Saturday, 23rd November 2024

ನದಿಯ ಹೃದಯದಲಿ ಇದೇನಿದು ಹೆದ್ದಾರಿಯೊಂದು ಸಾಗಿದೆ…?

ಏಷ್ಯಾದಲ್ಲೇ ಮೊದಲ, ವಿಶಿಷ್ಟ ದೆಹಲಿ-ಡೆಹ್ರಾಡೂನ್ ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ಪರಿಸರಕ್ಕೆ ಸಮಾನಾಂತರ ಸಾಗಿರುವ ಅಭಿವೃದ್ಧಿ ಯೋಜನೆ; ಮಾರ್ಚ್ ವೇಳೆ ಸೇವೆಗೆ ಸಜ್ಜು

ರಾಧಾಕೃಷ್ಣ ಎಸ್. ಭಡ್ತಿ

ಡೆಹ್ರಾಡೂನ್: ಅಭಿವೃದ್ಧಿಯ ವ್ಯಾಖ್ಯಾನಗಳು ಬದಲಾಗಬೇಕೆಂಬುದು ದೇಶದ ಪರಿಸರವಾದಿಗಳ ಬಹಳ ಹಿಂದಿನ ಕೂಗು. ರಸ್ತೆ, ನೀರಾವರಿ, ವಿದ್ಯುತ್
ಸ್ಥಾವರಗಳಂಥ ಯೋಜನೆಗಳು ಘೋಷಣೆ ಆದಾಗಲೆಲ್ಲ ಬೊಬ್ಬೆ; ವಿವಾದ ಸಹಜ; ಅನಿವಾರ್ಯ ಎಂಬಂತಾಗಿ ಬಿಟ್ಟಿದೆ. ಸಾಲದ್ದಕ್ಕೆ ದೇಶದಲ್ಲಿ ಹಿಂದಿನ ಎಲ್ಲ ಯೋಜನೆಗಳಲ್ಲೂ ಅವೆಷ್ಟೋ ಕಾಡು ನಾಶವಾಗಿದೆ, ಜನವಸತಿ ಎತ್ತಂಗಡಿಯಾಗಿವೆ, ಪ್ರಾಣಿ-ಸಸ್ಯ ಸಂಕುಲಕ್ಕೆ ಧಕ್ಕೆ ಬಂದಿದೆ.

ಕರ್ನಾಟಕವನ್ನೇ ಉದಾಹರಣೆಗೆ ತೆಗೆದುಕೊಂಡರೆ ಉತ್ತರಕನ್ನಡ ಜಿಲ್ಲೆಯೊಂದೇ ಮೇಲಿಂದ ಮೇಲೆ ಅವೆಷ್ಟೋ ಯೋಜನೆಗಳ ಭಾರಕ್ಕೆ ನಲುಗಿದೆ; ನಲುಗುತ್ತಲೇ ಇದೆ. ಹಾಗೆಂದು ಭಾರತದಂಥ ಭಾರೀ ಜನಸಂಖ್ಯೆಯ ದೇಶಕ್ಕೆ ಅಭಿವೃದ್ಧಿ ಯೋಜನೆಗಳೇ ಬೇಡವೇ? ಅರಣ್ಯ-ಪರಿಸರ ನಾಶವಾಗುತ್ತದೆ ಎಂಬ ಕಾರಣಕ್ಕೆ ಮೂಲಸೌಕರ್ಯಗಳಿಂದ ಈ ೨೧ನೇ ಶತಮಾನದಲ್ಲೂ ವಂಚಿತವಾಗಿಯೇ ಉಳಿಯಬೇಕೇ? ಅಥವಾ ಪರಿಸರ-ಅಭಿವೃದ್ಧಿ ಎರಡನ್ನೂ ಸಮಾನಾಂತರವಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವೇ? ಒಂದಕ್ಕಾಗಿ ಇನ್ನೊಂದನ್ನು ತ್ಯಾಗ ಮಾಡುವುದು ಅನಿವಾರ್ಯವೇ? ಇಂಥವೆಲ್ಲ ಪ್ರಶ್ನೆಗಳಿಗೆ, ಗೊಂದಲ- ಸಂದಿಗ್ಧಗಳಿಗೆ ಉತ್ತರವೋ ಎಂಬಂತೆ ಬಹುತೇಕ ಸಿದ್ಧಗೊಂಡು ನಿಂತಿದೆ ದೆಹಲಿ-ಡೆಹ್ರಾಡೂನ್ ಎಲಿವೇಟೆಡ್ ವೈಲ್ಡ್‌ಲೈಫ್
ಕಾರಿಡಾರ್ (Elevated Wildlife Corridor).

ಎಲ್ಲವೂ ಅಂದುಕೊಂಡಂತೆ ನಡೆದರೆ ಉತ್ತರಾಖಂಡದಲ್ಲಿ (Uttarakhand) ಏಷ್ಯಾದಲ್ಲೇ ಮೊದಲು ಎಂಬ ಹೆಗ್ಗಳಿಕೆಯೊಂದಿಗೆ ಈ ವನ್ಯಜೀವಿ ಹೆದ್ದಾರಿ ಇನ್ನೆರಡು ತಿಂಗಳಲ್ಲಿ ಅಂದರೆ ಮಾರ್ಚ್ ಮಧ್ಯಭಾಗದಲ್ಲಿ ಪ್ರಧಾನಿ ನರೇಂದ್ರಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ.

ಇದು ಕೇವಲ ಹೆದ್ದಾರಿಯಲ್ಲ, ಪರಿಸರ ಪ್ರವಾಸೋದ್ಯಮದ ಭಾಗ. ತುಂಬಿ ಹರಿಯವು ನದಿಯೋಡಲಲ್ಲೇ ಸಾಗುವ ಪಯಣ. ದಟ್ಟ ಹಸಿರಿನ ನಡುವಿನ ವಿಹಾರ. ಹಿಮಾಲಯದ ಕೊರೆಯವು ಚಳಿಯ ನಡುವೆ ಶ್ರೀಮಂತ ಪರಿಸರ ಸೌಂದರ್ಯವನ್ನು ಆಹ್ಲಾದಿಸಬಹುದಾದ ಬೆಚ್ಚಗಿನ ಅನುಭವ. ಭರ್ತಿ
ಎರಡೂವರೆ ಗಂಟೆಗಳ ದಾರಿಯುದ್ದಕ್ಕೂ ವನ್ಯಜೀವಿಗಳ, ಸಸ್ಯ ವೈವಿಧ್ಯದ ಸಹಜ ಜೀವನವನ್ನು ಅತಿ ಸಮೀಪದಿಂದಲೇ ವೀಕ್ಷಿಸಬಹುದಾದ ಅನುಪಮ ಅವಕಾಶ. ಅನಿವಾರ್ಯ ಪ್ರಯಾಣವನ್ನೂ ಒಂದಿನಿತೂ ಆಯಾಸ ವಿಲ್ಲದೇ ಕಳೆದುಬಿಡಬಲ್ಲ ಅಪರೂಪದ ಸೌಲಭ್ಯ.

ಹೌದು, ಉತ್ತರಾಖಂಡ ರಾಜ್ಯದ ಎರಡು ಪ್ರಮುಖ ರಕ್ಷಿತಾರಣ್ಯಗಳಾದ ಶಿವಾಲಿಕ್ ಪರ್ವತ ಶ್ರೆಣಿಯಲ್ಲಿರುವ ರಾಜಾಜಿ ಹುಲಿ ರಕ್ಷಿತಾರಣ್ಯ ಹಾಗೂ ಸುಪ್ರಸಿದ್ಧ ಜಿಮ್ ಕಾರ್ಬೆಟ್ ಅಭಯಾರಣ್ಯಗಳನ್ನು ಬೆಸೆಯುವ ಈ ಎಲಿವೇಟೆಡ್ ಹೆದ್ದಾರಿಯನ್ನು ಪರಿಸರಕ್ಕೆ ಒಂದಿನಿತೂ ಧಕ್ಕೆಯಾಗದಂತೆ ರೂಪಿಸ ಲಾಗಿದೆ. ದಟ್ಟ ಅರಣ್ಯದಲ್ಲೇ ಸಾಗುವ ಇಡೀ ಹೆದ್ದಾರಿಗಾಗಿ ಇಡೀ ಅರಣ್ಯದಲ್ಲಿ ಒಂದೇ ಒಂದು ಮರವನ್ನೂ ಕಡಿಯಲಾಗಿಲ್ಲ ಎನ್ನುವುದು ವಿಶೇಷ. ತೀರಾ ತೆಗೆಯಲೇಬೇಕಾದ ಮರಗಳನ್ನು ಉಳಿಸಲು ಹೊಸದೊಂದು ಮಾರ್ಗವನ್ನು ಕಂಡುಕೊಂಡಿತು ಹೆದ್ದಾರಿ ಪ್ರಾಧಿಕಾರ.

ಜಗತ್ತಿನ ಅತಿ ಅಪರೂಪದ ಸಸ್ಯ ಪ್ರಭೇದಕ್ಕೆ ಸೇರಿದ, ಅಳಿವಿನಂಚಿನಲ್ಲಿದೆಯೆಂದು ಗುರುತಿಸಲಾದ, ಹಿಮಾಲಯಶ್ರೇಣಿಗಳಲ್ಲಿ ಮಾತ್ರವೇ ಕಂಡು ಬರುವ
ನೂರಕ್ಕೂ ಹೆಚ್ಚು ‘ಸಾಲ್’ ಮರಗಳನ್ನು ಬೇರು ಸಮೇತ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ೧೬ ಕಿ.ಮೀ. ಷಟ್ಪಥ ಮೇಲುರಸ್ತೆ ದೆಹಲಿ, ಸಹಾರಣ್‌ಪುರ, ಡೆಹ್ರಾಡೂನ್ ನಡುವಿನ ಈ ಎಕನಾಮಿಕ್ ಕಾರಿಡಾರ್‌ನ ಒಟ್ಟು ವೆಚ್ಚ ೮೩೦೦ ಕೋಟಿ ರು. ಮೂರು ವರ್ಷದ ಕೆಳಗೆ ೨೦೨೧ರಲ್ಲಿ ಚಾಲನೆಗೊಂಡ ಈ ಹೆzರಿ ಕಾಮಗಾರಿಯು ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಭರದಿಂದ ಸಾಗಿದ್ದು, ಇದು ಪೂರ್ಣಗೊಂಡು ಸೇವೆಗೆ ಲಭಿಸಿದರೆ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಅವಧಿಯನ್ನು ಈಗಿನ ೬ ಗಂಟೆಯಿಂದ ೨.೫ ಗಂಟೆಗೆ ಇಳಿಸಲಿದೆ.

ಒಟ್ಟು ೨೧೦ ಕಿಲೋಮೀಟರ್ ಉದ್ದದ ಹೆದ್ದಾರಿಯ ನಾಲ್ಕನೆ ಹಾಗೂ ಕೊನೆಯ ಹಂತದಲ್ಲಿನ ಉತ್ತರಾಖಂಡದ ಮೊಹಂದ್ ಮತ್ತು ಅಶರೋಡಿ ನಡುವಿನ ೧೬ ಕಿ.ಮೀ. ಮೇಲುರಸ್ತೆ ಸಂಪೂರ್ಣ ದಟ್ಟಾರಣ್ಯದಲ್ಲಿಯೇ ಸಾಗುತ್ತದೆ. ವನ್ಯಜೀವಿಗಳ ಅದರಲ್ಲೂ ಆನೆಗಳ ಬಾಹುಳ್ಯದ ಪ್ರದೇಶವಾದ ಈ ಭಾಗದಲ್ಲಿ, ಅವುಗಳ ಸಹಜ ಜೀವನಕ್ಕೆ ಒಂದಿನಿತೂ ಧಕ್ಕೆಯಾಗದಂತೆ ಮೇಲು ರಸ್ತೆಯನ್ನು ನಿರ್ಮಿಸಲಾಗಿದೆ. ಈ ಹೆದ್ದಾರಿ ಪೂರ್ಣಗೊಂಡು ಮೇಲೆ, ಸದ್ಯ ವಾಹನಗಳ ಸಂಚಾರಕ್ಕೆ ಬಳಕೆಯಾಗುತ್ತಿರುವ ಪೂರ್ಣ ೧೬ ಕಿ.ಮೀ.ಉದ್ದದ ದ್ವಿಪಥ ಹೆzರಿಯನ್ನು ಪ್ರಾಣಿಗಳ ಸಂಚಾರಕ್ಕೆಂದೇ ಮೀಸಲಿಡಲಾಗು ತ್ತದೆ.

ಊಹಿಸಿಕೊಳ್ಳಿ, ಮೇಲೆ ವಾಹನಗಳು ಸಂಚರಿಸುತ್ತಿದ್ದರೂ, ಹೆದ್ದಾರಿಯ ಕೆಳಗಿನ ಭಾಗದಲ್ಲಿ ಪ್ರಾಣಿಗಳು ತಮ್ಮ ಎಂದಿನ ಸಂಚಾರವನ್ನು ನಿರಾತಂಕವಾಗಿ ಮುಂದುವರಿಸುತ್ತವೆ. ರಸ್ತೆಯ ಕೆಳಗೆ, ಅಕ್ಕಪಕ್ಕದಲ್ಲಿ ಓಡಾಡುವ ಪ್ರಾಣಿಗಳು ಹಾಗೂ ಸುತ್ತಲಿನ ದಟ್ಟ ಹಸಿರಿನ ನಡುವಿನ ಮೇಲ್ಸೆತುವೆಯ ಪ್ರಯಾಣ
ಅತ್ಯಂತ ಅಪರೂಪದ, ರೋಚಕ ಅನುಭವವನ್ನು ನೀಡಲಿದೆ. ಹೇಗೇ ನೋಡಿದರೂ ರಾಜಾಜಿ ಹುಲಿ ರಕ್ಷಿತಾರಣ್ಯದ ಪಕ್ಕವೇ ಹಾದು ಹೋಗಲಿರುವ
ಕಾರಿಡಾರ್ ಜನರ ಕಣ್ಣಿಗೊಂದು ಹಬ್ಬವಾಗಲಿದೆ.

ನದಿ ಒಡಲಲ್ಲೇ ಪಯಣ: ಆರಂಭಿಕ ಯೋಜನೆಯನ್ವಯ ದೆಹಲಿ-ಡೆಹ್ರಾಡೂನ್ ನಡುವಿನ ಈ ಕಾರಿಡಾರ್ ನಿರ್ಮಾಣಕ್ಕಾಗಿ ೧೨ ಸಾವಿರಕ್ಕೂ ಹೆಚ್ಚು
ಮರಗಳನ್ನು ಕಡಿಯುವುದು ಅನಿವಾರ್ಯ ಎನ್ನಲಾಗಿತ್ತು. ಇದನ್ನು ಪ್ರಶ್ನಿಸಿ ಪರಿಸರವಾದಿಗಳು ಸುಪ್ರಿಂ ಕೋರ್ಟ್‌ಗೂ ಹೋಗಿದ್ದರು. ಆದರೆ, ಇದನ್ನು
ತಪ್ಪಿಸಲು ನಂತರದ ದಿನಗಳಲ್ಲಿ ಮಹತ್ವದ ಚಾಣಾಕ್ಷದ ತಂತ್ರಗಾರಿಕೆಯೊಂದನ್ನು ಹೆಣೆಯಲಾಯಿತು.

ರಕ್ಷತಾರಣ್ಯದ ಮಧ್ಯಭಾಗದಲ್ಲಿ, ಈಗಿನ ಹೆದ್ದಾರಿಯ ಪಕ್ಕದಲ್ಲಿಯೇ ಹರಿಯುವ ನದಿ ಮೊಹಂಡ್‌ರಾವ್‌ನ ಹರವು ಎಂಜಿನಿಯರ್‌ಗಳ ಕಣ್ಣಿಗೆ ಬಿತ್ತು. ಮಳೆಗಾಲದ ದಿನಗಳಲ್ಲಿ ಮಾತ್ರ ಮೈದುಂಬಿಕೊಳ್ಳುವ , ಬೇಸಿಗೆಯಲ್ಲಿ ವಿಶಾಲ ಮೈದಾನವಾಗಿ ಪರಿವರ್ತಿತಗೊಳ್ಳುವ ಈ ನದಿಯ ಒಡಲಲ್ಲೇ ಮೇಲು ರಸ್ತೆಯನ್ನು ನಿರ್ಮಿಸಿದರೆ ಹೇಗೆ ಎಂಬ ಚಿಂತನೆ ಮೂಡಿತು. ಅಷ್ಟೇ, ಮತ್ತೆ ಯೋಚಿಸುವ ಗೊಡವೆಗೇ ಹೋಗದೇ ಅದನ್ನೇ ಕಾರ್ಯರೂಪಕ್ಕಿಳಿಸಲಾಗಿದೆ. ಇದೀಗ ಇಡೀ ೧೬ ಕಿ.ಮೀ. ಉದ್ದದ ವನ್ಯಜೀವಿ ಕಾರಿಡಾರ್‌ನ ಪೈಕಿ ೧೦ ಕಿ.ಮೀಟರ್ ಉದ್ದದ ಮಾರ್ಗವನ್ನು ನದಿಯ ಮಧ್ಯದಲ್ಲೇ ಪಿಲ್ಲರ್‌ಗಳನ್ನು ಎಬ್ಬಿಸಿ ರೂಪಿಸಲಾಗಿದೆ.

ಇದರಿಂದಾಗಿ ಮರಗಳ ನಾಶವನ್ನು ತಪ್ಪಿಸಿದ್ದು ಮಾತ್ರವೇ ಅಲ್ಲ, ಹೆದ್ದಾರಿಗಾಗಿ ಗುಡ್ಡವನ್ನು ಅಗೆಯುವ, ಸಮತಟ್ಟು ಮಾಡುವ ಕೆಲಸವೂ ಉಳಿಯಿತು.
ಮಳೆಗಾಲದಲ್ಲಿ ಉಂಟಾಗುವ ರಭಸದಿಂದಾಗಿ ಪ್ರವಾಹದ ಅಪಾಯವೂ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸುರಂಗ ಯೋಜನೆ: ಇನ್ನು ನದಿ ಇಲ್ಲದ ಜಾಗದಲ್ಲಿ, ಮರಗಳ ಹನನ ತಪ್ಪಿಸಲು ಗುಡ್ಡ ಕೊರೆದು ಸುರಂಗವನ್ನು ನಿರ್ಮಸಲಾಗಿದೆ. ಚುಟ್ಮಲ್‌ಪುರ್, ಗಣೇಶ್ಪುರ, ಮೊಹಂಡ್, ದಾಟ್ ಕಿ ದೇವಿ ಮೂಲಕ ಹಾದು ಹೋಗುವ ಈ ಸುರಂಗವು ಅಂತಿಮವಾಗಿ ಡೆಹ್ರಾಡೂನ್ ಹೊರವಲಯದ ಅಶಾರೋಡಿ ಎಂಬಲ್ಲಿ ಕೊನೆಗೊಳ್ಳುತ್ತದೆ. ಈ ಭಾಗದಲ್ಲಿಯೂ ಮೇಲಿನ ದಟ್ಟ ಅರಣ್ಯ ಪ್ರದೇಶ ಅಬಾಧಿತವಾಗಿದ್ದು, ಪ್ರಾಣಿಗಳ ಸಹಜ ಜೀವನಕ್ಕಾಗಲೀ, ಸಸ್ಯವರ್ಗ ಕ್ಕಾಗಲೀ ಯಾವುದೇ ತೊಂದರೆ ಇಲ್ಲ. ೧೯೯೫ ಕೋಟಿ ರು.ಮೆಚ್ಚದಲ್ಲಿನ ೩೪೦ಮೀ ಸುರಂಗದ ನಿರ್ಮಾಣ ಬಹುತೇಕ ಮುಕ್ತಾಯದ ಹಂತದಲ್ಲಿದೆ.

ಅಮೂಲ್ಯ ಜೈವಿಕ ತಾಣ ಶಿವಾಲಿಕ್ ಬೆಟ್ಟ
ಎಲಿವೇಟೆಡ್ ಕಾರಿಡಾರ್ ಹಾದು ಹೋಗುವ ಚುರಿಯಾ ಅಥವಾ ಮರ್ಗ ಬೆಟ್ಟಗಳು ಎಂದೂ ಕರೆಯಲ್ಪಡುವ ಶಿವಾಲಿಕ್ ಬೆಟ್ಟಗಳು ಪಾಕಿಸ್ತಾನ, ಭಾರತ , ನೇಪಾಳ ಮತ್ತು ಭೂತಾನ್ ಮೂಲಕ ಹಿಮಾಲಯ ಪ್ರದೇಶದಾದ್ಯಂತ ವ್ಯಾಪಿಸಿರುವ ಶಿಖರ ಶ್ರೇಣಿ. ಒಂದೊಂದೂ ಶಿಖರಗಳು ಸಾಮಾನ್ಯವಾಗಿ ೧,೫೦೦ ರಿಂದ ೨,೦೦೦ ಮೀಟರ್‌ಗಳ (೪,೯೦೦ ರಿಂದ ೬,೬೦೦ ಅಡಿಗಳು) ಎತ್ತರವನ್ನು ಹೊಂದಿದೆ.

ಹಿಮಾಲಯನ್ ಫ್ರಂಟಲ್ ಥ್ರಸ್ಟ್ (ಏಊS) ಎಂಬ ವಲಯದಲ್ಲಿ ೧೦ ಕಡಿದಾದ ದಕ್ಷಿಣದ ಇಳಿಜಾರುಗಳಿವೆ. ಇದನ್ನು ಹೊರತುಪಡಿಸಿ ತೀರಾ ಕಡಿದಾದ ಇಳಿಜಾರಿಲ್ಲದ ಸೌಮ್ಯ ೧೧ ವಲಯ ಉತ್ತರದಲ್ಲಿವೆ. ಪ್ರವೇಶಿಸಲೇ ಸಾಧ್ಯವಾಗದ ರೀತಿಯ ವಿಶಿಷ್ಟ , ಬೃಹತ್ ಹಾಗೂ ಕಿರು ಬಂಡೆಗಳಿಂದಾವೃತ್ತ ಪ್ರದೇಶ ದಿಂದ ಮಳೆನೀರು ಧುಮ್ಮಿಕ್ಕುತ್ತದೆ. ಹೀಗಾಗಿ ಇಲ್ಲಿನ ಮೇಲ್ಭಾಗದಲ್ಲಿ ಕೇವಲ ಕುರುಚಲು ಕಾಡುಗಳು ರೂಪುಗೊಂಡಿವೆ. ಆದರೆ, ಇವೆಲ್ಲವೂ ಔಷಧಿಯ ಗುಣಗಳ ಅಪರೂಪದ ಸಸ್ಯವೈವಿಧ್ಯ. ಹಿಮಾಲಯದ ಕೆಳಭಾಗದ ಉಪೋಷ್ಣವಲಯದಲ್ಲಿ ತೇಗ, ಸಾಲ್ ಸೇರಿದಂತೆ ದೊಡ್ಡ ಎಲೆಗಳ ತಳಿಯ
ಮರಗಳನ್ನೊಳಗೊಂಡ ಕಾಡುಗಳಿವೆ.

ಮರಗಳ ಕಡಿಯುವ ಬದಲು ಸ್ಥಳಾಂತರ
ಶಾಲ ಮರಗಳು ಎಂದೂ ಕರೆಯಲಾಗುವ ಸಾಲ್ ಮರಗಳು ಡಿಪ್ಟಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಶೊರಿಯ ರೊಬುಸ್ಟ ಎಂಬ ಪ್ರಭೇದದ ಅಪರೂ ಪದ ಸಸ್ಯ. ಸರಿಸುಮಾರು ೩೦ ಮೀಟರ್ ಎತ್ತರದವರೆಗೂ ನೇರವಾಗಿ ಬೆಳೆಯುವ ನಿತ್ಯ ಹರಿದ್ವರ್ಣದ ಹೊಳಪುಳ್ಳ ದೊಡ್ಡ ತೊಗಲೆಲೆಗಳಿರುವ ಈ ಮರದ ಕಾಂಡವೂ ಸಹ ಸಾಕಷ್ಟು ಸುತ್ತಳತೆಯನ್ನೂ ಹೊಂದಿರುತ್ತವೆ. ಗಂಗಾನದಿಯ ಬಯಲು ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುವ ಈ
ಮರಗಳ ನಟ್ಟ ನಡುವೆಯೇ ಎಲಿವೇಟೆಡ್ ಕಾರಿಡಾರ್ ಹಾದು ಹೋಗಲಿದ್ದು, ಮರಗಳ ರಕ್ಷಣೆಗೆ ಯೋಜನೆಯಲ್ಲಿ ವಿಶೇಷ ಒತ್ತು ನೀಡಲಾಗಿದೆ. ಸಾಲ್ ಮರಗಳ ಪುನರುತ್ಥಾನದ ಅಧ್ಯಯನಕ್ಕಾಗಿ ಡೆಹ್ರಾಡೂನ್ ಅರಣ್ಯ ಸಂಶೋಧನಾ ಸಂಸ್ಥೆಯೊಂದಿಗೆ ಸೇರಿ ೧ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸ ಲಾಗಿದೆ. ಈ ಯೋಜನೆಯಲ್ಲಿ ಕಸಿ ಮಾಡಲು ಕಾರ್ಯಸಾಧ್ಯವಾದ ಆ ಜಾತಿಗಳ ೧೫೫ ಸಂಖ್ಯೆಯ ಮರಗಳನ್ನು ಯಶಸ್ವಿಯಾಗಿ ಬೇರು ಸಮೇತ ಸ್ಥಳಾಂ ತರಿಸಲಾಗಿದೆ.

ಹೀಗಿದೆ ದೆಹಲಿ- ಡೆಹ್ರಾಡೂನ್ ಕಾರಿಡಾರ್
ವಿಭಾಗ ೧: ಅಕ್ಷರಧಾಮದಿಂದ ಇಪಿಇ ಜಂಕ್ಷನ್‌ವರೆಗೆ (ಬ್ರೌನ್‌ಫೀಲ್ಡ ದೆಹಲಿ ಮತ್ತು ಯುಪಿ ಮೂಲಕ)
ವಿಭಾಗ ೨: ಇಪಿಇ ಜಂಕ್ಷನ್‌ನಿಂದ ಸಹರಾನ್ಪುರ ಬೈಪಾಸ್‌ವರೆಗೆ (ಗ್ರೀನ್‌ಫೀಲ್ಡ್ ಯುಪಿ ಮೂಲಕ)
ವಿಭಾಗ ೩: ಸಹರಾನ್ಪುರ ಬೈಪಾಸ್‌ನಿಂದ ಗಣೇಶಪುರದವರೆಗೆ (ಬ್ರೌನ್‌ಫೀಲ್ಡ ಯುಪಿ ಮೂಲಕ)
ವಿಭಾಗ ೪: ಗಣೇಶಪುರದಿಂದ ಡೆಹ್ರಾಡೂನ್ ವರೆಗೆ (ಬ್ರೌನ್‌ಫೀಲ್ಡ್ ಯುಪಿ ಮತ್ತು ಉತ್ತರಾಖಂಡದ ಮೂಲಕ)

ಏನಿದು ಪ್ರಾಣಿಗಳ ಹೆದ್ದಾರಿ?

ಉತ್ತರಾಖಂಡದ ರಾಜಾಜಿ ಹುಲಿ ರಕ್ಷಿತಾರಣ್ಯದಲ್ಲಿ ಎನ್‌ಎಚ್ ೭೨ಎ ಇದೆ

ಇದು ಆನೆ ಸೇರಿದಂತೆ ನಾನಾ ತರಹದ ವನ್ಯಜೀವಿಗಳು ಸದಾ ಸಂಚರಿಸುವ ಸ್ಥಳ

ಈಗ ಈ ಹೆದ್ದಾರಿಯ ಮೇಲೆ ೧೬ ಕಿ.ಮೀ. ಉದ್ದದ ಮೇಲ್ಸೆತುವೆ ನಿರ್ಮಾಣ

ಕಾರಿಡಾರ್‌ನ ಒಟ್ಟು ಉದ್ದ ಸುಮಾರು ೨೧೩ ಕಿಮೀ ೬ ಲೇನ್‌ಗಳು.
ಯೋಜನೆಯ ಬಂಡವಾಳ ವೆಚ್ಚ ರೂ. ೧೧೯೧೦ ಕೋಟಿ.

ಸಂಪೂರ್ಣ ಕಾರಿಡಾರ್ ಅನ್ನು ಕನಿಷ್ಠ ೧೦೦ ಕಿಮೀ ವೇಗಕ್ಕೆ ತಕ್ಕಂತೆ ವಿನ್ಯಾಸ.

ಈಗಿನ ಪ್ರಯಾಣದ ಅವಧಿ ೬ ಗಂಟೆಗಳಿಂದ ಕನಿಷ್ಠ ೨-೨.೫ ಗಂಟೆಗಳಿಗೆ ಇಳಿಕೆ.

ಪ್ರಸ್ತುತ ದೂರ ೨೩೫ ಕಿಮೀನಿಂದ ೨೧೩ ಕಿಮೀಗೆ ಕಡಿಮೆಯಾಗಲಿದೆ.

ಜನಸಂಖ್ಯೆ ಪ್ರದೇಶದಲ್ಲಿ ೭೬ ಕಿಮೀ ಸರ್ವಿಸ್ ರಸ್ತೆ.