Saturday, 14th December 2024

ಚಂದನವನದ ಹೃದಯವಂತ ನಿರ್ಮಾಪಕ ಕೆ.ಮಂಜು !

ವಿನಾಯಕರಾಮ್ ಕಲಗಾರು

ಮಂಜು ಮಾತು ಒರಟು ಒರಟು, ಹಾಗಂತ ಹೃದಯ ಮತ್ತು ಮನಸು ಮಗುವಿನಂಥದ್ದು. ಇದು ಖುದ್ದು ವಿಷ್ಣುದಾದಾ ಉವಾಚ. ವಿಷ್ಣು ವರ್ಧನ್ ದಿನಬೆಳಗಾದರೆ ತನ್ನ ವಾಹನ ಚಾಲಕನಿಗೆ ಹೇಳುತ್ತಿದ್ದ ಮಾತೆಂದರೆ, ರಾಧಾ, ಇವತ್ತು ಮಂಜೂನ ಬರಹೇಳೋ.. ಇದು ಕೆ.ಮಂಜು ಅವರಿಗೆ ಒಲವಿನ ಕರೆಯೋಲೆಯಾಗಿತ್ತು! ಇದೀಗ ವಿಷ್ಣುದಾದಾನ ಅಪ್ಪಟ ಶಿಷ್ಯ ಕೆ. ಮಂಜು, ಆಪ್ತಮಿತ್ರನ ಹೆಸರಿನಲ್ಲಿ ವಿಷ್ಣುಪ್ರಿಯ ಎನ್ನುವ ಸಿನಿಮಾವನ್ನು ತೆರೆಮೇಲೆ  ತರಲು ಹೊರಟಿ ದ್ದಾರೆ. ಹಾಗೆಯೇ ಮಂಜು ಅವರ ಅಮೋಘ ಸಾಧನೆಗೆ ವಿಶ್ವವಾಣಿ ಬಳಗ, ವಿಯೆಟ್ನಾಂ ನಲ್ಲಿ ನಡೆದ ಗ್ಲೋಬಲ್ ಅಚೀವರ‍್ಸ್ ಅವಾರ್ಡ್‌ನ್ನು ನೀಡಿ ಗೌರವಿಸಿದೆ.

ವಿಷ್ಣುದಾದಾ ವಿಪರೀತ ಮೂಡಿ. ಅವರು ಒಬ್ಬರನ್ನು ಹಚ್ಚಿಕೊಳ್ಳುವುದೇ ಅಪರೂಪ. ಹಚ್ಚಿಕೊಂಡರೆ ಆ ಜೀವ ಅವರ ಹೃದಯಕ್ಕೆ ಕನೆಕ್ಟ್ ಆಗಿಬಿಡು ತ್ತಿತ್ತು. ಅಷ್ಟೊಂದು ವಿಶ್ವಾಸ, ಅಷ್ಟೊಂದು ಪ್ರೀತಿ, ಅಷ್ಟೊಂದು ಆತ್ಮೀಯತೆ ಅವರಲ್ಲಿ ಮನೆ ಮಾಡುತ್ತಿತ್ತು!

ಕೆ.ಮಂಜು ಅಂಥ ಭಾಗ್ಯವಂತ ಎಂದೇ ಹೇಳಬಹುದು. ಅವರ ಮನೆಯಲ್ಲಿ ಊಟ ತಿಂಡಿಯ ಭಾಗ್ಯ ಸಿಗುತ್ತದೆ ಎಂಬ ಕಾರಣಕ್ಕೇ ಕೊಬ್ರಿ ಮಂಜು ಬೇರೆ ಏರಿಯಾದಿಂದ ಜಯನಗರದ ವಿಷ್ಣು ನಿವಾಸದ ಕೂಗಳತೆ ದೂರದಲ್ಲೇ ಮನೆ ಮಾಡಿಕೊಂಡು ಅಲ್ಲಿಯೇ ಠಿಕಾಣಿ ಹೂಡಿಬಿಟ್ಟಿದ್ದರು! ‘ಕರೆಕ್ಟ್ ಮಧ್ಯಾಹ್ನ ಒಂದೂವರೆಗೆ ಬಿಸಿ ಬಿಸಿ ಊಟ ರೆಡಿ ಇರುತ್ತಿತ್ತು. ಜತೆಗೆ ವಿಷ್ಣುಜೀ ಜತೆಗಿನ ಆಪ್ತ ಮನಸುಗಳು..’ ಕೆ.ಮಂಜು ಆಪ್ತಮಿತ್ರನ ಜತೆ ಕಳೆದ ಆ ದಿನಗಳನ್ನು ನೆನೆಯುತ್ತಾ ಭಾವುಕರಾದರು. ವಿಷ್ಣು ಅಪ್ಪಾಜಿ ಇವತ್ತು ಇದ್ದಿದ್ದರೆ ಖಂಡಿತ ನನ್ನಲ್ಲಿನ ಗುರುತರ ಬದಲಾವಣೆ, ನಾನು ಹೊತ್ತಿರುವ ಹೊಣೆಗಳನ್ನು ನೋಡಿ ಕಣ್ತುಂಬಿ ಬೆನ್ನು ತಟ್ಟುತ್ತಿದ್ದರು. ಗಟ್ಟಿಯಾಗಿ ತಬ್ಬಿಕೊಂಡು ಸಂಭ್ರಮ ಪಟ್ಟಿರುತ್ತಿದ್ದರು. ಮಂಜು ಮತ್ತಷ್ಟು ಮಾತಿಗಿಳಿದರು.

‘ವಿಷ್ಣುದಾದಾ’ಗಿರಿಯ ದಿನಗಳನ್ನ ನೆನೆಯುತ ನೂರೊಂದು ನೆನಪಾದರು. ಆಗ ಆಟೋ ಮಂಜು, ಅದಕ್ಕೂ ಮೊದಲು ಕೊಬ್ರಿ ಮಂಜು, ಆ ನಂತರ ಡಾನ್ ಮಂಜು, ಕೊನೆಗೆ ಕೆ.ಮಂಜು, ಮುಂದಿನ ಬದಲಾವಣೆ ‘ವಿಷ್ಣುಪ್ರಿಯ’ ಮಂಜು, ಹೃದಯವಂತ ಮಂಜು, ಜನಾನುರಾಗಿ ಮಂಜು, ಜನಸೇವಕ ಮಂಜು, ಹೀಗೆ ಕೊಬ್ರಿ ಮಂಜು ಕೆ.ಮಂಜುವಾಗಿ ಬದಲಾಗಲು ನೇರವಾಗಿ ನೆರವಾಗಿದ್ದು ವಿಷ್ಣುವರ್ಧನ್ ಒಡನಾಟ, ವಿಷ್ಣುವರ್ಧನ್ ಸಾಂಗತ್ಯ! ಮಂಜು ಹೃದಯ ಇವತ್ತಿಗೂ ಹೃದಯವಂತನನ್ನು ಸ್ಮರಿಸು ತ್ತದೆ. ಅಪ್ಪಾಜಿ ಇದ್ದಿದ್ರೆ ಇವತ್ತು ನನ್ನ ಹೆಗಲಿನ ಮೇಲೆಯೇ ಅವರ ಕೈ ಇರುತ್ತಿತ್ತು. ಅವರು ತಿನ್ನುವ ಕೈತುತ್ತಿನ ಒಂದು ಪಾಲು ನನ್ನ ಹೆಸರಿಗೆ ಮೀಸಲಿರುತ್ತಿತ್ತು…

ಮಂಜು ಒಮ್ಮೆ ಕಣ್ಣು ಒರೆಸಿಕೊಂಡರು. ಮತ್ತೊಮ್ಮೆ ನಿಟ್ಟುಸಿರು ಬಿಟ್ಟು ಸುಧಾರಿಸಿಕೊಂಡು, ಆಗಸದತ್ತ ನೋಡಿದರು. ದಾದಾ ಅಲ್ಲೆಲ್ಲೋ ನಿಂತು ತನ್ನನ್ನು ಕರೆಯುತ್ತಾರೆ. ಜಯನಗರದ ಅದೇ ಮನೆಯ ಗೇಟ್ ಮುಂದೆ ನಿಂತು ತನ್ನನ್ನು ಸ್ವಾಗತಿಸುತ್ತಾರೆ ಎನ್ನುವ ಕನವರಿಕೆ ಮೌನಕ್ಕೆ ಶರಣಾಗುವಂತೆ ಮಾಡಿತ್ತು. ಸೋಲಿನ ಹಿಂದೆ ಗೆಲುವು ಕಂಡ ಸರದಾರ ಮಂಜು ಮೂಲ ಜಡೆಮಾಯಸಂದ್ರ ಸಮೀಪದ ಪುಟ್ಟ ಗ್ರಾಮ ಸೊರವನಹಳ್ಳಿ. ತಂದೆ ಕರಿಯಪ್ಪ. ಕೊಬ್ರಿ ವ್ಯಾಪಾರಸ್ಥರು. ತಂದೆಯ ಕಸುಬನ್ನು ಮುಂದುವರಿಸಿ, ನಂತರ ಆಟೋ ಓಡಿಸೋ ಕಸುಬಿಗೆ ಇಳಿದ ಮಂಜಣ್ಣ, ಒಂದು ಕಾಲದಲ್ಲಿ ನೇರ ಮಾತು, ನೇರ ನುಡಿ, ರಫ್ ಎಂಡ್ ಟಫ್ ವ್ಯಕ್ತಿತ್ವದವರಾಗಿದ್ದರು. ನಂತರ ಬೆಂಗಳೂರಿಗೆ ಬಂದು, ಅನುರಾಗ ಸ್ಪಂದನ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿಯುತ್ತಾರೆ.

ಅಲ್ಲಿಂದ ಬಣ್ಣದ ಲೋಕದ ಸಂಪರ್ಕ. ಜಾಕಿಚಾನ್, ಯಮಲೋಕದಲ್ಲಿ ವೀರಪ್ಪನ್, ವಾಲಿ, ರಾಷ್ಟ್ರ ಗೀತೆ, ಜೇನುಗೂಡು, ಜಮೀನ್ದಾರ್ರು, ಹೃದಯವಂತ, ಲಂಕೇಶ್ ಪತ್ರಿಕೆ, ಸಾಹುಕಾರ… ಸಾಲು ಸಾಲು ಚಿತ್ರಗಳಿಗೆ ಬಂಡವಾಳ ಹೂಡುತ್ತಾರೆ. ಒಂದರಲ್ಲಿ ಸೋಲುತ್ತಾರೆ, ಮತ್ತೊಂದರಲ್ಲಿ ಗೆಲ್ಲುತ್ತಾರೆ. ಗೆದ್ದ ಹಣವನ್ನು ಮತ್ತದೇ ಕೆರೆಯ ನೀರನು ಕೆರೆಗೆ ಚೆಲ್ಲುತ್ತಾರೆ. ನಿಲ್ಲುತ್ತಾರೆ, ಬೀಳುತ್ತಾರೆ, ಏಳುತ್ತಾರೆ. ಏಳರ ನಂತರ ಎಂಟಕ್ಕೆ ಕೈ ಹಾಕುತ್ತಾರೆ. ರಾಮ ಶಾಮ ಭಾಮ ಮಾಡುತ್ತಾರೆ. ಒಳ್ಳೇ ದುಡ್ಡು ಮಾಡುತ್ತಾರೆ.

ಒಡಹುಟ್ಟಿದವಳು, ನೀನೆಲ್ಲೋ ನಾನಲ್ಲೇ ಸಿನೆಮಾ ಮಾಡುತ್ತಾರೆ. ಮಾಡಿದ್ದನ್ನ ಕಳೆದುಕೊಳ್ಳುತ್ತಾರೆ. ಮಾತಾಡ್ ಮಾತಾಡ್ ಮಲ್ಲಿಗೆಯಂಥ ರೈತಾಪಿ ಸಿನೆಮಾ ಮಾಡಿ ಶಹಬ್ಬಾಶ್ ಎನಿಸಿಕೊಳ್ಳುತ್ತಾರೆ. ಅರಮನೆ, ಯೋಗಿ, ಬಳ್ಳಾರಿ ನಾಗ, ಒಲವೇ ಜೀವನ ಲೆಕ್ಕಾಚಾರ, ರಾಜಕುಮಾರಿ, ಗುಂಡ್ರಗೋವಿ, ಕಿಚ್ಚಹುಚ್ಚ, ಶೈಲೂ… ಹೀಗೆ ಸಿನೆಮಾ ಮೇಲೆ ಸಿನೆಮಾ ಮಾಡುತ್ತಾರೆ. ಒಂದಷ್ಟು ಕಳೆದುಕೊಳ್ಳುತ್ತಾರೆ. ನಂತರ ಸಡನ್ ಹಿಟ್ ಎನಿಸಿಕೊಳ್ಳುವ ರಾಜಾ ಹುಲಿ ಚಿತ್ರದ ಮೂಲಕ ಕಳೆದ ದುಡ್ಡನ್ನು ಮತ್ತಲ್ಲೇ ಹುಡುಕಿಕೊಂಡು ರಿಲ್ಯಾಕ್ಸ್ ಆಗುತ್ತಾರೆ. ಮತ್ತೆ ಸಿನೆಮಾ ಜಪಕ್ಕೆ ಕೂರುತ್ತಾರೆ. ಮತ್ತೊಂದು ಸಿನೆಮಾಗೆ, ನಿರ್ದೇಶಕರಿಗೆ ಛಾನ್ಸ್ ಕೊಡುತ್ತಾರೆ. ಮಮ್ಮುಟಿ, ಮೋಹನ್ ಲಾಲ್‌ರನ್ನು ಕನ್ನಡಕ್ಕೆ ಕರೆತರುತ್ತಾರೆ. ಆ ಮೂಲಕ ಹೆಸರು ಗಳಿಸುತ್ತಾರೆ. ಕನ್ನಡದ ಹೆಚ್ಚಿನ ನಟರ ಜತೆ ಸಿನೆಮಾ ಮಾಡುತ್ತಾರೆ. ಚಿತ್ರರಂಗದಲ್ಲಿ ಯಾರೋ ಕಷ್ಟ ಎಂದಾಗ ಹೋಗಿ ಕೈ ಹಿಡಿದು ನಿಲ್ಲಿಸುತ್ತಾರೆ. ನನ್ನ ಯೋಗ್ಯತೆ ಬಗ್ಗೆ ಮಾತಾಡೋರ ಯೋಗ್ಯತೆ ಏನು ಅಂತ ನಂಗೆ ಗೊತ್ತು ಅಂತ ಕಿರುನಗೆ ಬೀರುತ್ತಾರೆ!

ರಾಜಕೀಯದಲ್ಲೂ ಸಕ್ರಿಯ!
ಕೆ.ಮಂಜು ಅವರಿಗೆ ಕುಮಾರಣ್ಣನ ವೈಯಕ್ತಿಕ ಸಾಧನೆಯೇ ರಾಜಕೀಯಕ್ಕೆ ಸೂರ್ತಿ. ಕುಮಾರಸ್ವಾಮಿ ಅವರ ಆಡಳಿತ ವೈಖರಿಗೆ ಫಿದಾ ಆಗಿ ಜೆಡಿಎಸ್ ಪಕ್ಷಕ್ಕೆ ಎಸ್ ಎಂದಿರುವ ಮಂಜಣ್ಣ, ಜನಸೇವೆ ಮಾಡಿ ಮಣ್ಣಿನ ಋಣ ತೀರಿಸಬೇಕು ಎಂಬ ಮಹಾ ಹಂಬಲ ಹೊಂದಿದ್ದಾರೆ. ರಾಜಕೀಯವನ್ನು ಸಮಾಜಸೇವೆಯ ಅಸವನ್ನಾಗಿ ಮಾಡಿಕೊಂಡು ಬಡವರ ನೋವಿಗೆ ಸ್ಪಂದಿಸುವ ಮಹಾಗುರಿ ಹೊಂದಿದ್ದಾರೆ. ಆ ಬಗ್ಗೆ ದೊಡ್ಡಮಟ್ಟದ ತಯಾರಿಯನ್ನೂ ನಡೆಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ತುಂಬಾ ಓಡಾಡಿದ್ದರೂ, ಕೊನೇ ಹಂತದಲ್ಲಿ ಟಿಕೆಟ್ ಸಿಗಲಿಲ್ಲ. ಮುಂಬರುವ ಚುನಾವಣೆ ಯಲ್ಲಿ ಮಂಜಣ್ಣನ ರಾಜತಂತ್ರದ ಚಲಾವಣೆ ಹೇಗಿರುತ್ತೋ ಕಾದುನೋಡಬೇಕಿದೆ !

ಅಪ್ಪ-ಟ ಪ್ರತಿಭೆ ಶ್ರೇಯಸ್ ಮಂಜು!
ಮಂಜು ಮಗ ಶ್ರೇಯಸ್ ಮಂಜು ಕೂಡ ಯಂಗ್ ಬ್ಲಡ್‌ನ ಯುವ ಪ್ರತಿಭೆ. ಗೆದ್ದೇ ಗೆಲ್ಲುವೆ ಒಂದು ದಿನ ಎನ್ನೋ ಮಾತಿಗೆ ಹೊಸ ಅರ್ಥ ಬರುವ ಲಕ್ಷಣಗಳು ಆ ಹುಡುಗನ ಹುರುಪಿನ ಕೆಲಸದಲ್ಲಿ ಕಾಣುತ್ತಿದೆ. ಹಾರ್ಡ್‌ವರ್ಕ್ ಮಾಡಿ ಗೆಲ್ಲುತ್ತೇನೆ,  ಅಪ್ಪನ ಮಗನಾಗಿ ಅಲ್ಲ ಎಂದು ಮೀಸೆ ತಿರುವುವ ಶ್ರೇಯಸ್ ಮಂಜು, ಕನ್ನಡದ ಮುಂದಿನ ಸೂಪರ್ ಸ್ಟಾರ್ ಆಗೋ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ವಿಷ್ಣುಪ್ರಿಯಾ ಚಿತ್ರದ ಮೂಲಕ ಆ ದೊಡ್ಡ
ವೇದಿಕೆ ಸಿದ್ಧವಾಗುತ್ತಿದೆ!

*

ವಿಷ್ಣು ಅಪ್ಪಾಜಿ ಎಲ್ಲಾ ಹೇಳ್ಕೊಳ್ಳೋರು. ಅವರಲ್ಲಿ ಅಪಾರ ನೋವಿನ ಶಿಖರವೇ ಅಡಗಿತ್ತು. ಅವೆಲ್ಲವನ್ನೂ ಅವರು ಗುಪ್ತವಾಗಿಯೇ ಇಟ್ಟರು.
ಮೇಲ್ನೋ ಟಕ್ಕೆ ನಗುನಗುತ್ತಲೇ ಇರುತ್ತಿದ್ದರು. ಬದುಕನ್ನು ಪ್ರೀತಿಸುತ್ತಿದ್ದರು. ಜತೆಗಿದ್ದವರನ್ನು ಗೌರವಿಸುತ್ತಿದ್ದರು. ಜೀವನ ಪ್ರೀತಿಯ ದ್ಯೋತಕ ದಂತಿದ್ದರು ನಮ್ಮ ವಿಷ್ಣು ದಾದಾ! ಇವತ್ತಿಗೂ ಅವ್ರು ಕಾಡ್ತಾನೇ ಇರ‍್ತಾರೆ. ಸುತ್ತಲೂ ಓಡಾಡ್ತಾನೇ ಇರ‍್ತಾರೆ. ಅದೇ ಕಾರಣಕ್ಕೆ ಅವರ ನೆನಪಿನಲ್ಲೇ ವಿಷ್ಣುಪ್ರಿಯಾ ಅನ್ನೋ ಸಿನೆಮಾ ಮಾಡಿದೀನಿ. ಅವರ ಹೆಸರಲ್ಲೇ ರಿಲೀಸ್ ಮಾಡ್ತೀನಿ. ನಿಮ್ಗೆ ಗೊತ್ತಾ? ಅವ್ರ ಹೆಸ್ರಲ್ಲಿ ಒಳ್ಳೇ ಸಿನೆಮಾ ಮಾಡಿದ್ರೆ ಗೆದ್ದೇ ಗೆಲ್ಲುತ್ತೆ, ಅದಕ್ಕೆ ಸಾಕ್ಷಿ ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ, ಯಜಮಾನ, ನಾಗರಹಾವು ಹೀಗೆ ಮತ್ತೆ ಮತ್ತೆ ಅದೇ ಹೆಸರಲ್ಲಿ ಸಿನೆಮಾ ಮಾಡಿದ್ರೂ ಗೆಲ್ತವೆ. ಅಂಥದ್ರಲ್ಲಿ ವಿಷ್ಣುಪ್ರಿಯಾ ಗೆಲ್ಲಲ್ವಾ? ನೋಡ್ತಾ ಇರಿ ಹಿಸ್ಟರಿ ಕ್ರಿಯೇಟ್ ಆಗುತ್ತೆ!

-ಕೆ.ಮಂಜು,
ಡಾ.ವಿಷ್ಣುವರ್ಧನ್ ಆಪ್ತಶಿಷ್ಯ, ನಿರ್ಮಾಪಕ