Tuesday, 23rd April 2024

ಚಾರ್‌ ಧಾಮ್ ಯಾತ್ರೆ ಇನ್ನು ಸುಲಭ: ವರ್ಷಾಂತ್ಯ ರೈಲ್ವೆ ಸೇವೆ

ವಿಶ್ವವಾಣಿ ವಿಶೇಷ: ರಾಧಾಕೃಷ್ಣ ಎಸ್.ಭಡ್ತಿ

ಋಷಿಕೇಶ-ಕರ್ಣಪ್ರಯಾಗ ನಡುವೆ ದೇಶದ ಅತಿ ಉದ್ದದ ಸುರಂಗ ಮಾರ್ಗ

೧೨೬ ಕಿಮೀ ಪೈಕಿ ಶೇ.೮೫ರಷ್ಟು ಭಾಗದ ಪಯಣ ಸಾಗಲಿದೆ ಸುರಂಗದಲ್ಲಿಯೇ

ಋಷಿಕೇಶ: ದೇಶದ ಮಹತ್ವಾಕಾಂಕ್ಷಿ ರೈಲ್ವೆ ಮಾರ್ಗವೊಂದು ಸೇವೆಗೆ ಬಹುತೇಕ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಹಿಮಾಲಯದ ತಪ್ಪಲಿನ ಪ್ರಮುಖ ಯಾತ್ರಾಸ್ಥಳಗಳಾದ ಚಾರ್‌ ಧಾಮ್‌ಗಳನ್ನು ನಾಗರಿಕ ಜಗತ್ತಿನೊಂದಿಗೆ ಬೆಸೆಯುವ ಯೋಗನಗರಿ ಋಷಿಕೇಶ ಹಾಗೂ ಕರ್ಣ ಪ್ರಯಾಗ ನಡುವಿನ ಬ್ರಾಡ್‌ಗೇಜ್ ರೈಲ್ವೆ ಮಾರ್ಗವು ಈ ವರ್ಷದ ಕೊನೆಗೆ ಸಂಚಾರಕ್ಕೆ ಮುಕ್ತವಾಗಲಿದೆ.

ಹವಲು ರೀತಿಯಿಂದ ಈ ರೈಲ್ವೆ ಮಾರ್ಗ ವಿಶಿಷ್ಟವೆನಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಚೀನಾದ ವಿಸ್ತರಣಾ ದಾಹವನ್ನು ಹತ್ತಿಕ್ಕುವ ಭಾಗವಾಗಿ ಭಾರತ-ಚೀನಾ ಗಡಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಭಾರತೀಯ ಭೂತಂತ್ರದ ಉಪಕ್ರಮಗಳಲ್ಲಿ ಇದೂ ಒಂದು. ಹೀಗಾಗಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಕಾರ್ಯತಂತ್ರದ ಭಾಗವೆಂದೇ ಪರಿಗಣಿಸಲಾಗಿದೆ. ಕೇಂದ್ರ ಸರಕಾರದ ಪ್ರಗತಿ (ಪ್ರೊ ಆಕ್ಟಿವ್ ಗವರ್ನೆನ್ಸ್ ಮತ್ತು ಟೈಮ್ಲಿ ಇಂಪ್ಲಿಮೆಂಟೇಶನ್) ಪೋರ್ಟಲ್ ನಡಿ ನಿರಂತರ ನಿಗಾಕ್ಕೆ ಒಳಪಟ್ಟಿರುವ ಈ ಮಾರ್ಗ ಸೇವೆಗೆ ಸಿದ್ಧವಾದಲ್ಲಿ, ಉತ್ತರಾಖಂಡ ರಾಜ್ಯದ ಗರ್ವಾಲ್ ಪ್ರದೇಶದ ಯಮುನೋತ್ರಿ, ಗಂಗೋತ್ರಿ, ಬದರಿನಾಥ್ ಮತ್ತು ಕೇದಾರನಾಥ ಯಾತ್ರೆ ಈಗಿನಂತೆ ದುರ್ಗಮವಾಗಿ ಉಳಿಯದೇ ಸುಲಲಿತವಾಗುವುದರಲ್ಲಿ ಅನುಮಾನವಿಲ್ಲ.

ಯೋಗ ನಗರಿ ಋಷಿಕೇಶ ರೈಲು ನಿಲ್ದಾಣದಿಂದ ಆರಂಭಗೊಳ್ಳುವ ಮಾರ್ಗ ಕರ್ಣಪ್ರಯಾಗದಲ್ಲಿ ಕೊನೆಗೊಳ್ಳುತ್ತಿದ್ದು, ಒಟ್ಟು ೧೬,೨೦೦ ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಸಾಗಿದೆ. ಇದರಿಂದ ಋಷಿಕೇಶ ಮತ್ತು ಕರ್ಣಪ್ರಯಾಗ ನಡುವಿನ ಈಗಿನ ಸುದೀರ್ಘ ೬-೭ ಗಂಟೆಗಳ ಪ್ರಯಾಣದ ಬದಲಿಗೆ ಕೇವಲ ೨ ಗಂಟೆಗೆ ಇಳಿಯಲಿದೆ. ಇನ್ನೂ ವಿಶೇಷವೆಂದರೆ ಕಡಿದಾದ ಪರ್ವತ ಶ್ರೇಣಿಗಳಲ್ಲಿ ಅಂಕುಡೊಂಕಿನ ರೈಲ್ವೆ ಪಥ ನಿರ್ಮಿಸುವ ಬದಲಿಗೆ ಶೇ.೮೫ರಷ್ಟು ಭಾಗ ಸುರಂಗದಲ್ಲೇ ಸಾಗಲಿದೆ. ಅಂದರೆ ಬೃಹತ್ ಪರ್ವತಗಳ ನಡುವೆ ಒಂದಿನಿತೂ ಅರಣ್ಯ ನಾಶವಾಗದಂತೆ, ಪರಿಸರಕ್ಕೆ ಧಕ್ಕೆ ಬಾರದಂತೆ ೧೦೮ ಕಿಮೀನಷ್ಟು ಸುರಂಗವನ್ನು ಕೊರೆಯಲಾಗಿದೆ. ಒಂದೇ ಸ್ಟ್ರೆಚ್‌ನಲ್ಲಿ ದೇವಪ್ರಯಾಗ ಮತ್ತು ಲಚ್ಮೋಲಿ ನಡುವೆ ೧೫.೧ಕಿಮೀ ಸುರಂಗ ನಿರ್ಮಸ ಲಾಗಿದ್ದು, ಇದು ಪೂರ್ಣಗೊಂಡರೆ ಭಾರತದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ದೇಶದ ಇನ್ನೊಂದು ಅತಿ ಉದ್ದದ ಸುರಂಗ ಮಾರ್ಗ ಇದೀಗ ಕಾಶ್ಮೀರದಲ್ಲಿ ೧೨,೭೫೮ ಕಿಲೋ ಮೀಟರ್ ಉದ್ದದ ಉಧಂಪುರ-ಶ್ರೀನಗರ -ಬಾರಾಮು ರೈಲ್ ಲಿಂಕ್ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದೆ. ವಿಶಧೇಷವೆಂದರೆ ಕಾಶ್ಮಿರದ ಸುರಂಗದಂತೆಯೇ ಉತ್ತರಾಖಂಡದ ಸುರಂಗವನ್ನೂ ಅಂತಾ ರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ. ಸುರಂಗದಲ್ಲಿ ಎರಡು ಟ್ಯೂಬ್‌ಗಳಿದ್ದು, ಒಂದು ಪ್ರಧಾನ ಟ್ಯೂಬ್. ಇನ್ನೊಂದು ಸಂರಕ್ಷಣಾ ಟ್ಯೂಬ್. ಇದನ್ನು ಎಸ್ಕೇಪ್ ಟನೆಲ್ ಎಂತಲೂ ಕರೆಯಲಾಗುತ್ತದೆ. ಪ್ರತಿ ೩೭೫ ಮೀಟರ್ ಅಂತರದಲ್ಲಿ ಎರಡೂ ಸುರಂಗಗಳನ್ನು ಸಂಪರ್ಕಿ ಸಲು ಪ್ಯಾಸೇಜ್‌ಗಳನ್ನು ಇಡಲಾಗಿದೆ. ಇದು ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಸಹಾಯವಾಗಲಿದೆ.

ಎಸ್ಕೇಪ್ ಟನೆಲ್‌ಗಳಲ್ಲಿ ನಿರಂತರವಾಗಿ ಆಂಬ್ಯಲೆನ್ಸ್ ಇತ್ಯಾದಿಗಳು ಸಂಚರಿಸುತ್ತಲೇ ಇರುವಂತೆ ಯೋಜಿಸಲಾಗಿದ್ದು, ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ರತ್ಯೇಕ ಸುರಂಗಗಳನ್ನು ನಡುವಿನ ೧೬ ಸೇತುವೆಗಳು ಬೆಸೆಯಲಿವೆ. ಡೆಹ್ರಾಡೂನ್ ಜಿಯ ಯೋಗ ನಗರಿ ಋಷಿಕೇಶ್, ಶ್ರೀನಗರಕ್ಕೆ ಸೇರಿದ ತೆಹ್ರಿ, ಶಿವಪುರಿ, ತೆಹ್ರಿ ಜಿಯ ಬೈಸಿ, ದೇವಪ್ರಯಾಗ್ ಮತ್ತು ಡುಂಗ್ರಿಪಂಥ್ (ಧಾರಿ ದೇವಿ) ಪೌರಿ, ರುದ್ರಪ್ರಯಾಗ್ ಜಿಯ ರುದ್ರಪ್ರಯಾಗ್, ಚಮೋಲಿ ಜಿಯ ಗೌಚರ್ ಮತ್ತು ಕರರ್ಣಪ್ರಯಾಗ್‌ಗಳಲ್ಲಿ ನಿಲ್ದಾಣ ಗಳನ್ನು ಯೋಜಿಸಲಾಗಿದೆ. ಒಟ್ಟು ಮಾರ್ಗವು ೧೨ ನಿಲ್ದಾಣಗಳು, ೧೭ ಸುರಂಗಗಳು ಮತ್ತು ೩೫ ಸೇತುವೆಗಳನ್ನು ಹೊಂದಿರುತ್ತವೆ.

ವಾತಾಯನ ವ್ಯವಸ್ಥೆ

ಸುರಂಗನಿರ್ಮಾಣ ಕಾಲದಲ್ಲಿ ತುಂಬ ದೂಳು ಉತ್ಪತ್ತಿಯಾಗುತ್ತದೆ. ಇದರಿಂದ ಕಾರ್ಮಿಕರಿಗೆ ಉಸಿರಾಟಕ್ಕೆ ತೊಂದರೆ ಕಟ್ಟಿಟ್ಟದ್ದು. ಜತೆಗೆ ಉತ್ತರಕಾಶಿ ಯಲ್ಲಿ ಆದಂತೆ ದಿಢೀರ್ ಕುಸಿತದ ಅಪಾಯವಿತ್ತು. ಸಿಮೆಂಟ್ ಇತ್ಯಾದಿ ಸಾಮಗ್ರಿಗಳನ್ನು ಹೊತ್ತ ಭಾರೀ ವಾಹನಗಳು ಸುರಂಗದೊಳಗೆ ಓಡಾಡುವಾಗ ಲಂತೂ ಇದರ ಅಪಾಯ ಬಲು ಹೆಚ್ಚು. ಇದಕ್ಕೆ ಸರಳ ಪರಿಹಾರವಾಗಿ ಲಂಬವಾದ ಕಂಡಿಗಳನ್ನು ಅಲ್ಲಲ್ಲಿ ಬಿಟ್ಟು, ವಾತಾವರಣದೊಂದಿಗೆ ಸಂಪರ್ಕ ಕಲ್ಪಿಸುವುದು. ಇದರಿಂದ ಕಲುಷಿತ ಗಾಳಿ ಮೇಲೇರಿ ಹೊರಹೋಗಿ, ತಾಜಾ ಗಾಳಿ ಒಳನುಗ್ಗುತ್ತದೆ. ಆದರೆ ಈ ಸುಲಭ ವ್ಯವಸ್ಥೆಗೆ ಬೇಕಾದ ಸನ್ನಿವೇಶ ಬೃಹತ್ ಪರ್ವತ ಶ್ರೇಣಿ ಬಲುಪಾಲು ಅಲಭ್ಯ. ಆದ್ದರಿಂದ ವಿಶ್ವಾಸಾರ್ಹ ಯಾಂತ್ರಿಕ ವಾತಾಯನ ವ್ಯವಸ್ಥೆಯನ್ನು ಸುರಂಗಕ್ಕೆ ಅಳವಡಿಸಲಾಗಿದ್ದು, ಮಾರ್ಗ ಸಂಚಾರಕ್ಕೆ ತೆರವುಗೊಂಡ ನಂತರವೂ ಈ ವ್ಯವಸ್ಥೆ ಮುಂದುವರಿಯುತ್ತದೆ.

ಕಿರಿಯ ಹಿಮಶ್ರೇಣಿಯ ಸವಾಲು
ಬೇರೆಡೆಗೆ ಹೋಲಿಸಿದರೆ ಹಿಮಾಲಯದ ಭೂ ವಲಯದ ವಯಸ್ಸು. ಭೂಫಲಕಗಳ ಒತ್ತಡದಿಂದ ಕೆಲವೇ ಸಾವಿರ ವರ್ಷಗಳ ಹಿಂದೆ ರಚನೆಯಾಗಿರುವ ಈ ಪರ್ವತಶ್ರೇಣಿಯ ಸಂರಚನೆ ಅತ್ಯಂತ ಸೂಕ್ಷ್ಮವಾದುದು. ಹೀಗಾಗಿ ಸಾಮಾನ್ಯ ಸ್ಥಳಗಳಲ್ಲೇ ಭೂಕುಸಿತ ಮಾಮೂಲು. ಇಂಥ ಸ್ಥಿತಿಯಲ್ಲಿ ಬೃಹತ್ ಪರ್ವತಗಳ ಅಡಿಯಲ್ಲಿ, ಅದೂ ಅತಿ ಉದ್ದದ ಸುರಂಗ ನಿರ್ಮಾಣ ಸುಲಭದ ಮಾತಲ್ಲ. ಅತ್ಯಂತ ಸ್ಥೂಲ, ಸಂಕೀರ್ಣ ಕಾರ್ಯ ಇದು. ಸಾಲದ್ದಕ್ಕೆ ಸಾವಿರಾರು ವರ್ಷಗಳಿಂದ ಸುರಿದ ಮಳೆ, ಕರಗಿದ ಹಿಮದ ನೀರು ಇಳಿದು, ಪರ್ವತಗಳ ಅಡಿಯ ಮಣ್ಣು ಸಡಿಲವಾಗಿದೆ. ಹೀಗಾಗಿ ಸುರಂಗ ಕುಸಿಯವು ಭೀತಿ ಒಂದೆಡೆಯಾದರೆ, ನಿಖರವಾದ ಆಕಾರಕ್ಕೆ ಹೊಂದಿಸುವುದೂ ಕಷ್ಟ. ಜತೆಗೆ ಕೆಲವೆಡೆ ತೋಡುತ್ತಿದ್ದಂತೆಯೇ ಕಲ್ಪನೆಗೂ ಮೀರಿ ನೀರಿನ ಬುಗ್ಗೆ ಚಿಮ್ಮಲಾರಂಭಿಸುತ್ತದೆ. ಇದನ್ನು ಅಚ್ಚುಗಟ್ಟಾಗಿ ನಿರ್ವಹಿಸಲು ಸುರಂಗದ ಒಳಮೈಗೆ ಸಾಕಷ್ಟು ಲೈನಿಂಗ್ ಲೇಪಿಸುವುದೇ ಅತ್ಯಂತ ಪ್ರಮುಖ,  ಶ್ರಮದಾಯಕ ಕೆಲಸ.

ಇನ್ನು ಶಿಥಿಲಶಿಲೆಗಳನ್ನೂ ಮಣ್ಣುಜರಿತ ನಿವಾರಿಸಲು ಭದ್ರ ಲೈನಿಂಗ್ ಬೇಕೇಬೇಕು. ಭೂಸ್ತರಗಳ ಮೂಲಕ ನೀರು ಜಿನುಗುವುದನ್ನು ತಡೆಗಟ್ಟಲು, ಅಂತರ್ಜಲ ಮಟ್ಟ ಕಾಪಾಡಲು, ಸುರಂಗದ ಮೂಲಕ ನೀರು ಹರಿಯುವ ಸಂದರ್ಭದಲ್ಲಿ ಭೂಸವೆತ ಉಂಟಾಗದಂತೆ ಮಾಡಲು ಭದ್ರ ಲೈನಿಂಗ್
ಕಟ್ಟಿ ನಿಲ್ಲಿಸಲಾಗಿದೆ.

ಕುಂಠಿತ ಯೋಜನೆಗೆ ಮೋದಿ ವೇಗ
೧೯೯೬ರಲ್ಲೇ ಯೋಜನೆಗಾಗಿ ಸಮೀಕ್ಷೆ ಆರಂಭಗೊಂಡಿದ್ದರೂ ಇಚ್ಛಾಶಕ್ತಿಯ ಕೊರತೆ, ರಾಜಕೀಯ ತಿಕ್ಕಾಟದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕೊನೆಗೆ ೧೨೬ಕಿಲೋಮೀಟರ್ ಉದ್ದದ ರೈಲ್ವೆ ಯೋಜನೆಯ ಜೋಡಣೆಯನ್ನು ೨೦೧೩ರಲ್ಲಿ ಪೂರ್ಣಗೊಳಿಸಲಾಯಿತಾದರೂ ಮತ್ತೆ ರಾಜಕೀಯ ಕಾರಣಕ್ಕೇ ವಿಳಂಬವಾಯಿತು.  ಅಂತಿಮವಾಗಿ ೨೦೧೫ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ನೇತೃತ್ವದಲ್ಲಿ ಕೆಲಸ ಪ್ರಾರಂಭವಾಗಿ ಇದೀಗ ಪೂರ್ಣಗೊಳ್ಳುವ ಹಂತ ತಲುಪಿದೆ. ೨೦೧೯ರಲ್ಲಿ ಪೂರ್ಣ ಪ್ರಮಾಣದಲ್ಲಿ ಸುರಂಗ ಕೊರೆಯುವ ಕಾರ್ಯ ಪ್ರಾರಂಭವಾಗಿದ್ದು. ಶೇ.೯೦ ಕಾಮಗಾರಿ
ಮುಕ್ತಾಯಗೊಂಡಿದೆ.

ಯೋಜನೆ ವಿಶೇಷ
ಭಾರತದ ಮತ್ತೊಂದು ಅತಿ ಉದ್ದದ ಸುರಂಗ-ರೈಲು ಯೋಜನೆ

ರಾಷ್ಟ್ರೀಯ ಭದ್ರತೆ ಮತ್ತು ಉತ್ತರಾಖಂಡದ ಕಲ್ಯಾಣದ ಗುರಿ

ಪ್ರಸಿದ್ಧ ಚಾರ್‌ದಾಮ್ ಯಾತ್ರೆ ಇನ್ನಷ್ಟು ಸುಲಭವಾಗಿಸುವ ರೈಲ್ವೆ

ಭಾರತ-ಚೀನಾ ಗಡಿಗೆ ತ್ವರಿತವಾಗಿ ಪಡೆಗಳ ಸ್ಥಳಾಂತರಕ್ಕೆ ಸಹಕಾರಿ

ಒಟ್ಟು ೧೬,೨೦೦ ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ

ಇಡೀ ರೈಲ್ವೆ ಮಾರ್ಗದ ಒಟ್ಟು ಶೇ.೮೩.೦೭ರಷ್ಟು ಸುರಂಗವೇ.

Leave a Reply

Your email address will not be published. Required fields are marked *

error: Content is protected !!