್ಡ ಬಿಟ್ಟುಕೊಂಡು ಬಂದರೆ ಸಮಸ್ಯೆಯಾಗುತ್ತದೆ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಹೇಳಿದ್ದೆವು. ಕೇವಲ ಮುಸ್ಲಿಂ ಯುವಕರಿಗೆ ಮಾತ್ರ ಗಡ್ಡ ತೆಗೆಯುವಂತೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Viral News: ಪ್ರೀತಿಯ ಶ್ವಾನ ಕಣ್ಮರೆ; ಕಂಗಾಲಾದ ದಂಪತಿಯಿಂದ 50,000 ರೂ. ಬಹುಮಾನ ಘೋಷಣೆ!
ವಿದ್ಯಾರ್ಥಿಗಳಾದ ಚನ್ನಬಸವನಗೌಡ ಹಾಗೂ ಗಿರೀಶ್ ಎಂಬುವವರು ಮಾತನಾಡಿ, ಕಾಲೇಜಿನ ಪ್ರಾಂಶುಪಾಲರು ಎಲ್ಲ ವಿದ್ಯಾರ್ಥಿಗಳಿಗೂ ಗಡ್ಡ ಶೇವ್ ಮಾಡುವಂತೆ ಸೂಚಿಸಿದ್ದರು. ನರ್ಸಿಂಗ್ ಕಾಲೇಜಿನಲ್ಲಿ ಕೆಲವು ನಿಯಮಾವಳಿಗಳಿವೆ. ಅವುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ನೀವು ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಶುಶ್ರೂಷೆ ಮಾಡಬೇಕು. ರೋಗಿಗಳ ಬಳಿ ಹೋಗಬೇಕು ಅವರು ನಿಮ್ಮನ್ನು ನೋಡಿದ ಕೂಡಲೆ ಇವರು ಚಿಕಿತ್ಸೆ ಕೊಡುತ್ತಾರೆ ಎನ್ನುವ ಭಾವನೆ ಬರಬೇಕು. ಹೀಗಾಗಿ ಎಲ್ಲರೂ ಗಡ್ಡ ಟ್ರಿಂ ಮಾಡಿಕೊಂಡು ಶಿಸ್ತಾಗಿ ಬನ್ನಿ ಎಂದಿದ್ದರು. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿ ಸೂಚನೆ ಕೊಟ್ಟಿದ್ದರು. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.