Saturday, 23rd November 2024

ನೆರಳು ನೀಡುವ ಮರಗಳೇ ನನ್ನ ಮಕ್ಕಳು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 77

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವೃಕ್ಷ ದೇವತೆ ಸಾಲು ಮರದ ತಿಮ್ಮಕ್ಕ

ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ’ನೆರಳು ನೀಡುವ ಮರಗಳೇ ನನ್ನ ಮಕ್ಕಳು. ಅವುಗಳನ್ನು ಬೆಳೆಸಿ, ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದಿರುವವರು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ.

ತಮ್ಮ ಕಾಯಕದ ಮೂಲಕವೇ ತತ್ವಾದರ್ಶಗಳನ್ನು ರೂಢಿಸಿಕೊಂಡ ಆದರ್ಶ ಮಹಿಳೆ ಸಾಲುಮರದ ತಿಮ್ಮಕ್ಕ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿ ಯಾಗಿ ಭಾಗವಹಿಸಿ, ಬದುಕು ಹಾಗೂ ಪರಿಸರದ ನಡುವಿನ ಒಡನಾಟ ಕುರಿತು ಕೇಳುಗರ ಮನಸ್ಸಿಗೆ ತುಂಬಿದರು. ನಮ್ಮಕ್ಕ ಮತ್ತು ನಾನು ಎರಡು ಮೇಕೆ ಹಾಗೂ ದನ ಸಾಕಣೆಯಲ್ಲಿ ಜೀವನ ಸಾಗಿಸಿದೆವು. ನಾವು ದನ ಮೇಯಿಸಿ ಮನೆಗೆ ಬಂದ ಮೇಲೆ ನಮ್ಮ ತಾಯಿ ನಮಗೆ ಊಟ ತಯಾರಿ ಮಾಡುತ್ತಿದ್ದರು. ಬಳಿಕ ನಾನು ಮಣ್ಣು ಹೊರುವ ಕೆಲಸಕ್ಕೆ ಹೋದೆ. ಆದರೆ ಆರಂಭದಲ್ಲಿ ನನ್ನ ಕೈಯಲ್ಲಿ ಆ ಕೆಲಸ ಸಾಧ್ಯವಾಗಲಿಲ್ಲ, ಪುನಃ ಕಲಿತುಕೊಂಡೆ ಎಂದರು.

ಸೌದೆ ಆಯ್ದು ಅದನ್ನು ಮಾರಿ ಬಂದ ಹಣವನ್ನು ನಮ್ಮ ತಾಯಿಗೆ ಕೊಡುತ್ತಿದ್ದೆವು. ಕೂಲಿ ಮಾಡಿ ಜೀವನ ನಡೆಸಿ ದೆವು. ಅಂಬಲಿ ಕೊಡುತ್ತಿದ್ದರು ನನ್ನ ತಾಯಿ. ಹುಲ್ಲು ಹೊತ್ತು ಮಾರಲಾಗುತ್ತಿತ್ತು ಎಂದು ತಿಳಿಸಿದರು. ನಾನು ಸಾಹುಕಾರ ಮನೆಗೆ ಹೋಗಿ ಎಲೆ ಮಾರಿದಾಗ ಒಂಬತ್ತು ಕಾಸು ಹಾಗೂ ಒಂದು ಉಡುಪು ಕೊಟ್ಟರು. ಮೂರು ಕಾಸು ನಾನು ಇಟ್ಟುಕೊಂಡು ಉಳಿದಿದ್ದು ತಾಯಿಗೆ ಕೊಟ್ಟೆ. ಬೆಳಗ್ಗೆ ಎದ್ದು ಮೂರು ಕಾಸು ತಗೊಂಡು ಬಟ್ಟೆ ಹೊಲಿಸಿಕೊಂಡೆ.

ನನ್ನ ತಂದೆ ಊರಿಗೆ ಹೋಗಿ ಸೀಬೆ ಹಣ್ಣು ತಿಂದು ಕೆಲ ದಿನ ಕಳೆದಿದ್ದೇವೆ. ಬಳಿಕ ನಮ್ಮ ತಾಯಿ ಹುಡುಕಿಕೊಂಡು ಬಂದಳು. ಕರೆದುಕೊಂಡು ಹೋಗಲು ಬಂದಿದ್ದರು. ಆಗ ಗೌಡರು ನಾನು ಕಳಿಸಲ್ಲ ತಿಮ್ಮಕ್ಕ ಅವರನ್ನು ಅಂದರು. ಗೌಡರ ಮನೆಯಲ್ಲಿ ಊಟ ಕೊಟ್ಟು ಮಗಳಂತೆ ಕಾಪಾಡಿದರು. ನಮ್ಮ ತಂದೆ ಅವರು ಕೊಟ್ಟ ಪಂಚೆ ಹೊದಿಕೆಯಾಗುತ್ತಿತ್ತು. ಬಡತನ ಸಾಗಿಸಿದ್ದು ಕ್ಲಿಷ್ಟಕರ ಎಂದು ವಿವರಿಸಿದರು. ಗೌಡರು ನಮ್ಮ ಜಮೀನು ಮಾರಿ ಕೊಂಡರು. ನಮಗೆ ಒಂದು ಪೈಸೆನೂ ಕೊಡಲಿಲ್ಲ. ಕೂಲಿ ಮಾಡುವುದೇ ಸರಿ ಹೋಗುತ್ತಿತ್ತು. ಯಾರೇ ನೋಡಲು ಬಂದರೂ ಮದುವೆ ಮಾಡಿಕೊಡಲು ನನ್ನ ತಾಯಿ ಸಿದ್ಧವಿರಲಿಲ್ಲ. ಬಳಿಕ ಮದುವೆ ಮಾಡಿದರು ಎಂದು ವಿವರಿಸಿದರು.

ಐದು ರುಪಾಯಿಯಲ್ಲಿ ಮದುವೆ: ತಮ್ಮದೇ ಊರಿನಲ್ಲಿ ದನಗಳನ್ನು ಕಾಯುತ್ತಿದ್ದ ಚಿಕ್ಕಯ್ಯ ಎಂಬುವವರೊಡನೆ ವಿವಾಹವಾದೆ. ನನ್ನ ಗಂಡನ ತಮ್ಮ ಎಲ್ಲ ಸೌಲಭ್ಯ ಕೊಟ್ಟು ಮದುವೆ ಮಾಡಿಸಿದರು. ಸಾಹುಕಾರ ಮನೆಗೆ ಹೋಗಿ ನೂರು ರು. ಸಂಬಳ ತಗೊಂಡು ಮದುವೆ ಮಾಡಿದ. ಎಲ್ಲ ಖರ್ಚಾಗಿ ಐದು ರುಪಾಯಿ ಉಳಿಸಿದರು. ನನ್ನ ಗಂಡನ ತಮ್ಮನ ಮದುವೆಯಲ್ಲಿ ಗಲಾಟೆ ಆಯಿತು. ಆಗ ನ್ಯಾಯ ಪಂಚಾಯಿತಿ ಮಟ್ಟಕ್ಕೆ ಹೋಯಿತು. ಬಳಿಕ ಊರು ಬಿಡುವ ಪರಿಸ್ಥಿತಿ ಎದುರಾಯಿತು.
ಒಂದೆರೆಡು ಸೀರೆಗಳನ್ನು ತಗೊಂಡು ಗಂಡನ ಜತೆ ಹೊರಟೆ. ಬಳಿಕ ಹುಟ್ಟಿದೂರಿಗೆ ಹೋಗಿ ಜೀವನ ಸಾಗಿಸಿದೆವು ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

ಗಂಡನಿಗೆ ವಿಷಕೊಟ್ಟು ಸಾಯಿಸಿದ್ರು: ನನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿಬಿಟ್ಟರು. ನನ್ನ ಗಂಡ ಸಾವಿನ ಕೊನೆಯ ದಿನ ಹೇಳಿದ ಮಾತೆಂದರೆ
’ಸಾವು ಇರಲಿಲ್ಲ, ಏನೋ ಮಾಡಿ ಸಾಯಿಸಿಬಿಟ್ಟರು ಕಣೆ. ಇನ್ನೂ ಹತ್ತು ವರ್ಷ ಬದುಕುತ್ತಿದ್ದೆ’ ಅಂದರು. ಈ ಮಾತು ಹೇಳುತ್ತಲೇ ಕೊನೆಯುಸಿರೆಳೆದರು ಎಂದು ಹೇಳಿದರು ಸಾಲುಮರದ ತಿಮ್ಮಕ್ಕ.

ಮರ ನೆಡುವ ಕಾರ್ಯ ಶುರುವಾದದ್ದು ಯಾವಾಗ?
ತಿಮ್ಮಕ್ಕ ಅವರಿಗೆ ಮದುವೆ ಆಗಿ 25 ವರ್ಷಗಳಾದರೂ ಮಕ್ಕಳು ಆಗಿರಲಿಲ್ಲ. ಮಕ್ಕಳು ಇಲ್ಲದಿದ್ದರೂ ಪರವಾಗಿಲ್ಲ ಮರ ಬೆಳೆಸಿ ಪುಣ್ಯ ಪಡೆಯೋಣ ಎಂದು
ತೀರ್ಮಾನಿಸಿ ದರು. ಮೊದಲ ವರ್ಷದಲ್ಲಿ ಕುದೂರು ಬಳಿಯ ಹೆದ್ದಾರಿಯ 4 ಕಿಲೋಮೀಟರ್ ಅಂತರದಲ್ಲಿ 10 ಸಸಿಗಳನ್ನು ನೆಟ್ಟ ತಿಮ್ಮಕ್ಕ ಎರಡನೇ ವರ್ಷ ೧೫, ಮೂರನೇ ವರ್ಷ ೨೦, ಹೀಗೆ ಸಸಿಗಳನ್ನು ನೆಡುತ್ತಾ ಹೋದರು. ತಿಮ್ಮಕ್ಕ ನವರ ಪತಿ ಚಿಕ್ಕಯ್ಯ ಅವರೂ ತಮ್ಮ ಪತ್ನಿಯ ಕಾಯಕದಲ್ಲಿ ಕೈ ಜೋಡಿಸಿದರು. ಸಸಿಗಳಿಗೆ ನೀರುಣಿಸುವುದಲ್ಲದೆ, ಸಸಿಗಳನ್ನು ಜಾನುವಾರುಗಳಿಂದ ರಕ್ಷಿಸುವುದಕ್ಕಾಗಿ ಸುತ್ತ ಮುಳ್ಳಿನ ಪೊದೆಗಳನ್ನು ಹೊದ್ದಿಸಿ ಕಾಪಾಡಿದರು.

ಸಸಿಗಳ ಬೆಳವಣಿಗೆಗೆ ನೀರಿನ ಅವಶ್ಯಕತೆಯಿದ್ದ ಕಾರಣದಿಂದ ಮಳೆಗಾಲದ ಸಮಯದಲ್ಲಿಯೇ ಸಸಿಗಳನ್ನು ನೆಡುತ್ತಿದ್ದರು. ಮುಂದಿನ ಮಳೆಗಾಲದ ಸಮಯದಲ್ಲಿ ಆ ಎಲ್ಲ ಸಸಿಗಳು ಚೆನ್ನಾಗಿ ಬೆಳೆದವು. ಬೇಸಿಗೆಯ ಸಮಯದಲ್ಲಿ ಸಸಿಗಳಿಗೆ ನೀರಿನ ಕೊರತೆಯಾದಾಗ ಕೆಲವೊಮ್ಮೆ ತಿಮ್ಮಕ್ಕ ದಂಪತಿಗಳು ನಾಲ್ಕು ಕಿಲೋ ಮೀಟರ್ ದೂರದಿಂದ ಕೊಳಗಗಳಲ್ಲಿ ನೀರನ್ನು ತಂದು ಸಸಿಗಳಿಗೆನೀರುಣಿಸುತ್ತಿದ್ದರು.

ಪ್ರತಿ ಊರಿನಲ್ಲೂ ನೂರು ಗಿಡ ನೆಡುವ ಸಂಕಲ್ಪ: ಬಾಲಗಂಗಾಧರನಾಥ ಸ್ವಾಮೀಜಿ ಅವರು ವನ ಸಮೃದ್ಧಿ ಟ್ರಸ್ಟ್ ಸ್ಥಾಪಿಸಿ ಮರಗಳನ್ನು ನೆಡುವ ಕೆಲಸ ಮಾಡಿ ದರು. ಸಾಲುಮರದ ತಿಮ್ಮಕ್ಕ ಅವರ ಹಾದಿಯಲ್ಲಿ ನಾವು ಪ್ರತಿಯೊಂದು ಹಳ್ಳಿಯಲ್ಲೂ ನೂರು ಗಿಡ ಬೆಳೆಸುವ ಅಭಿಯಾನ ನಡೆಸಬೇಕು ಎಂದು ಬೇಲಿಮಠದ ಶ್ರೀಗಳು ತಿಳಿಸಿದರು.

ತಿಮ್ಮಕ್ಕನ ಕನಸು…

ಸಾಲುಮರದ ತಿಮ್ಮಕ್ಕನ ಪ್ರಶಸ್ತಿಗಳ ಸಂರಕ್ಷಣೆಗೆ ಮ್ಯೂಸಿಯಂ ಸ್ಥಾಪಿಸಬೇಕು.
ತಿಮ್ಮಕ್ಕ ಅವರು ನೆಟ್ಟ ಗಿಡಗಳ ಸಂಖ್ಯೆ ಅಗಾಧ.
ತಿಮ್ಮಕ್ಕ ಅವರ ಹೆಸರಿನಲ್ಲಿ ನರ್ಸರಿ ತೆರೆದು ಗಿಡಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ದತ್ತುಪುತ್ರ ಉಮೇಶ್ ಅವರು ತಿಮ್ಮಕ್ಕ ಅವರಿಗೆ ಸಹಕಾರ ನೀಡುತ್ತಿದ್ದು, ಸ್ವಂತ ತಾಯಿಗಿಂತಲೂ ಹೆಚ್ಚಿನ ಪ್ರೀತಿ ತೋರುತ್ತಿದ್ದಾರೆ.

***

ಸಾಲುಮರದ ತಿಮ್ಮಕ್ಕ ಮಾಡಿದ ಸಾಧನೆ ಚಿಕ್ಕಮಕ್ಕಳಿಂದ ವೃದ್ಧರ ತನಕ ಗೊತ್ತಿದೆ. ಅವರ ಜೀವನವೇ ಒಂದು ಸಂದೇಶ. ಮರಗಳನ್ನು ತನ್ನ ಸ್ವಂತ ಮಕ್ಕಳಂತೆ ಸಾಕಿ ಮುಗಿಲೆತ್ತರಕ್ಕೆ ಬೆಳೆಸಿದರು. ಇದು ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯ ನಿದರ್ಶನವಾಗಿದೆ. ನಮ್ಮ ಜೀವನದಲ್ಲಿ 50 ಮರಗಳನ್ನು ಬೆಳೆಸಿದರೆ ಸಾರ್ಥಕ ಎಂಬುದನ್ನು ತಿಳಿದುಕೊಳ್ಳಬೇಕು.
-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು