Sunday, 26th May 2024

ರಾಜ್ಯದ ಆಪದ್ಬಾಂಧವ ಎಂದು ಅವರನ್ನು ಕೃಷ್ಣ ಹೊಗಳಿದ್ದರು !

ಸಂಸ್ಮರಣೆ

ಜಿ.ಎಂ.ಇನಾಂದಾರ್‌

ಅಪರೂಪದ ವ್ಯಕ್ತಿತ್ವದ ದೂರದರ್ಶಿ ಮುತ್ಸದ್ಧಿಯನ್ನು ಕರ್ನಾಟಕ ಹಾಗೂ ದೇಶ ಕಳಕೊಂಡಿದೆ. ಅವರಿಗೆ ಗೌರವ ಸಲ್ಲಿಸುವ ಸೂಕ್ತ ಸ್ಮಾರಕವೊಂದು ಬೆಂಗಳೂರಿ ನಲ್ಲಿ ನಿರ್ಮಾಣವಾಗಬೇಕಿದೆ. ಸೆಪ್ಟೆಂಬರ್ ೨೨ ಹಾಗೂ ೨೩ ರಂದು ಅನಂತಕುಮಾರ ಪ್ರತಿಷ್ಠಾನ ಹಾಗೂ ಅದಮ್ಯ ಚೇತನ ಸಂಸ್ಥೆಗಳು ಅವರ ಹುಟ್ಟುಹಬ್ಬ ವನ್ನು ಪ್ರತಿಭಾ ಪುರಸ್ಕಾರದ ಮೂಲಕ ಆಚರಿಸಲಿವೆ. ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಈ ಕಾರ್ಯಕ್ರಮವನ್ನು ಸೆ. ೨೨ರಂದು ಮಧ್ಯಾಹ್ನ ೨:೦೦ ಗಂಟೆಗೆ ಉದ್ಘಾಟಿಸಲಿzರೆ. ಈ ಹಿನ್ನೆಲೆಯಲ್ಲಿ ಅನಂತ್‌ಕುಮಾರ್ ವ್ಯಕ್ತಿತ್ವದ ಬಗೆಗಿನ ಪುಟ್ಟ ಝಲಕ್ ಇಲ್ಲಿದೆ.

ಇವತ್ತು ಭಾರತೀಯ ಜನತಾ ಪಾರ್ಟಿಯ ಬಹಳಷ್ಟು ನಾಯಕರು ಅನಂತಕುಮಾರ್ ಜೀ ಇದ್ದಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ ಎಂದು ಹಳಹಳಿಸುತ್ತಾರೆ. ಇದೇ ರೀತಿ, ಕರ್ನಾಟಕಕ್ಕೆ ಹಿಂದೆ ೨೦೦೨ರಲ್ಲಿ ಕಾವೇರಿ ನೀರಿನ ಸಮಸ್ಯೆ ಬಂದಾಗ ಅನಂತಕುಮಾರರ ವಿಶೇಷ ಪರಿಶ್ರಮದಿಂದ ಸಮಸ್ಯೆ ಬಗೆಹರಿದಿತ್ತು. ಆಗಿನ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ ಅವರು ಅನಂತಕುಮಾರರ ದೆಹಲಿ ಮನೆಗೆ ತೆರಳಿ ‘ನೀವು ಕರ್ನಾಟಕದ ಆಪದ್ಬಾಂಧವ’ ಎಂದು ಹೊಗಳಿದ್ದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ, ಕಾಂಗ್ರೆಸ್ ನಾಯಕರು ಕೂಡ ಅನಂತಕುಮಾರರಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ ಎಂದು ಹಳಹಳಿಸಿದರೆ ಆಶ್ಚರ್ಯವೇನಿಲ್ಲ.

ದೇಶಾದ್ಯಂತ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅಟಲ್ ಜೀ, ಆದ್ವಾಣಿ ಜೀ , ದಿ. ಭಾವೂರಾವ ದೇಶ ಪಾಂಡೆ, ಜಗನ್ನಾಥರಾವ್ ಜೋಶಿ ಸ್ಮರಣೀಯರು.  ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ-ಅನಂತಕುಮಾರ್ ಜೋಡಿ. ಕೇಂದ್ರ ಸರಕಾರದ ಮಂತ್ರಿಯಾಗಿ, ಒಂಬತ್ತು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ, ಕುಡಿಯುವ ನೀರಿಗಾಗಿ ಕಾವೇರಿ ೪ನೇ ಹಂತ, ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಳ ಹೀಗೆ ಹತ್ತು ಹಲವಾರು ಯೋಜನೆ ಗಳನ್ನು ಕರ್ನಾಟಕಕ್ಕೆ ಕೊಟ್ಟ ಶ್ರೇಯಸ್ಸು ಅನಂತಕುಮಾರರಿಗೆ ಸಲ್ಲುತ್ತದೆ. ೧೯೮೬ರಲ್ಲಿ, ಅನಂತಕುಮಾರ್ ಪಕ್ಷ ಸೇರಿದಾಗ ಬಿಜೆಪಿಯ ಶಾಸಕರ ಸಂಖ್ಯೆ ಕೇವಲ ಒಂದು. ಅವರು ತಮ್ಮ ಬದುಕಿನ ಯಾತ್ರೆ ಮುಗಿಸಿದಾಗ ಇದ್ದ ಒಟ್ಟು ಶಾಸಕರು ೧೦೪.

ಅನಂತಕುಮಾರ್, ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ೧೯೮೯ರಲ್ಲಿ ಮೊದಲ ಚುನಾವಣೆ ಎದುರಿಸಿದರು. ಆಗ ಮೊಟ್ಟ ಮೊದಲ ಬಾರಿಗೆ ಬಿಜೆಪಿ ೧೧೮ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗದಿಂದಲೂ, ಹಿರಿಯ ನಾಯಕ ಬಿ.ಬಿ.ಶಿವಪ್ಪನವರು ತಮ್ಮ ಕ್ಷೇತ್ರವಾದ ಸಕಲೇಶಪುರ ದಿಂದಲೂ ಸ್ಪರ್ಧಿಸಿದ್ದರು. ಆಗ, ಅನಂತಕುಮಾರ್ ಇಡೀ ರಾಜ್ಯದ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಿಕೊಂಡು ೧೮ ದಿನಗಳ ಕಾಲ ಸತತ ಪ್ರವಾಸ ಮಾಡಿದರು. ಇಬ್ಬರು ಚಾಲಕರ ಸಮೇತ ಒಂದು ಅಂಬಾಸಿಡರ್ ಕಾರಿನಲ್ಲಿ ನಿರಂತರ ರಾಜ್ಯಾದ್ಯಂತ ತಿರುಗಾಡಿದರು. ಸತತ ೧೮ ದಿನಗಳನ್ನು ಕಾರಿನಲ್ಲಿಯೇ ಕಳೆದು ಪ್ರಚಾರ ಕೈಗೊಂಡರು. ಪ್ರತಿದಿನ ಆರರಿಂದ ಏಳು ಚುನಾವಣಾ ಪ್ರಚಾರ ಸಭೆಗಳನ್ನು ಆಯಾ ಕ್ಷೇತ್ರಗಳ ವಿದ್ಯಾರ್ಥಿ ಪರಿಷತ್, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರನ್ನು ಪ್ರಚಾರ ಕಾರ್ಯದಲ್ಲಿ ತತ್ಪರರಾಗುವಂತೆ ಹುರಿದುಂಬಿಸಿದರು.

ಘಟನೆ ೧: ದಿನಾಂಕ, ೧೨ನೇ ಜುಲೈ ೨೦೦೩ ಅನಂತಕುಮಾರ್ ಆ ದಿನ ಕಲಬುರಗಿಯಲ್ಲಿದ್ದರು. ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವರಾಗಿ ಭಾಗಿಯಾ
ಗಿದ್ದರು. ಸರಕಾರಿ ವಾಹನದಲ್ಲಿ ಅನಂತಕುಮಾರ್ ಹಾಗೂ ರಘುನಾಥ ಮಲ್ಕಾಪುರೆ ಪ್ರಯಾಣಿಸುತ್ತಿದ್ದರು. ಅನಂತಕುಮಾರರ ಫೋನ್ ರಿಂಗಣಿಸಿತು. ಚುಟುಕು ಸಂಭಾಷಣೆ ಮುಗಿಸಿದ ನಂತರ ಅನಂತ ಕುಮಾರ್ ‘ರಘುನಾಥ ರಾವ್, ನಿಮ್ಮ ಕಾರನ್ನು ಮುಂದೆ ಬರಲು ಹೇಳಿ’ಎಂದರು. ರಘುನಾಥ್ ಕಾರು ಮುಂದೆ ಬಂತು. ಸರಕಾರಿ ವಾಹನದಿಂದ ಇಳಿದು ಅನಂತಕುಮಾರ್, ಆ ವಾಹನದಲ್ಲಿ ಕುಳಿತರು.

ಚಕಿತರಾಗಿ ನೋಡುತ್ತಿದ್ದ ಮಲ್ಕಾಪುರೆಯವರಿಗೆ ‘ನನ್ನ ರಾಜೀನಾಮೆ ಸ್ವೀಕೃತವಾಗಿದೆ. ನಾನೀಗ ಕೇಂದ್ರ ಸಚಿವನಲ್ಲ. ಆದ್ದರಿಂದ, ಸರಕಾರಿ ವಾಹನ ಬೇಡ’
ಎಂದರು. ಈ ರೀತಿಯ ಸೂಕ್ಷ್ಮಜ್ಞತೆ ಇಂದಿನ ರಾಜಕಾರಣದಲ್ಲಿ ತುಂಬಾ ಅಪರೂಪ.

ಘಟನೆ-೨: ನಾನು ಆಗ ವಿಶೇಷ ಕರ್ತವ್ಯಾಧಿಕಾರಿ. ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾವೆಲ್ಲ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದೆವು.
ಮೈಸೂರಿನಿಂದ ಕೊಟ್ಟಿದ್ದ ಅಕ್ಷಾಂಶ-ರೇಖಾಂಶ ತಲುಪಿದಾಗ ಸುತ್ತೂರು ಮಠವಾಗಲಿ, ಹೆಲಿಕಾಪ್ಟರ್ ಇಳಿಯಲು ಮಾಡಿದ ‘ಎಚ್’ ಅಕ್ಷರವಾಗಲಿ, ನಮಗೆ
ಗುರುತಾಗಲಿ ಎಂದು ಹೊತ್ತಿಸಿದ್ದ ಹೊಗೆಯಾಗಲಿ ಕಾಣಲೇ ಇಲ್ಲ. ಹೆಲಿಕಾಪ್ಟರ್‌ನಲ್ಲಿ ಮರಳಿ ಬೆಂಗಳೂರಿಗೆ ಹೋಗುವಷ್ಟು ಇಂಧನ ಮಾತ್ರವಿತ್ತು. ನಾವೆಲ್ಲ
ತುಸು ಗಲಿಬಿಲಿಗೊಂಡೆವು. ಒಂದಿಷ್ಟೂ ವಿಚಲಿತ ರಾಗದ ಅನಂತಕುಮಾರ್, ಹಾರಾಡುತ್ತಿದ್ದ ನಮ್ಮ ಹೆಲಿಕಾಪ್ಟರನ್ನು ಮೈಸೂರಿಗೆ ಹತ್ತಿರ ಹೋಗುವಂತೆ
ಸೂಚಿಸಿದರು. ನಂತರ, ನಾವು ಮತ್ತೊಮ್ಮೆ ಸರಿಯಾದ ಅಕ್ಷಾಂಶ-ರೇಖಾಂಶಗಳನ್ನು ಮೈಸೂರಿನ ಜಿಲ್ಲಾಧಿಕಾರಿಗಳಿಂದ ಪಡೆದುಕೊಂಡು ಸುತ್ತೂರಿಗೆ ತಲುಪಿದೆವು.

ಸುತ್ತೂರಿನ ಕಾರ್ಯಕ್ರಮ ಮುಗಿಸಿ ಹೊರಟಾಗ ಬೆಂಗಳೂರಿನವರೆಗೆ ಹೆಲಿಕಾಪ್ಟರ್ ಹೋಗಲು ಇಂಧನ ವಿಲ್ಲ ಎಂದು ಪೈಲೆಟ್ ತಿಳಿಸಿದರು. ನಂತರ, ಚೆನ್ನ
ಪಟ್ಟಣದವರೆಗೂ ಹೆಲಿಕಾಪ್ಟರ್‌ನಲ್ಲಿ ತೆರಳಿ, ನಂತರ ಕಾರಿನಲ್ಲಿ ಐಐಎಸ್ಸಿಗೆ ಬಂದು, ಅಲ್ಲಿ ನಿರ್ಧರಿತ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಸಂಕಟ ಸಮಯದಲ್ಲಿ ವಿಚಲಿತರಾಗದೇ ಪರ್ಯಾಯ ಹುಡುಕುತ್ತಿದ್ದದ್ದು ಅನಂತಕುಮಾರ್ ವಿಶೇಷ.

ಘಟನೆ-೩: ಅನಂತಕುಮಾರರು ಕೇಂದ್ರದಲ್ಲಿ ರಾಸಾಯನಿಕ ರಸಗೊಬ್ಬರ ಹಾಗೂ ಔಷಧಗಳ ಖಾತೆಯ ಮಂತ್ರಿ. ಬೆಂಗಳೂರಿನ ಖ್ಯಾತ ಸಂಸ್ಥೆಯಾದ
ಎಸ್‌ಎಲಎನ್ ಟೆಕ್ನಾಲಜಿಯ ಡಿ.ಆರ್. ಸುಬ್ರಮಣ್ಯ, (ಉಪಗ್ರಹಗಳಿಗಾಗಿ ಹಾಗೂ ಚಂದ್ರಯಾನಕ್ಕೆ ಟ್ರ್ಯಾಕಿಂಗ್ ಸಿಸ್ಟಮ್ ತಯಾರಿಸುತ್ತಿರುವ ಸಂಸ್ಥೆ)
ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದಿದ್ದರು. ಔಷಧ ತಯಾರಿಸುವ ಸಣ್ಣಕೈಗಾರಿಕೆಗಳ ನಿಯೋಗ ಅದಾಗಿತ್ತು. ಸುಮಾರು ೫೦ ಪುಟಗಳ ಪವರ್
ಪಾಯಿಂಟ್ ಪ್ರಸೆಂಟೇಶನ್‌ನೊಂದಿಗೆ ನಿಯೋಗವು ಅನಂತಕುಮಾರರನ್ನು ಭೇಟಿ ಮಾಡಿತು. ಸಮಯ ಅಭಾವವಿದ್ದ ಕಾರಣ ಬೇಗ ಬೇಗ ವೀಕ್ಷಣೆ ಮುಗಿಸಲಾ
ಯಿತು. ಅನಂತಕುಮಾರ್ ನಿಯೋಗದವರಿಗೆ ಬೆಂಬಲ ನೀಡುವುದಾಗಿಯೂ, ಅವರ ಕೆಲಸಗಳನ್ನು ಮಾಡಲು ಅವಶ್ಯವಿರುವ ನೀತಿ ನಿರೂಪಣೆ ಮಾಡು ವುದಾಗಿ ತಿಳಿಸಿದರು.

ನಂತರ, ಡಿಆರ್‌ಎಸ್ ಅವರು ಅನಂತ ಕುಮಾರರನ್ನು ಕೇಳಿದರು. ‘ಸರ್, ಅಷ್ಟು ಬೇಗ ನಿರ್ಧಾರಕ್ಕೆ ಹೇಗೆ ಬಂದಿರಿ?‘ ಅನಂತಕುಮಾರ್ ಉತ್ತರ ಸ್ಪಷ್ಟವಾಗಿತ್ತು, ‘ಸುಬ್ರಮಣ್ಯ, ನಾನು ನೋಡುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇದರಿಂದ ಏನಾಗುತ್ತದೆ? ಅನುಕೂಲವೋ, ಅನನುಕೂಲವೋ? ಅಷ್ಟೆ ಸಿಂಪಲ್’. ಆದ್ದರಿಂದಲೇ, ಅನಂತಕುಮಾರ್ ಬಲಿಷ್ಠ ಫಾರ್ಮಾ ಲಾಬಿಯ ವಿರೋಧದ ನಡುವೆಯೂ ಜನೌಷಧ ಮಳಿಗೆಗಳನ್ನು ದೇಶಾದ್ಯಂತ ಜನಪ್ರಿಯಗೊಳಿಸಿ ಜನರಿಗೆ ಅತ್ಯಂತ ಕಡಿಮೆ ಬೆಲೆಗೆ ಔಷಧಗಳು ಸಿಗುವಂತೆ ಮಾಡಿದರು.

ಘಟನೆ-೪: ೨೦೦೪ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯುತ್ತಲಿತ್ತು. ಚುನಾವಣೆಗೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದವು. ಅನಂತಕುಮಾರ್ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿದ್ದರು. ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಶುರುವಾಗಿತ್ತು. ಅನಂತಕುಮಾರರ ಬಳಿ ಉತ್ತರ ಕರ್ನಾಟಕದ ಖ್ಯಾತ ಉದ್ಯಮಿಯೊಬ್ಬರು ಸಮಯ ಕೇಳಿದ್ದರು. ಅನಂತಕುಮಾರರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯ ಅವರಿಗೆ ಸಮಯ ನೀಡಲಾಗಿತ್ತು. ಉದ್ಯಮಿ ಭೇಟಿಯಾಗಿ ಪಕ್ಷದ ಪ್ರಚಾರಕ್ಕೆ ಹೆಲಿಕಾಪ್ಟರ್ ನೀಡುವುದಾಗಿಯೂ, ಪಕ್ಷದ ಚುನಾವಣಾ ನಿಧಿಗೆ ಚೆಕ್ ಮೂಲಕ ದೇಣಿಗೆ ನೀಡುವುದಾಗಿಯೂ ತಿಳಿಸಿ, ಬೆಳಗಾವಿ ಕ್ಷೇತ್ರದ ಲೋಕಸಭೆಯ ಟಿಕೆಟ್ ಆಕಾಂಕ್ಷಿ ಯಾಗಿರುವುದಾಗಿ ತಿಳಿಸಿದರು.

ಅನಂತಕುಮಾರ ಹೇಳಿದ್ದು ಒಂದೇ ಮಾತು ‘ತಾವು ಬಹಳ ತಡವಾಗಿ ಬಂದಿದ್ದೀರಿ. ನಾವು ಸುರೇಶ ಅಂಗಡಿಯವರಿಗೆ ವರ್ಷಗಳ ಹಿಂದೆಯೇ ಮಾತು
ಕೊಟ್ಟಾಗಿದೆ. ಈಗ ಅವರಿಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ’ ಎಂದರು. ಆ ಚುನಾವಣೆಯಲ್ಲಿ ಸುರೇಶ ಅಂಗಡಿಯವರು ಪ್ರಥಮ ಬಾರಿಗೆ ಲೋಕಸಭೆಗೆ
ಆಯ್ಕೆಯಾದರು. ಮುಂದೆ ಅವರು ರೈಲ್ವೆ ಖಾತೆಯ ರಾಜ್ಯ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದರು. ಈ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅತಿ
ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಕರ್ನಾಟಕದ ಅಭಿವೃದ್ಧಿ, ನೆಲ, ಜಲ ಹಾಗೂ ಭಾಷೆಯ ವಿಷಯಗಳಲ್ಲಿ ಸ್ಪಷ್ಟ ನಿಲುವು ಹೊಂದಿದ್ದ ರಿಂದ ಅನಂತಕುಮಾರ್ ಬಹುಬೇಗ ಜನಾನುರಾಗಕ್ಕೆ
ಪಾತ್ರರಾದರು. ೨೦೦೨ರಲ್ಲಿ, ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅನಂತಕುಮಾರ್ ಯಶಸ್ವಿಯಾದರು. ಆದರೆ, ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ ಆಗ ಕ್ಷೀಣವಾಗಿತ್ತು. ಒಳಜಗಳಗಳ ದೆಸೆಯಿಂದ ಬಿಜೆಪಿ ದುರ್ಬಲವಾಗಿತ್ತು.ಆಂತರಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಆರಿಸಿ ಬರುವ ಸೂಚನೆ ಇತ್ತು. ಅಲ್ಲದೇ, ಅನೇಕ ಲೋಕಸಭಾ ಕ್ಷೇತ್ರಗಳು ಕೈತಪ್ಪುವ ಹಾದಿಯಲ್ಲಿವೆ ಎಂದು ಸಮೀಕ್ಷೆ ತಿಳಿಸಿತ್ತು. ಇದರಿಂದ, ಚಿಂತಿತರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು, ಮಹಾರಾಷ್ಟ್ರಕ್ಕೆ ಪ್ರಮೋದ್ ಮಹಾಜನ್, ರಾಜಸ್ಥಾನಕ್ಕೆ ವಸುಂಧರಾ ರಾಜೇ ಹಾಗೂ ಕರ್ನಾಟಕಕ್ಕೆ ಅನಂತ ಕುಮಾರ್ ಅವರನ್ನು ನಿಯೋಜಿಸಿದರು. ಈ ಮೂವರು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕಾರಣಕ್ಕೆ ತೆರಳಿದರು. ಕರ್ನಾಟಕ
ರಾಜ್ಯ ಚುನಾವಣೆಗಳಲ್ಲಿ ಪಕ್ಷದ ಸ್ಥಾನವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸ್ಥಾನವನ್ನು ತೊರೆಯಲು ಅನಂತಕುಮಾರ್ ಸ್ವಲ್ಪವೂ ಹಿಂಜರಿಯ ಲಿಲ್ಲ.

೨೦೦೩ರಲ್ಲಿ, ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅನಂತಕುಮಾರರು ಪಕ್ಷದ ಬಲವರ್ಧನೆಯಲ್ಲಿ ನಿರತ ರಾದರು. ಅವರ ಜತೆಗೆ ಯಡಿಯೂರಪ್ಪನವರು
ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಜತೆಗೂಡಿದರು. ಅವರ ಅಸಾಧಾರಣ ಸಂಘಟನಾ ಚಾತುರ್ಯ, ಚುನಾವಣಾ ತಂತ್ರ, ವ್ಯೂಹರಚನಾ ಕೌಶಲ, ರಾಜಕೀಯ ಸಾಮರ್ಥ್ಯ ಮತ್ತು ನಿರಂತರ ಪರಿಶ್ರಮ ಗಳಿಂದಾಗಿ ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆ ಸಾಧ್ಯವಾಯಿತು. ಮುಂದಿನ ಹತ್ತು ತಿಂಗಳು ನಿರಂತರ ಪ್ರವಾಸ ಮಾಡಿದ ಅನಂತಕುಮಾರ್, ಪಕ್ಷವನ್ನು ಬಲಗೊಳಿಸತೊಡಗಿದರು. ಪಕ್ಷವು ಕೇವಲ ಒಂದು ಸಮುದಾಯದ ಪ್ರತಿನಿಧಿಯಾಗದೆ ಸರ್ವ ಸಮುದಾಯಗಳಿಂದ ಬೆಂಬಲ ಪಡೆಯುವ ಪಕ್ಷವಾಗಬೇಕು ಎಂಬ ಸ್ಪಷ್ಟತೆ ಹೊಂದಿದ್ದ ಅನಂತಕುಮಾರ್, ವಿವಿಧ ಶೋಷಿತ ಸಮುದಾಯಗಳ ನಾಯಕರನ್ನು ಪಕ್ಷಕ್ಕೆ ಕರೆತಂದರು.

ಗೋವಿಂದ ಕಾರಜೋಳ, ಎಸ್. ಬಂಗಾರಪ್ಪ, ಕೆ.ಬಿ. ಶಾಣಪ್ಪ, ಸಿ.ಸಿ.ಪಾಟೀಲ, ಲಕ್ಷ್ಮಣ ಸವದಿ, ಎ.ರವೀಂದ್ರ, ಸಿ.ಎಂ. ಉದಾಸಿ ಹೀಗೆ ಅನೇಕ ನಾಯಕರು ಬಿಜೆಪಿ ಸೇರಿದರು. ೨೦೦೪ರ ಚುನಾವಣೆ ಫಲಿತಾಂಶ ಹೊರಬಂದಾಗ ಬಿಜೆಪಿ ತನ್ನ ೭೯ ಶಾಸಕರೊಡನೆ ಜನತಾದಳದ ಐವರು ಶಾಸಕರು ಸೇರಿ
ಒಟ್ಟು ೮೪ ಶಾಸಕರನ್ನು ಹೊಂದಿದ್ದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆ ಚುನಾವಣೆಯಲ್ಲಿ ಒಟ್ಟಾರೆ ಮತಗಳಿಕೆಯಲ್ಲಿ ಶೇ.೨೮.೩೩ರಷ್ಟು ಮತ
ಪಡೆಯುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತು. ಅಲ್ಲಿಯವರೆಗೆ ಬಿಜೆಪಿಯನ್ನು ಆಡಳಿತ ನಡೆಸಲಾಗದ ಒಂದು fringe
ಪಾರ್ಟಿ ಎಂದು ಭಾವಿಸುತ್ತಿದ್ದ ಜನರಿಗೆ ಇದೀಗ ಬಿಜೆಪಿ ಒಂದು ಸರಕಾರ ಮಾಡಬಲ್ಲ ಸಮರ್ಥ ಪಕ್ಷ ಎಂಬ ವಿಶ್ವಾಸ ಮೂಡಿತು. ಮತದಾರರ ಭಾವನೆಯ
ಪರಿಣಾಮವಾಗಿ, ೨೦೦೮ರಲ್ಲಿ, ಬಿಜೆಪಿ ೧೧೦ ಸ್ಥಾನ ಗೆಲ್ಲುವಂತಾಯಿತು.

(ಲೇಖಕರು ಅನಂತಕುಮಾರ್ ಪತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರು)

Leave a Reply

Your email address will not be published. Required fields are marked *

error: Content is protected !!