Saturday, 23rd November 2024

Viral Video: ಪೊಲೀಸರ ಎದುರೇ ಗುಂಡಿನ ಬಾಟಲಿ ಹಿಡಿದು ಕಾಲ್ಕಿತ್ತ ಜನ; ಎಣ್ಣೇನ ಹಾಳ್‌ ಮಾಡ್ಬೇಡಿ ಸಾರ್‌ ಅಂತಾ ಗೋಗರೆದ ಮದ್ಯಪ್ರಿಯರು! ಇಲ್ಲಿದೆ ನೋಡಿ ವಿಡಿಯೋ

Viral video

ಹೈದರಾಬಾದ್‌: ಅಕ್ರಮವಾಗಿ ವಶಕ್ಕೆ ಪಡೆದಿರುವ ಮದ್ಯಗಳ ಬಾಟಲಿಗಳನ್ನು ಪೊಲೀಸರು ನಾಶ ಮಾಡುವ ಪ್ರಕ್ರಿಯೆ ಎಲ್ಲರಿಗೂ ತಿಳಿದೇ ಇದೆ. ಲಕ್ಷಾಂತರ ರೂ. ಮೌಲ್ಯದ ಮದ್ಯ ತುಂಬಿದ ಬಾಟಲಿಗಳನ್ನು ಪೊಲೀಸರು ನಾಶ ಮಾಡುವ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಲೇ ಇರುತ್ತದೆ. ಅದನ್ನು ನೋಡಿ ಅಯ್ಯೋ ನಮಗಾದರೂ ಕೊಡಬಾರದೇ ಅಂತ ಅಂದುಕೊಳ್ಳುವವರು ಅದೆಷ್ಟೋ ಮದ್ಯಪ್ರಿಯರು ಇದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ಆಂ‍ಧ್ರಪ್ರದೇಶ(Andra Pradesh)ದಲ್ಲಿ ನಡೆದಿದೆ. ಪೊಲೀಸರು ಮದ್ಯದ ಬಾಟಲಿಗಳ ನಾಶಕ್ಕೆ ಮುಂದಾದಾದ ರೊಚ್ಚಿಗೆದ್ದ ಮದ್ಯಪ್ರಿಯರು ಅವನ್ನು ಪಡೆಯಲು ನಾಮುಂದು ತಾಮುಂದು ಅಂತಾ ನುಗ್ಗಿದ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಏನಿದು ಘಟನೆ?

ಆಂ‍ಧ್ರಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು, ಅಕ್ರಮ ಮದ್ಯ ಮಾರಾಟ ದಂಧೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅಪಾರ ಪ್ರಮಾಣದ ಮದ್ಯದ ಬಾಟಲಿಯನ್ನು ವಶಕ್ಕೆ ಪಡೆದಿದ್ದರು. ಎಂದಿನಂತೆ ವಶಕ್ಕೆ ಪಡೆದ ಮದ್ಯಗಳ ಬಗ್ಗೆ ತನಿಖೆ ಪೂರ್ಣಗೊಳ್ಳುತ್ತಿದ್ದಂತೆ ಅದನ್ನು ಪೊಲೀಸರು ನಾಶ ಮಾಡುವ ಪ್ರಕ್ರಿಯೆ ಇರುತ್ತದೆ, ಅದರಂತೆ ಮದ್ಯದ ಬಾಟಲಿಗಳ ನಾಶಕ್ಕೆ ಪೊಲೀಸರು ಮುಂದಾದರು. ಆಗ ಅಲ್ಲದೇ ಜನ ಮದ್ಯದ ಬಾಟಲಿಯನ್ನು ಹಿಡಿಯಲು ನುಗ್ಗಿದರು. ಆಗ ಗೊಂದಲ ಉಂಟಾಗಿದೆ. ಕೊನೆಗೆ ಬೇರೆ ದಾರಿ ಕಾಣದೇ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

₹ 50 ಲಕ್ಷ ಮೌಲ್ಯದ ಮದ್ಯ ನಾಶ

ಗುಂಟೂರು ಎಸ್ಪಿ ಎಸ್.ಸತೀಶ್ ಕುಮಾರ್ ಅವರ ಸೂಚನೆಯಂತೆ ಆಂಧ್ರಪ್ರದೇಶದ ಗುಂಟೂರಿನ ಪೊಲೀಸರು ಸೋಮವಾರ ನಲ್ಲ ಚೆರುವು ಡಂಪಿಂಗ್ ಯಾರ್ಡ್‌ನಲ್ಲಿ ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಸಾಲಾಗಿ ಇಟ್ಟಿದ್ದರು. ಬರೋಬ್ಬರಿ ₹ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಟಲಿಗಳನ್ನು ವಿಧಾನಸಭಾ ಚುನಾವಣೆ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಮದ್ಯದ ಬಾಟಲಿಗಳನ್ನು ನಾಶಪಡಿಸಲು ಪೊಲೀಸರು ಯೋಜನೆ ರೂಪಿಸಿದ್ದರು. ಆದರೆ, ಸುದ್ದಿ ತಿಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಬಾಟಲಿಗಳನ್ನು ಹಿಡಿದು ಓಡಲು ಯತ್ನಿಸಿದರು. ಸ್ಥಳೀಯರು ಮದ್ಯದೊಂದಿಗೆ ಓಡಿಹೋಗುವುದನ್ನು ಅವರನ್ನು ತಡೆಯಲು ಪೊಲೀಸರು ವ್ಯರ್ಥ ಪ್ರಯತ್ನ ನಡೆಸುಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ಮದ್ಯಗಳನ್ನು ಒಯ್ಯದಂತೆ ಪೊಲೀಸರು ಎಷ್ಟೇ ಮನವಿ ಮಾಡಿದರೂ ಜನ ಮಾತ್ರ ಕೇಳಲೇ ಇಲ್ಲ. ಕೊನೆಗೆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ಮತ್ತೊಂದೆಡೆ ಮದ್ಯಗಳನ್ನು ನಾಶ ಮಾಡುವ ಬದಲು ತಮಗೆ ಕೊಡಿ ಎಂದು ಕೆಲವರು ಪೊಲೀಸರಿಗೆ ಮನವಿ ಮಾಡುತ್ತಿರುವುದೂ ಕಂಡು ಬಂತು. ಇನ್ನು ಕೆಲವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಮನಸ್ಸಿಲ್ಲದ ಮನಸ್ಸಿನಲ್ಲಿ ಕೈಯಲ್ಲಿದ್ದ ಮದ್ಯದ ಬಾಟಲಿ ಹಿಂದಿರುಗಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Haryana Election: ಸೀಟ್‌ ಮಿಸ್ಸಾಯ್ತೆಂದು ಅತ್ತು ಗೋಳಾಡಿದ ಬಿಜೆಪಿ ನಾಯಕರು- ವಿಡಿಯೋ ಫುಲ್‌ ವೈರಲ್‌