ಬೆಂಗಳೂರು: ರೇಣುಕಸ್ವಾಮಿ ಕೊಲೆ (Renukaswamy Murder) ಪ್ರಕರಣದಲ್ಲಿ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavithra Gowda) ಹೆಸರುಗಳು ಪೊಲೀಸರಿಗೆ ದೊರತದ್ದೇ ಒಂದು ರೋಚಕ ಕಹಾನಿ. ಪೊಲೀಸರು ಸ್ವಲ್ಪ ಯಾಮಾರಿದ್ದರೂ, ಶರಣಾಗತರಾಗಿದ್ದ ಮೂವರಲ್ಲೇ ಈ ಕೇಸು ಮುಕ್ತಾಯವಾಗುತ್ತಿತ್ತು. ಆದರೆ, ದರ್ಶನ್ ಬಯಸಿದ್ದೇ ಬೇರೆ, ಆದದ್ದೇ ಬೇರೆ. ಜೊತೆಗೆ, ವಿಚಾರಣೆಯ ಸಂದರ್ಭದಲ್ಲಿ, ಶರಣಾಗತರು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನೂ ಹೇಳಿ ಪಾರಾಗಲು ನೋಡಿದ್ದರು ಎಂಬುದೂ ಬಯಲಾಗಿದೆ.
ರೇಣುಕಸ್ವಾಮಿ ಮೃತಪಟ್ಟ ಬಳಿಕ ಆತನ ಮೃತದೇಹವನ್ನು ಬೇರೆಡೆ ಸಾಗಿಸಲು ಸಂಚು ರೂಪಿಸಿದ ಆರೋಪಿಗಳು, ಸುಮನಹಳ್ಳಿ ಸತ್ವ ಅಪಾರ್ಟ್ ಮೆಂಟ್ ಬಳಿಯ ರಾಜಕಾಲುವೆಯಲ್ಲಿ ಹೆಣ ಎಸೆದು ಪರಾರಿಯಾಗಿದ್ದರು. ಮರುದಿನ ಅಪರಿಚಿತ ಶವ ಪತ್ತೆಯಾದ ವಿಚಾರ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡ ಪವಿತ್ರಾಗೌಡ ಆಪ್ತ ಪ್ರದೂಷ್, ಸ್ಟೋನಿ ಬ್ರೂಕ್ ಹೋಟೆಲ್ ಮಾಲೀಕ ವಿನಯ್ ಮತ್ತು ಆತನ ಆಪ್ತ ದೀಪಕ್ ಸಂಚು ರೂಪಿಸಿ, ಚಿತ್ರದುರ್ಗದ ರಾಘವೇಂದ್ರ, ಆತನ ಸ್ನೇಹಿತರಾದ ನಿಖಿಲ್ ನಾಯಕ್, ಕೇಶವಮೂರ್ತಿ, ಕಾರ್ತಿಕ್‌ಗೆ ಕೂಡಲೇ ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ, ರಾಘವೇಂದ್ರ ಭಯದಿಂದ ಸಾಧ್ಯವಿಲ್ಲ ಎಂದಿದ್ದ. ಬಳಿಕ ಆತನಿಗೆ ಹಣದ ಆಮಿಷವೊಡ್ಡಿ ಮನವೊಲಿಸಲಾಗಿತ್ತು. ಜೂನ್ 10ರಂದು ಬೆಳಗ್ಗೆ ರಾಘವೇಂದ್ರ ತನ್ನ ಮೂವರು ಸ್ನೇಹಿತರ ಜತೆ ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿದ್ದ.
ಆರಂಭದಲ್ಲಿ ರೇಣುಕಸ್ವಾಮಿ ಯಾರೋ ರೌಡಿಶೀಟರ್ ಇರಬಹುದು ಎಂದು ಪೊಲೀಸರು ಅನುಮಾನಗೊಂಡಿದ್ದರು. ಮತ್ತೂಂದೆಡೆ ಅದೇ ದಿನ ಪೊಲೀಸ್ ಆಯುಕ್ತರು, ಡಿಸಿಪಿ ಅನಿರೀಕ್ಷಿತವಾಗಿ ಠಾಣೆಗೆ ಹೋದಾಗ, ಆರೋಪಿಗಳನ್ನು ಕಂಡು ಪ್ರಶ್ನಿಸಿದಾಗ ರೌಡಿಶೀಟರ್ ಮರ್ಡರ್ ಕೇಸ್ ಎಂದು ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ. ಅದರಿಂದ ಅನುಮಾನಗೊಂಡ ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್, ಕೆಲ ಹೊತ್ತಿನ ಬಳಿಕ ಠಾಣೆಗೆ ಬಂದು ರಾಘವೇಂದ್ರನ ಹಿನ್ನೆಲೆಯನ್ನು ಕೆದಕಿದ್ದರು. ಆಗ ರಾಘವೇಂದ್ರ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ. ಹಣಕಾಸು ವಿಚಾರಕ್ಕೆ ರೇಣುಕಸ್ವಾಮಿಯನ್ನು ಹತ್ಯೆ ಮಾಡಿದ್ದಾಗಿ ಹೇಳಿದ್ದ. ಆದರೆ, ಹಣದ ಮೂಲ ತಿಳಿಸಿರಲಿಲ್ಲ. ಅದರಿಂದ ಇನ್ನಷ್ಟು ಅನುಮಾನಗೊಂಡ ಎಸಿಪಿ, ರೇಣುಕಸ್ವಾಮಿಯನ್ನು ಇಲ್ಲಿಗೆ ಕರೆತಂದು ಕೊಲ್ಲಲು ಕಾರಣವೇನು, ರೇಣುಕಸ್ವಾಮಿಗೂ ಈತನಿಗೂ ಯಾವ ರೀತಿ ವ್ಯವಹಾರ ಎಂದು, ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಆಗ ಒಂದೊಂದೇ ವಿಚಾರಗಳು ಬಯಲಾಗತೊಡಗಿದ್ದವು.
ಪ್ರತ್ಯೇಕ ವಿಚಾರಣೆಯ ವೇಳೆ ರಾಘವೇಂದ್ರ, ಇದು ಹಣಕಾಸಿನ ವಿಚಾರವಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ ಕಳುಹಿಸಿದ್ದ. ಅದಕ್ಕಾಗಿ ಬೆಂಗಳೂರಿಗೆ ಕರೆ ತಂದು ಕೊಲೆ ಮಾಡಿದ್ದೇವೆ ಎಂದಿದ್ದ. ತಡ ರಾತ್ರಿ ಕೇಶವಮೂರ್ತಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಡ್ಡಿದಾಗ, ವಿಜಯಲಕ್ಷ್ಮೀ ಅಲ್ಲ. ಡಿ ಬಾಸ್ ಪ್ರೇಯಸಿ ಪವಿತ್ರಾಗೌಡಗೆ ಕೆಟ್ಟದಾಗಿ ಸಂದೇಶ ಕಳುಹಿಸಿದ್ದ. ಚಿತ್ರದುರ್ಗದಿಂದ ಶೆಡ್‌ಗೆ ಕರೆದೊಯ್ದು ಡಿ ಬಾಸ್ ಸೇರಿ ಎಲ್ಲರೂ ಹೊಡೆದೆವು ಎಂದು ತಪ್ಪೊಪ್ಪಿಕೊಂಡಿದ್ದ. ಆಗ ಅಸಲಿ ವಿಚಾರ ಬಯಲಾಗಿದೆ. ಕೂಡಲೇ ಅಲರ್ಟ್ ಆದ ಪೊಲೀಸರು, ಎಲ್ಲರ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಅಂದು ಕೃತ್ಯ ನಡೆದ ಸ್ಥಳದಲ್ಲಿ ಇದ್ದುದು ಪತ್ತೆಯಾಗಿದೆ.
ಕೂಡಲೇ ನಸುಕಿನಲ್ಲಿ ಎಸಿಪಿ ಚಂದನ್ ಕುಮಾರ್, ಡಿಸಿಪಿ ಗಿರೀಶ್‌ಗೆ ಕರೆ ಮಾಡಿ, ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನದ ಬಗ್ಗೆ ಮಾಹಿತಿ ನೀಡಿ, ಬಂಧಿಸುವ ಕುರಿತು ಅನುಮತಿ ಕೇಳಿದ್ದರು. ಆಗ ಡಿಸಿಪಿ, ಸ್ವಲ್ಪ ಭಾಗಿಯಾಗಿದ್ದಾನೆ ಅಂತ ಕಂಡು ಬಂದರೂ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಂದು ಸೂಚಿಸಿದ್ದರು. ಕೂಡಲೇ ಮೈಸೂರಿಗೆ ಹೊರಡಿ ಎಂದು ಸೂಚಿಸಿದ್ದಾರೆ.
ದರ್ಶನ್ ಪತ್ನಿ ಮನೆಯ ಪೂಜೆ ಮುಗಿಸಿ ಕೊಂಡು, ಜೂನ್ 9ರಂದು ರಾತ್ರಿಯೇ ಮೈಸೂರಿಗೆ ಹೋಗಿದ್ದರು. ಈ ಮಾಹಿತಿ ಬೆನ್ನಲ್ಲೇ ಎಸಿಪಿ ಚಂದನ್ ತಂಡ, ಮೈಸೂರಿಗೆ ತೆರಳಿತ್ತು. ಮತ್ತೊಂದು ತನಿಖಾ ತಂಡ ಇತರೆ ಕೆಲ ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಶೋಧಿಸಿದಾಗ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿರುವ ಮಾಹಿತಿ ಪಡೆದು, ಕುಂಬಳಗೋಡು ಟೋಲ್ ಗೇಟ್ ಬಳಿಯೇ ಅವರನ್ನು ತಡೆದು ಬಂಧಿಸಲಾಗಿತ್ತು.
ಮುಂಜಾನೆ 6 ಗಂಟೆ ಸುಮಾರಿಗೆ ಪ್ರಕರಣದಲ್ಲಿ ದರ್ಶನ್ ಭಾಗಿ ವಿಚಾರವನ್ನು ಡಿಸಿಪಿ ಗಿರೀಶ್, ಪೊಲೀಸ್ ಕಮಿಷನರ್ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್‌ಗೆ ತಿಳಿಸಿದ್ದಾರೆ. ಅವರೂ ಬಂಧನಕ್ಕೆ ಅನುಮತಿ ನೀಡಿದ್ದರಿಂದ ಖಾಸಗಿ ಹೋಟೆಲ್‌ನಲ್ಲಿಯೇ ದರ್ಶನ್‌ನನ್ನು ಬಂಧಿಸಿ, ಬೆಂಗಳೂರಿಗೆ ಕರೆ ತರಲಾಯಿತು. ಈ ವಿಚಾರ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ದರ್ಶನ್‌ನನ್ನು ಮೈಸೂರಿನ ಖಾಸಗಿ ಹೋಟೆಲ್‌ನಿಂದ ಬೆಂಗಳೂರಿಗೆ ಕರೆ ತರುವಾಗ ಹತ್ತಾರು ಬೈಕ್‌ಗಳಲ್ಲಿ ಕೆಲ ಅಭಿಮಾನಿಗಳು ಹಿಂಬಾಲಿಸಿದ್ದರು. ಆಗ ಪೊಲೀಸರು ಮಾರ್ಗ ಮಧ್ಯೆಯೇ ಅವರನ್ನು ತಡೆದು, ಇದು ಸಿನಿಮಾ ಶೂಟಿಂಗ್ ತೊಂದರೆ ಕೊಡಬೇಡಿ ಎಂದು ಯಾಮಾರಿಸಿ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿ: Actor Darshan: ಕೆರಳಿಸುವ ಸ್ಟಿಕ್ಕರ್ ಅಂಟಿಸಿದರೆ ದಂಡ: ದರ್ಶನ್ ಅಭಿಮಾನಿ ವಾಹನ ಚಾಲಕರಿಗೆ ಆರ್‌ಟಿಒ ಖಡಕ್ ಸೂಚನೆ