Tuesday, 3rd December 2024

Sandur By Election: ಕಾಂಗ್ರೆಸ್ ಗೆದ್ದರೆ ದೇವಸ್ಥಾನ ಮಾತ್ರವಲ್ಲ, ನಮ್ಮ ಮನೆಗಳೂ ವಕ್ಫ್ ಆಸ್ತಿ ಆಗಲಿವೆ; ಜೋಶಿ ಆತಂಕ

Sandur By Election

ಸಂಡೂರು: ವಕ್ಫ್ (Waqf) ಮೂಲಕ ಕಾಂಗ್ರೆಸ್‌ನ ಹಿರಿಯ ಧುರೀಣರೆಲ್ಲ ಆಸ್ತಿ ಕಬಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದರು. ಸಂಡೂರು ವಿಧಾನಸಭೆ ಉಪ ಚುನಾವಣೆಗೆ (Sandur By Election) ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ನಾಯಕರಾದ ಖರ್ಗೆ, ರೋಶನ್ ಬೇಗ್, ಖಮರುಲ್ ಇಸ್ಲಾಂ, ಹ್ಯಾರಿಸ್, ರೆಹಮಾನ್ ಖಾನ್, ಸಿಎಂ ಇಬ್ರಾಹಿಂ, ಹಿಂಡಸಗೇರಿ, ಜಾಫರ್ ಷರೀಫ್ ಹೀಗೆ ಅನೇಕರು ವಕ್ಫ್ ಆಸ್ತಿ ಕಬಳಿಸಿದ ಬಗ್ಗೆ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖವೇ ಇದೆ ಎಂದು ಹೇಳಿದ ಅವರು, ಈಗಾಗಲೇ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ. ಈಗ ಮತ್ತೆ ದೇವಸ್ಥಾನ, ಮಠ-ಮಂದಿರ, ಬಡ ಮುಸಲ್ಮಾನರ, ರೈತರ ಆಸ್ತಿಗಳನ್ನು ವಕ್ಫ್ ಮೂಲಕ ಲಪಟಾಯಿಸಲು ಸಂಚು ಹೂಡಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Building Collapse: ಬಂಗಾರಪೇಟೆಯಲ್ಲಿ ಏಕಾಏಕಿ ಕುಸಿದ 3 ಅಂತಸ್ತಿನ ಕಟ್ಟಡ; ತಪ್ಪಿದ ಭಾರಿ ಅನಾಹುತ!

ಬಿಜೆಪಿ ವಕ್ಫ್ ಅದಾಲತ್ ನಡೆಸಿಲ್ಲ

ಬಿಜೆಪಿ ಕಾಲದಲ್ಲಿ ನೋಟಿಸ್ ನೀಡಿಲ್ಲವೇ ಎಂದಿದ್ದಾರೆ ಸಿಎಂ. ಆದರೆ, ಬಿಜೆಪಿ ವಕ್ಫ್‌ಗೆ ಆಗಿದ್ದ ಆಸ್ತಿ ರಕ್ಷಿಸೋ ಕೆಲಸ ಮಾಡಿತೇ ಹೊರತು ಆಸ್ತಿ ಕಬಳಿಸಲು ವಕ್ಫ್‌ಗೆ ಬಿಟ್ಟಿರಲಿಲ್ಲ. ಬಿಜೆಪಿ ಯಾವತ್ತೂ ವಕ್ಫ್ ಅದಾಲತ್ ನಡೆಸಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಚಾಲುಕ್ಯರ ಕಾಲದ ದೇವಸ್ಥಾನ ಸಹ ವಕ್ಫ್ ಭೂಮಿ ಆಗಿದೆ; ವಕ್ಫ್ ಭೂ ಕಬಳಿಕೆಯಿಂದಾಗಿ ವಿಜಯಪುರದಲ್ಲಿ 1500 ವರ್ಷಗಳಷ್ಟು ಪುರಾತನ, ಚಾಲುಕ್ಯರ ಕಾಲದ ದೇವಸ್ಥಾನ ಜಾಗವನ್ನೂ ವಕ್ಫ್ ಕಬಳಿಸಿದೆ ಎಂದು ಪ್ರಲ್ಹಾದ್‌ ಜೋಶಿ ಖಂಡಿಸಿದ ಅವರು, ವಿಜಯಪುರ ಜಿಲ್ಲೆ ಪಡಗಾನೂರು ದೇವಸ್ಥಾನ ಸಹ ವಕ್ಫ್ ಆಸ್ತಿ ಆಗಿದೆ. ಹಾಗಾದರೆ ಚಾಲುಕ್ಯರು ಯಾರ ಕಾಲದಲ್ಲಿ ಇದ್ದರು? ಸಿಎಂ ಸಿದ್ದರಾಮಯ್ಯ ಅವರೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಗೆದ್ದರೆ ಮನೆಗಳೂ ವಕ್ಫ್‌ಗೆ: ಚುನಾವಣೆಗಳಲ್ಲಿ ಹಿಂದೂಗಳು ಎಚ್ಚೆತ್ತುಕೊಳ್ಳದೇ ಹೋದರೆ, ಕಾಂಗ್ರೆಸ್ ಗೆದ್ದರೆ ದೇವಸ್ಥಾನ ಮಾತ್ರವಲ್ಲ ನಮ್ಮ ಮನೆಗಳೂ ವಕ್ಫ್ ಆಸ್ತಿ ಆಗಲಿವೆ ಎಂದು ಅವರು ಎಚ್ಚರಿಸಿದ ಅವರು, ವಕ್ಫ್ ಮೂಲಕ ಭೂ ಕಬಳಿಕೆಯಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಬಿಜೆಪಿ ಅಭೂತಪೂರ್ವ ಗೆಲುವು

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಮತ್ತು ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್‌ಡಿಎ (NDA) ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್ಸಿಗರೇ ನಿಸ್ಸೀಮರು: ಕಾಂಗ್ರೆಸ್ಸಿಗರೇ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಮುಡಾ, ವಾಲ್ಮೀಕಿ ಹಗರಣ, ಗ್ಯಾರೆಂಟಿಗಳೇ ಇದಕ್ಕೆ ನಿದರ್ಶನ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸಿಎಂಗೆ ತಿರುಗೇಟು ನೀಡಿದರು.

ಈ ಸುದ್ದಿಯನ್ನೂ ಓದಿ | Jog Falls: ಜೋಗ ಜಲಪಾತದ ಬಳಿ ರೋಪ್‌ವೇ, ಪಂಚತಾರಾ ಹೋಟೆಲ್: ಅರಣ್ಯ ಇಲಾಖೆ ಒಪ್ಪಿಗೆ

ಮುಡಾ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎನ್ನುತ್ತಲೇ ತರಾತುರಿಯಲ್ಲಿ ಎಸ್‌ಐಟಿ (SIT) ರಚಿಸಿದಿರಿ. ಸೈಟ್ ವಾಪಸ್ ಕೊಡಿಸಿದಿರಿ. ಇನ್ನು, ವಾಲ್ಮೀಕಿ ಹಗರಣದಲ್ಲಿ ಇಡಿ, ಸಿಬಿಐ ಬಂಧಿಸೋದು ಬೇಡವೆಂದು ಸಚಿವ ನಾಗೇಂದ್ರ ಎಸ್‌ಐಟಿ ಮುಂದೆ ಕೈ ಜೋಡಿಸಿದರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.