Saturday, 23rd November 2024

ಸೈಬರ್ ಖದೀಮರ ನೆಚ್ಚಿನ ತಾಣ ಭಾರತ, ವರ್ಷಕ್ಕೆ ಆರು ಟ್ರಿಲಿಯನ್ ಡಾಲರ್ ನಷ್ಟ, ಕೋವಿಡ್ ಕಾಲದಲ್ಲಿ ಸೈಬರ್‌ಕ್ರೈಮ್ ಹೆಚ್ಚಳ

ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 81

ವಿಶ್ವವಾಣಿ ಕ್ಲಬ್ ಹೌಸ್ ಉಪನ್ಯಾಸದಲ್ಲಿ ಸೈಬರ್ ಕಾನೂನು ತಜ್ಞ ಡಾ.ಅನಂತ ಪ್ರಭು ಅರಿವು

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಭಾರತದಂತಹ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ತಮ್ಮ ಕೈ ಚಳಕ ತೋರುತ್ತಿರುವುದಿಂದ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ ಎಂದು ಸೈಬರ್ ಕಾನೂನು ವಿಶೇಷ ತಜ್ಞ ಡಾ.ಅನಂತ ಪ್ರಭು ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭವನ್ನು ಸೈಬರ್ ಖದೀಮರು ಸಮರ್ಥವಾಗಿ ಬಳಸಿ ಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ಜನರು ಹೆಚ್ಚಾಗಿ ಆನ್‌ಲೈನ್ ಮೇಲೆ ಅವಲಂಬಿತ ರಾಗಿದ್ದಾರೆ. ಇದನ ಬಂಡವಾಳ ಮಾಡಿ ಕೊಂಡಿರುವ ಖದೀಮರು ಜನರ ಖಾತೆಗಳನ್ನು ಹ್ಯಾಕ್ ಮಾಡಿ ವಂಚಿಸುತ್ತಿದ್ದಾರೆ. ಸೈಬರ್ ಖದೀಮರಿಗೆ ಭಾರತದಂತಹ ದೇಶಗಳು ನೆಚ್ಚಿನ ತಾಣಗಳಾಗಿವೆ ಎಂದರು.

1970 ರಲ್ಲಿ ಮೊದಲ ಹ್ಯಾಕ್: 1970 ರಲ್ಲಿ ಮೊದಲ ಬಾರಿ ಹ್ಯಾಕ್ ನಡೆಯಿತು. ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾಡಲಾಗಿತ್ತು. ಅಂದು ಅವರನ್ನು ಫ್ರೀಕರ‍್ಸ್ ಎಂದು ಕರೆಯಲಾಯಿತು. ನಂತರ ಸೈಬರ್ ಕ್ರೈಂ ಮಾಡುವವರನ್ನು ಹ್ಯಾಕರ‍್ಸ್‌ಗಳು ಎಂದು ಕರೆಯಲಾಯಿತು. ಹ್ಯಾಕರ‍್ಸ್‌ಗಳಲ್ಲಿ ಬ್ಲ್ಯಾಕ್ ಹಾಕರ‍್ಸ್, ವೈಟ್ ಹ್ಯಾಕರ‍್ಸ್, ಗ್ರೇ ಹ್ಯಾಟ್ ಹ್ಯಾಕರ‍್ಸ್ , ರೆಡ್ ಹ್ಯಾಟ್ ಹ್ಯಾಕರ‍್ಸ್ ಎಂಬ ನಾಲ್ಕು ವಿಧಗಳಿವೆ. ಬ್ಲ್ಯಾಕ್ ಹಾಕರ‍್ಸ್‌ಗಳು ಬ್ಲ್ಯಾಕ್ ಮೇಲ್ ಮಾಡಿ ಹಣ ಕೇಳುವುದರ ಜತೆಗೆ ತೊಂದರೆ ಕೊಡುತ್ತಾರೆ.

ವೈಟ್ ಹ್ಯಾಕರ‍್ಸ್, ಒಳ್ಳೆಯ ಉದ್ದೇಶ ಹೊಂದಿದವರಾಗಿದ್ದು, ಸಿಸ್ಟಂಗಳಲ್ಲಿ ಇರುವ ಲೋಪದೋಷಗಳನ್ನು ಸರಿ ಪಡಿಸುತ್ತಾರೆ. ಗ್ರೇ ಹ್ಯಾಟ್ ಹ್ಯಾಕರ‍್ಸ್, ಬ್ಲ್ಯಾಕ್ ಅಂಡ್ ವೈಟ್ ನಡುವಿನ ಹ್ಯಾಕರ‍್ಸ್‌ಗಳು ಒಳ್ಳೆಯದು ಕೆಟ್ಟದು ಎರಡನ್ನು ಮಾಡುತ್ತಾರೆ. ರೆಡ್ ಹ್ಯಾಟ್ ಹ್ಯಾಕರ‍್ಸ್‌ಗಳು ಆರ್ಮಿಯಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ನೇಮಿಸಿ ಕೊಂಡಿರುತ್ತಾರೆ. ದೇಶಕ್ಕೆ ತೊಂದರೆ ಕೊಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಾರೆ ಎಂದು ವಿವರಿಸಿದರು.

ಜಾಲತಾಣದಲ್ಲಿ ಬೇಡವಾದ ಸಂದೇಶ ಹಾಕಬೇಡಿ: ಸಾಮಾಜಿಕ ಜಾಲತಾಣಗಳಲ್ಲಿ ಬೇಡವಾದ ಸಂದೇಶಗಳನ್ನು ಹಾಕುವುದರಿಂದ ನಿಮ್ಮ ಮನೆಯನ್ನು ಕಳ್ಳರು
ಲೂಟಿ ಮಾಡುವ ಸಾಧ್ಯತೆ ಇರುತ್ತದೆ. ಒಂದು ಪ್ರಕರಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮನೆ ಮಾಲೀಕರು ಗೋವಾಗೆ ಹೋಗುವ ಸಂದೇಶ ಹಾಕಿದ್ದರು. ಅದನ್ನು ನೋಡಿ ಅವರ ಮನೆಗೆ ಬಂದ ಖದೀಮರು ಕಳ್ಳತನ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚೆಕ್ ಇನ್ ಮಾಡಬೇಡಿ. ಯಾವುದೇ ಮೊಬೈಲ್‌ನಲ್ಲಿ ಶೇರ್ ಮಾಡುವ ಪ್ರೈವಸಿ ಆಪ್ಷನ್‌ನಲ್ಲಿ ಲೊಕೆಷನ್ ಆಫ್ ಮಾಡಬೇಕು ಎಂದರು. Tosdr.org ವೆಬ್ ಸೈಟ್‌ನಲ್ಲು ಆಪ್‌ನಿಂದ ಸಂಪೂರ್ಣ ವಿವರ ಗೊತ್ತಾಗುತ್ತದೆ ಎಂದರು.

ಐಡೆಂಟಿಟಿ ದುರ್ಬಳಕೆ: ವ್ಯಕ್ತಿಯೊಬ್ಬರ ಆನ್‌ಲೈನ್ ಗುರುತನ್ನು (ಪ್ರೊಫೈಲ್) ಬಳಸಿಕೊಂಡು, ಬೇರೊಬ್ಬ ವ್ಯಕ್ತಿ ಅಪರಾಧ ಕೃತ್ಯಗಳನ್ನು ಎಸಗುವುದನ್ನು ಐಡೆಂಟಿಟಿ ದುರ್ಬಳಕೆ ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳ ಸಂದರ್ಭದಲ್ಲಿ ಅಪರಾಧಿಯು ಎಸಗಿದ ಕೃತ್ಯಕ್ಕೆ, ನಿಜವಾದ ವ್ಯಕ್ತಿ ತನಿಖೆಯನ್ನು ಎದುರಿಸಬೇಕಾಗುತ್ತದೆ. ಮಾದಕ ವಸ್ತು ಕಳ್ಳಸಾಗಣೆ, ಆನ್‌ಲೈನ್ ವಂಚನೆ ಮತ್ತು ಡಾಕ್ ವೆಬ್ ವಹಿವಾಟುಗಳಿಗೆ ಇಂತಹ ಗುರುತುಗಳನ್ನು ಬಳಸಿಕೊಳ್ಳ ಲಾಗುತ್ತದೆ ಎಂದು ತಿಳಿಸಿದರು.

14 ಕ್ಯಾರೆಕ್ಟರ್ ಪಾಸ್ವರ್ಡ್ ಇಡಿ: ಆನ್‌ಲೈನ್‌ನಲ್ಲಿ ಮಾತ್ರ ಸೈಬರ್ ಕ್ರೈಂ ಆಗಲ್ಲ. ಬೇರೆ ರೀತಿಯಲ್ಲಿಯೂ ಆಗುತ್ತದೆ. ಟಿಕೆಟ್ ಕಾರ್ಡ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವಾಗ ಅದು ಯಾರ ಹೆಸರಿನದ್ದು ಎಂಬುದನ್ನು ಚೆಕ್ ಮಾಡಿ. ಹಣ ಕಳುಸುವುದಾರೆ ಯುಪಿಐ ಸಾಫ್ಟ್ವೇರ್ ಕೇಳುತ್ತದೆ. ಬೇರೆ ರೀತಿಯಲ್ಲಿ ಕೇಳಿದರೆ ಯುಪಿಐ ನಂಬರ್ ಕಳಸಬಾರದು. ಕಂಪ್ಯೂಟರ್‌ಗೆ ಆಂಟಿ ವೈರಸ್ ಹಾಕಿಕೊಳ್ಳಿ. ಪಾಸ್ವರ್ಡ್ ತುಂಬಾ ಎಚ್ಚರಿಕೆಯಿಂದ ಹಾಕಬೇಕು. 14 ಕ್ಯಾರೆಕ್ಟರ್ ಪಾಸ್ವರ್ಡ್ ಇರಲಿ. ನಂಬರ್, ಸಿಂಬಲ್‌ನಿಂದ ಕೂಡಿರಲಿ. ಡಕ್ ಡಕ್‌ಗು ಎಂಬುದು ಆಪ್ ಬಳಕೆ ಮಾಡಿದರೆ ನಾವು ಸರ್ಚ್ ಮಾಡುವ ವಸ್ತುಗಳು ಬೇರೆಯವರಿಗೆ ಸಿಗಲ್ಲ. ಡಾರ್ಕ್‌ವೆಬ್ ಬಳಕೆ ಮಾಡಬಾರದು ಎಂದು ಮಾಹಿತಿ ನೀಡಿದರು.

ಸೈಬರ್ ಕ್ರೈಂನಿಂದ ವರ್ಷಕ್ಕೆ 6 ಟ್ರಿಲಿಯನ್ ಡಾಲರ‍್ಸ್ ನಷ್ಟ: ಸೈಬರ್ ಕ್ರೈಂನಿಂದ ಜಾಗತಿಕವಾಗಿ ವರ್ಷಕ್ಕೆ 6 ಟ್ರಿಲಿಯನ್ ಡಾಲರ‍್ಸ್ ನಷ್ಟ , ತಿಂಗಳಿಗೆ 500 ಬಿಲಿಯನ್ ಡಾಲರ‍್ಸ್ ನಷ್ಟ , ವಾರಕ್ಕೆ 115.4 ಬಿಲಿಯನ್ ನಷ್ಟ , ದಿನಕ್ಕೆ 16.4 ಬಿಲಿಯನ್ ಡಾಲರ್ ನಷ್ಟ , ನಿಮಿಷಕ್ಕೆ 11.4 ಮಿಲಿಯನ್ ನಷ್ಟ , ಕ್ಷಣಕ್ಕೆ 19000 ಡಾಲರ್ ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಈ ಆಪ್ ಇನ್ಸ್ಟಾಲ್‌ಮಾಡಿ ಮಕ್ಕಳಿಗೆ ಮೊಬೈಲ್ ನೀಡಿ
ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಗೂಗಲ್ ಫ್ಯಾಮಿಲಿ ಲಿಂಕ್ ಎಂಬ ಆಪ್ ಇನ್‌ಸ್ಟಾಲ್ ಮಾಡಿ ಕೊಡಿ. ಏಕೆಂದರೆ ಈ ಆಪ್ ಇನ್‌ಸ್ಟಾಲ್‌ಮಾಡಿದರೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾತ್ರ ಆಕ್ಸೆಸ್ ಮಾಡಬಹುದು. ಬೇರೆ ಯಾವುದಕ್ಕೂ ಅವಕಾಶ ಇರುವುದಿಲ್ಲ. ಅಲ್ಲದೇ ಸೈಬರ್ ಖದೀಮರಿಂದಲೂ ದೂರ ಉಳಿಯಬಹುದು

ಪ್ರೊಫೈಲ್‌ಗೆ ದೂರದಿಂದ ತೆಗೆದಿರುವ ಫೋಟೋ ಇಡಿ 

ಸಾಮಾಜಿಕ ಜಾಲತಾಣ ಬಳಸುವವರು ಪ್ರೊಫೈಲ್‌ಗೆ ದೂರದಿಂದ ತೆಗೆದಿರುವ ಫೋಟೋ ಇಟ್ಟುಕೊಳ್ಳಿ, ಸೆಕ್ಯುರಿಟಿ ಆನ್ ಮಾಡಿ, ಪ್ರೊಫೈಲ್‌ನಲ್ಲಿ ಲಾಕ್ ಮಾಡಿ, ಗೊತ್ತಿರುವವರ ಫ್ರೆಂಡ್ ರಿಕ್ವೆಸ್ಟ್ ಮಾತ್ರ ಸ್ವೀಕರಿಸಿ. ಏಕೆಂದರೆ ನಿಮ್ಮ ಪ್ರೋಫೈಲ್‌ನಲ್ಲಿರುವ ನಿಮ್ಮ ಫೋಟೊಗಳನ್ನು ಡೌನ್ ಲೋಡ್ ಮಾಡಿಕೊಂಡಿ ಆ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಹಣ ಕೀಳುತ್ತಾರೆ ಸೈಬರ್ ಖದೀಮರು ಎಂದು ಸಲಹೆ ನೀಡಿದ್ದಾರೆ.

***

ಪೊಲೀಸರಿಗೆ ಹಾಗೂ ಕೆಲ ನ್ಯಾಯಾಧೀಶರಿಗೂ ಈ ಸೈಬರ್ ಕಾನೂನು ಬಗ್ಗೆ ಮಾಹಿತಿ ಇಲ್ಲ. ಆದರೆ ಡಾ.ಅನಂತ ಪ್ರಭು ಅವರು ಕಳೆದ 10 ವರ್ಷಗಳಿಂದ ಪೊಲೀಸರಿಗೆ, ನ್ಯಾಯಾಧೀಶರಿಗೆ ಹಲವು ತರಬೇತಿ ಕಾರ್ಯಾಗಾರ ನೀಡಿದ್ದಾರೆ. ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಇದುವರೆಗೂ 2500 ಹೆಚ್ಚು ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದಾರೆ. 25ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಸೈಬರ್ ಅಪರಾಧ ಗಳ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿದ್ದಾರೆ.
-ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ ಸಂಪಾದಕರು