Saturday, 23rd November 2024

ಸಾಗರದಾಚೆಯ ಕನ್ನಡತನದ ಸುವರ್ಣ ಮಹೋತ್ಸವ! 

ಕನ್ನಡದಿಂದ ಒಗ್ಗೂಡಿ, ಕನ್ನಡಿಗರಿಗಾಗಿ ಜೊತೆಯಾಗಿ, ಕನ್ನಡತನವನ್ನು ಮೆರೆಸಲು ಇರುವುದೇ ನಮ್ಮ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ KKNC.
ಸಾಗರದಾಚೆ ಕನ್ನಡತನದ ಈ ಗೂಡಿಗೆ ೫೦ರ ವಸಂತ! KKNC ಹಲವಾರು ಅನಿವಾಸಿ ಕನ್ನಡಿಗರಿಗೆ  ತವರು ಮನೆ. ಈ ಸಾರ್ಥಕತೆಯನ್ನು ಸಂಭ್ರಮಿಸೋದಕ್ಕೆ ಸುವರ್ಣ ಮಹೋತ್ಸವವನ್ನು ಸೆಪ್ಟೆಂಬರ್ ೨೩ ಹಾಗು ೨೪ ರಂದು ಕ್ಯಾಲಿಫೋರ್ನಿ ಯಾದ ಹೇವರ್ಡ್ ನಲ್ಲಿ, ಶಬೊ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಅನೇಕ ವರ್ಷಗಳಿಂದ ನಿರಂತರವಾಗಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಕನ್ನಡ ಕೂಟದಲ್ಲಿ ಅನೇಕ ತಿಂಗಳುಗಳಿಂದ ಸಂಘಟಕರೆಲ್ಲ ಸೇರಿ ಬೃಹತ್ ಕಾರ್ಯಕ್ರಮವೊಂದರ ತಯಾರಿ ನಡೆಸಿದ್ದರು. ಸುಮಾರು ಮೂರು ವಾರಗಳ ಮೊದಲೇ ಎಲ್ಲ ಟಿಕೆಟ್ಗಳು ಮಾರಾಟವಾಗಿದ್ದು ಎಲ್ಲ ಸದಸ್ಯರ ಕನ್ನಡ ಪ್ರೇಮವನ್ನು, ಕನ್ನಡ ಕೂಟದ ಶಕ್ತಿಯನ್ನು ಎತ್ತಿ ತೋರಿತ್ತು. ಕಾರ್ಯಕ್ರಮದ ಹಿಂದಿನ ದಿನವೇ ಎಲ್ಲ ಸ್ವಯಂ ಸೇವಕರ ಪರಿಶ್ರಮದಿಂದ ಕಾಲೇಜಿನ ಆವರಣವೆಲ್ಲ ಸಂಭ್ರಮಕ್ಕೆ ಅಣಿಯಾಗಿತ್ತು.
ಗಂಡಭೇರುಂಡ, ಗರುಡರಾದಿಯಾಗಿ ವಿಶೇಷ ಕರಕುಶಲ ಕೆತ್ತನೆಯಿಂದ ಪರಿಶೋಭಿಸುತ್ತಿದ್ದ ಬೃಹತ್ ಹೆಬ್ಬಾಗಿಲು ಎಲ್ಲರನ್ನು ಸ್ವಾಗತಿಸಲು ಎತ್ತರದಲ್ಲಿ ನಿಂತಿತ್ತು. ಹೊಯ್ಸಳರ ಕಾಲದ ಶಿಲ್ಪಿಯೊಬ್ಬ ಇನ್ನು ಜೀವಂತವಾಗಿದ್ದು ಇದನ್ನು ಕೆತ್ತಿದನೇನೋ ಎನ್ನುವಷ್ಟು ಕಲಾತ್ಮಕವಾಗಿತ್ತು ಆ ಹೆಬ್ಬಾಗಿಲು. ಆ ದ್ವಾರದಿಂದ ಒಳಗೆ ಬರಲು, ಹೊರಾಂಗಣ ವೇದಿಕೆಯಲ್ಲಿ ಹಂಪಿಯ ಆನೆ ಲಾಯ ಹಿನ್ನೆಲೆಯಾಗಿ ವಿಜೃಂಭಿ ಸುತ್ತಿತ್ತು.
ಅಲ್ಲೇ ಪಕ್ಕದಲ್ಲೇ ಚಕ್ಕಡಿಯೊಂದು ಕರ್ನಾಟಕದ ಗ್ರಾಮೀಣ ಸೌಂದರ್ಯವನ್ನು ನೆನಪಿಸುತ್ತಿತ್ತು. ಇನ್ನು ಮುಂದೆ ಬಂದರೆ, ಮೈಸೂರಿನ ಅರಮನೆಯ ಭಿತ್ತಿ ಚಿತ್ರ ನಾವು ಮೈಸೂರಿನಲ್ಲೇ ಇದ್ದೇವೆ ಎನ್ನುವಷ್ಟು ನೈಜವಾಗಿತ್ತು. ಇನ್ನು ಸಭಾಂಗಣದ ದ್ವಾರದ ಪಕ್ಕದಲ್ಲೇ ಹಂಪಿಯ ರಥದ ಪ್ರತಿಕೃತಿಯೊಂದು ನಿಜವಾದ ಹಂಪಿಯ ರಥಕ್ಕೆ ಸರಿಸಮವೆನ್ನುವಷ್ಟು ಜೀವಂತವಾಗಿತ್ತು. ಜೊತೆಯಲ್ಲೇ ಹೊಯ್ಸಳರ ಲಾಂಛನ ನಮ್ಮ ಕರುನಾಡ ಶಿಲ್ಪಕಲಾ ವೈಭವದ ಪ್ರತೀಕವಾಗಿ ನಿಂತಿತ್ತು. ಇಷ್ಟೆಲ್ಲಾ ವೈಭವಕ್ಕೆ ಕಾರಣರಾದ ಎಲ್ಲ ಕನ್ನಡಕೂಟದ ಕಲಾವಿದರಿಗೆ ಸಲಾಂ!
ಸೆಪ್ಟೆಂಬರ್ ೨೩, ಶನಿವಾರದ ಮುಂಜಾನೆ, ಪೂರ್ವದಲ್ಲಿ ಹುಟ್ಟಿದ ಸೂರ್ಯ, ಪಶ್ಚಿಮ ದೇಶದಲ್ಲಿ, ಅದರಲ್ಲೂ ಪಶ್ಚಿಮ ತೀರದಲ್ಲಿ ರಥವೊಂದರಲ್ಲಿ ವಿರಾಜಮಾನಳಾಗಿದ್ದ ಕನ್ನಡ ಭುವನೇಶ್ವರಿಗೆ ಆರತಿಯನ್ನು ಬೆಳಗಲು ಸಿದ್ಧನಿದ್ದ! ಸುಮಾರು ಎಂಟು ಗಂಟೆಗೆಲ್ಲ ಸದಸ್ಯರೆಲ್ಲ ಸೇರಿ ಮೆರವಣಿಗೆ ಹೊರಡಲು ಸಿದ್ಧವಾಗುತ್ತಿದ್ದರು. ಹೊರಗಿನ ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಆಸೀನರಾಗಿದ್ದರು.
ಕರ್ನಾಟಕದ ಹಿರಿಮೆ, ಕನ್ನಡಿಗರ ವೈಭವದ ಇತಿಹಾಸದ ಮುಕುಟಪ್ರಾಯವೆನ್ನಬಹುದಾದ ರಾಜಮನೆತನದ ಕುಲದೀಪಕರು, ಶ್ರೀ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಕನ್ನಡ ಕೂಟದ ಇತಿಹಾಸದಲ್ಲಿ ಸುವರ್ಣಾಕ್ಷರಗಲ್ಲಿ ಬರೆದಿಡಬೇಕಾದ ಕ್ಷಣವಾಗಿತ್ತು ಎಂದರೆ ತಪ್ಪಾಗಲಾರದು. ಜೊತೆಯಲ್ಲಿ ಜ್ಞಾನ ಭಂಡಾರ ಎನ್ನಬಹುದಾದ ಡಾ।।ಗುರುರಾಜ ಕರ್ಜಗಿಯವರು, ಉದಯೋನ್ಮುಖ ನಟರಾದ ಶ್ರೀ ಧನಂಜಯರವರು, ಅಮೆರಿಕಾದಲ್ಲಿ ಬಹು ಯಶಸ್ವೀ ಉದ್ಯಮಿಗಳಾದ ಶ್ರೀ ಬಿ.ವಿ.ಜಗದೀಶ್ ದಂಪತಿಗಳು ವೇದಿಕೆಯನ್ನು ಅಲಂಕರಿಸಿದ್ದರು. ಕನ್ನಡ ಕೂಟ ತಾಯಿ ಮರವಾಗಿ ಅನೇಕ ಉಪ ಸಂಸ್ಥೆಗಳನ್ನು ತನ್ನ ನೆರಳಲ್ಲಿ ಪೋಷಿಸಿದೆ. ಎಲ್ಲ ಉಪಸಂಸ್ಥೆಗಳ ಸದಸ್ಯರು, ಪ್ರತಿನಿಧಿಗಳು ತಂಡೋಪತಂಡವಾಗಿ ಬಂದು, ದೇವರಕುಣಿತ, ಪಟ ಕುಣಿತ, ಕಂಸಾಳೆ, ಹೀಗೆ ಒಂದೊಂದು ಜಾನಪದ ನೃತ್ಯ ಪ್ರಕಾರದ ಪ್ರದರ್ಶನದೊಂದಿಗೆ ಮೆರವಣಿಗೆಯನ್ನು ನಡೆಸಿಕೊಟ್ಟರು. ಮಹಾರಾಜರ ಉಪಸ್ಥಿತಿ, ಈ ಕಲಾಪ್ರಕಾರಗಳ ಪ್ರಸ್ತುತಿ, ಮೈಸೂರಿನ ದಸರಾವನ್ನೇ ನೆನಪಿಸುತ್ತಿತ್ತು! ಕಡೆಯಲ್ಲಿ ಕನ್ನಡ ಕೂಟದ ಈ ಸಾಲಿನ ಕಾರ್ಯಕಾರಿ ಸಮಿತಿಯವರು, ಕನ್ನಡ ಭುವನೇಶ್ವರಿ ಕುಳಿತಿದ್ದ ತೇರನ್ನು ಎಳೆಯುತ್ತಾ ಬಂದು, ಮಹಾರಾಜರ ಅಪ್ಪಣೆಯನ್ನು ಪಡೆದು, ಅವರನ್ನು ಸಹ ಪೂರ್ಣಕುಂಭದೊಂದಿಗೆ ಸಭಾಂಗಣದತ್ತ ನಡೆಸಿಕೊಂಡು ಬಂದರು. ವೇದ ಘೋಷದ ಹಿನ್ನಲೆ, ಅತಿಥಿಗಳ ಸಮ್ಮುಖದಲ್ಲಿ ಕನ್ನಡದ ತೇರು ಸಭಾಂಗಣದ ದ್ವಾರವನ್ನು ಸೇರಿತು. ನಂತರ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರುವಂತೆ ಕೋರುತ್ತಾ ಮಹಾಗಣಪತಿಯ ಪೂಜೆಯನ್ನು ಪುರೋಹಿತರ ಸಾರಥ್ಯದಲ್ಲಿ ನೆರವೇರಿಸಲಾಯಿತು.
ಕರ್ನಾಟಕದ ವೈವಿಧ್ಯತೆಯನ್ನು ಸಂಭ್ರಮಿಸಲು ‘ಕರುನಾಡ ಕಾಮನಬಿಲ್ಲು’ ಎನ್ನುವ ಶೀರ್ಷಿಕೆಯಡಿ ಕರ್ನಾಟಕದ ನಾಡಗೀತೆಗೆ ಕೂಟದ ಸದಸ್ಯರು ವರ್ಣರಂಜಿತವಾಗಿ ನೃತ್ಯಪ್ರದರ್ಶನವನ್ನು ನೀಡಿದರು. ನಂತರ ಮಹಾರಾಜರು ಹಾಗು ಎಲ್ಲ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ತಮ್ಮ ತಾತನವರು ಕೂಡ ಸ್ಯಾನ್ ಫ್ರಾನ್ಸಿಸ್ಕೋಗೆ ಬಂದಾಗ ಆಗಿನ ಮೇಯರ್ ಅವರಿಗೆ ನೀಡಿದ್ದ ಉಡುಗೊರೆಯನ್ನು ನೆನೆಯುತ್ತಾ, ಕರ್ನಾಟಕದ ವೈಭವವನ್ನು ಸ್ಮರಿಸಿ, ಕನ್ನಡ ಕೂಟದ ಸುವರ್ಣ ಮಹೋತ್ಸವಕ್ಕೆ ಮಹಾರಾಜರಾದ ಶ್ರೀ ಯದುವೀರ ಒಡೆಯರ್ ಅವರು ಶುಭಾಶಯವನ್ನು ಕೋರುತ್ತಾ ತಮ್ಮ ಅಧ್ಯಕ್ಷೀಯ ಭಾಷಣವನ್ನು ಸಂಪನ್ನಗೊಳಿಸಿದರು. ನಂತರ, ಕೂಟದ ಈ ಸಾಲಿನ ಅಧ್ಯಕ್ಷೆಯಾದ ಶ್ರೀಮತಿ ಶರ್ಮಿಳಾ ವಿದ್ಯಾಧರ ಅವರು ತಮ್ಮ ತವರಿನಷ್ಟೇ ಆಪ್ಯಾಯಮಾನವಾದ ಕನ್ನಡ ಕೂಟದ ಈ ಸುವರ್ಣ ಸಂಭ್ರಮದಲ್ಲಿ ಎಲ್ಲರು ಸಂತೋಷವಾಗಿ ಕಾಲ ಕಳೆಯಬೇಕೆಂದು ಕಳಕಳಿಯಿಂದ ಕೇಳಿಕೊಂಡರು. ಉದ್ಘಾಟನಾ ಕಾರ್ಯಕ್ರಮದ ನಂತರ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಮುಕುಟಪ್ರಾಯವೆನ್ನಬಹುದಾದ ದಾಸ ಸಾಹಿತ್ಯದ ಹಿರಿಮೆಯನ್ನು ಸಾರುವಂಥ ‘ಸುವರ್ಣ ಭಕ್ತಿ ಸಮ್ಮಿಲನ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
ಉಡುಪಿಯಿಂದ ಬಂದಿದ್ದ ಭಾಗವತರಾದ ಶ್ರೀ ಕೆ ಜೆ ಗಣೇಶ್ ಅವರ ನಿರ್ದೇಶನದಲ್ಲಿ, ಅವರ ಭಾಗವತಿಕೆಯಲ್ಲಿ ‘ಚಕ್ರವ್ಯೂಹ’ ಯಕ್ಷಗಾನ ಪ್ರಸಂಗವನ್ನು ಕನ್ನಡ ಕೂಟದ ಸದಸ್ಯರೇ ಯಕ್ಷಗಾನದ ವೇಷ ಕಟ್ಟಿ ಪ್ರದರ್ಶಿಸಿದರು. ದಶಕಗಳಿಂದ ಅಮೆರಿಕಾದಲ್ಲಿ ಹುಟ್ಟಿ ಬೆಳೆಯುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಸಲುವಾಗಿ ಕಟ್ಟಿರುವ ಕನ್ನಡ ಕಲಿ ಶಾಲೆಯ ಶಿಕ್ಷಕರೆಲ್ಲ ಸೇರಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಮೆರಿಕಾದ ಪೂರ್ವ ತೀರದಿಂದ ಬಂದಿದ್ದ ಕಲಾವಿದರಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶ್ರೀ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ, ಪದ್ಮಶ್ರೀ ಬಿ. ಜಯಶ್ರೀ ಅವರು ರಚಿಸಿರುವ ‘ಕರಿಮಾಯಿ’ ನಾಟಕವನ್ನು ಪ್ರದರ್ಶಿಸಲಾಯಿತು. ಮರಳಿನಿಂದ ಪ್ರೇಕ್ಷಕರನ್ನು ಕಲಾತ್ಮಕವಾಗಿ ಮರಳು ಮಾಡಬಲ್ಲ ಕನ್ನಡದ ಉದಯೋನ್ಮುಖ ಕಲಾವಿದರಾದ ಶ್ರೀ ರಾಘವೇಂದ್ರ ಹೆಗ್ಡೆಯವರು ವೈವಿಧ್ಯಮಯವಾದ ಕನ್ನಡ ಹಾಡುಗಳಿಗೆ ಸೂಕ್ತವಾಗಿ ಮರಳಿನಿಂದ ಕಲಾಕೃತಿಗಳನ್ನು ರಚಿಸಿ ನೆರೆದ ಪ್ರೇಕ್ಷಕರನ್ನು ವಿಸ್ಮಿತಗೊಳಿಸಿದರು. ಕನ್ನಡ ಸಾಹಿತ್ಯಲೋಕದ ನಕ್ಷತ್ರವಾದ ಶ್ರೀ ಪು.ತಿ.ನರಸಿಂಹಾಚಾರ್ ಅವರು ರಚಿಸಿದ ‘ದೀಪಲಕ್ಷ್ಮಿ’ ಕಾವ್ಯ ರೂಪಕವನ್ನು ಅವರ ಮಗಳೇ ಆದ ಶ್ರೀಮತಿ ಅಲಮೇಲು ಅಯ್ಯಂಗಾರ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು. ಕನ್ನಡ ಕೂಟದ ವೇದಿಕೆಯ ಮೇಲೆ ಪ್ರಪ್ರಥಮ ಬಾರಿಗೆ, ಚಂದನವನದ ಚಂದದ ನಟ, ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಿರುವ ನಟ ಧನಂಜಯ ಅವರೊಡನೆ ಇದ್ದ ಸಂವಾದ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾಗಿತ್ತು. ಆ ದಿನದ ಮುಖ್ಯ ಆಕರ್ಷಣೆ, ಕರ್ನಾಟಕದ ಹೆಮ್ಮೆಯ, ಅನನ್ಯ ಕಂಠದ ಗಾಯಕ ರಘು ದೀಕ್ಷಿತ್ ಹಾಗು ಅವರ ತಂಡ ಸಂಜೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಅವರ ಅಮೋಘ ಸಂಗೀತಕ್ಕೆ, ನೆರೆದ ಎಲ್ಲ ಪ್ರೇಕ್ಷಕರು ಕಿಕ್ಕಿರಿದು ಕುಣಿದು ನಲಿದರು!
ಎರಡನೇ ದಿನ, ಕೂಟದ ಸದಸ್ಯರೆಲ್ಲ ಸೇರಿ ಭಗವದ್ಗೀತೆಯ ಪಠಣದಿಂದ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅಕ್ಕಮಹಾದೇವಿ ಹಾಗು ಅಲ್ಲಮ ಪ್ರಭುಗಳ ಸಂವಾದವನ್ನೊಳಗೊಂಡ ‘ಶೂನ್ಯ ಸಂಪಾದನೆ’ ಶೀರ್ಷಿಕೆಯ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮ ಮುಂದುವರೆದು, ಕನ್ನಡದ ವಿವಿಧ ಕಾವ್ಯ ಪ್ರಕಾರದ, ವಿವಿಧ ಶೈಲಿಯ ಪ್ರಖ್ಯಾತ ಗೀತೆಗಳ ‘ಸುವರ್ಣ ರಾಗ ಧಾರೆ’ಯನ್ನು ಸ್ಥಳೀಯ ಕಲಾವಿದರ ತಂಡ ಪ್ರದರ್ಶಿಸಿತು. ‘ಕ್ಷೀರಾಮೃತ’ ಎನ್ನುವ ನೃತ್ಯರೂಪಕವಂತೂ ತಾಂತ್ರಿಕವಾಗಿ, ಕಲಾತ್ಮಕವಾಗಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತ್ತು. ಜ್ಞಾನ ನಿಧಿ ಎನ್ನಬಹುದಾದ ಡಾ। ಗುರುರಾಜ ಕರ್ಜಗಿ ಅವರು ಸುಮಾರು ಒಂದು ಘಂಟೆಯ ಕಾಲ “ಸಕಾರಾತ್ಮಕ ಚಿಂತನೆಯನ್ನು ಹೊಂದುವ ಪರಿ” ಎನ್ನುವ ವಿಷಯದ ಬಗ್ಗೆ ನೀಡಿದ ಉಪನ್ಯಾಸವು ಪ್ರೇಕ್ಷಕರಲ್ಲಿ ಅಪೂರ್ವ ಪರಿಣಾಮವನ್ನುಂಟುಮಾಡಿತ್ತು. ಈ ನಡುವೆ, ಕರ್ನಾಟಕದಿಂದ ಆಗಮಿಸಿದ್ದ ಉದಯೋನ್ಮುಖ ಹಾಸ್ಯ ಕಲಾವಿದರಾದ ಶ್ರೀ ರಾಘವೇಂದ್ರ ಆಚಾರ್ಯ, ನಿರೂಪ್ ಮೋಹನ್, ಕಾರ್ತಿಕ್ ಪತ್ತಾರ್ ಇವರ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತ್ತು. ಕಾರ್ಯಕ್ರಮ ನಡೆಸಿಕೊಟ್ಟ ಶ್ರೀ ವಿನಾಯಕ್ ಜೋಶಿ, ನೆರೆದವರಿಗೆ ಮಾತಿನಲ್ಲೇ ಆಪ್ಯಾಯಮಾನವೆನಿಸಿದರು.
ಎರಡೂ ದಿನಗಳು, ಮೂರು ವೇದಿಕೆಗಳ ಮೇಲೆ ವಿಭಿನ್ನ ರೀತಿಯ ಅನೇಕ ಕಾರ್ಯಕ್ರಮಗಳು ನಡೆದವು. ಪ್ರತಿಯೊಂದು ವೇದಿಕೆಗೂ, ಪ್ರತಿಯೊಂದು ಸ್ಥಳಕ್ಕೂ ಒಂದೊಂದು ಹೆಸರನ್ನು ನಾಮಕರಣ ಮಾಡಲಾಗಿತ್ತು. ವಾಹನ ನಿಲುಗಡೆಯ ಸ್ಥಳಕ್ಕೆ ‘ಮೆಜೆಸ್ಟಿಕ್’ ಎಂದೂ, ವ್ಯಾಪಾರ ಮಳಿಗೆಗಳನ್ನು ಹೊಂದಿದ್ದ ಸ್ಥಳಕ್ಕೆ ‘ಚೆನ್ನಮ್ಮ ವೃತ್ತ’ ಎಂದೂ, ಮುಖ್ಯ ವೇದಿಕೆಗೆ ‘ಗಂಧದ ಗುಡಿ’ ಎಂದು ಹೆಸರಿಡಲಾಗಿತ್ತು. ಪ್ರಾಂಗಣದಲ್ಲಿ ಕರ್ನಾಟಕದ ಮೂವತ್ತು ಜಿಲ್ಲೆಗಳಿಂದ ಪ್ರಮುಖ ಆಕರ್ಷಣೆಯ ಸ್ಥಳಗಳ ಭಿತ್ತಿ ಚಿತ್ರಗಳನ್ನು, ಚಂದನವನದ ಎಲ್ಲ ನಾಯಕ ನಾಯಕಿಯರ ಚಿತ್ರಗಳನ್ನು, ಕವಿವರೇಣ್ಯರ ಹಾಗು ಸಾಧು ಸಂತರ ಚಿತ್ರಗಳನ್ನು ಬಳಸಿ ಅಲಂಕರಿಸಲಾಗಿತ್ತು. ಹಾಗು ಆ ಪ್ರಾಂಗಣದ ಪಥಕ್ಕೆ ‘ಕವಿರಾಜ ಮಾರ್ಗ’ವೆಂದು, ಊಟದ ಮನೆಗೆ ‘ಉಪಹಾರ ದರ್ಶಿನಿ’ ಎಂದು ನಾಮಕರಣ ಮಾಡಲಾಗಿತ್ತು. ಎರಡನೇ ವೇದಿಕೆಯಾಗಿದ್ದ ‘ಗುಬ್ಬಿ ಗೂಡಿ’ನಲ್ಲಿ ಎರಡೂ ದಿನವೂ ಬಗೆ ಬಗೆಯ ಕಾರ್ಯಾಗಾರಗಳು, ಚಿಂತನ-ಮಂಥನಗಳು ನಡೆದವು. ಉದ್ಯಮಿಗಳ ಸಮಾಲೋಚನಾ ಸಭೆ, ಮಹಿಳಾ ಸಾಧಕಿಯರ ಸಭೆ, ಮಕ್ಕಳಿಗಾಗಿ ವಿಶೇಷ ಶಾರ್ಕ್ ಟ್ಯಾಂಕ್ ಕಾರ್ಯಕ್ರಮ, ಅವಿವಾಹಿತರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ, ‘ಮಾ ನಿಷಾದ’ ಎನ್ನುವ ಕಾರ್ನಾಡರ ನಾಟಕ ಪ್ರಸ್ತುತಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಆ ವೇದಿಕೆಯ ಮೇಲೆ ನಡೆದವು.
ಎರಡೂ ದಿನಗಳು ನೆರೆದ ಸದಸ್ಯರಿಗೆ ಭೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಫೇಣಿ, ಮಸಾಲ ಪುರಿ, ಬಿಸಿಬೇಳೆಭಾತ್, ಪಾಯಸ, ಕೋಸುಂಬರಿ, ಕೋಡುಬಳೆ, ಕರ್ಜಿಕಾಯಿ, ಜೋಳದ ರೊಟ್ಟಿ, ಎಣ್ಣೆಗಾಯಿ, ಮದ್ದೂರ್ ವಡೆ, ಒಬ್ಬಟ್ಟು, ಆಹಾ! ಒಂದೇ ಎರಡೇ! ಇಷ್ಟೆಲ್ಲಾ ವೈವಿಧ್ಯಮಯ ಭೋಜನ ಪಟ್ಟಿಯನ್ನು ಸಮಯಕ್ಕೆ ತಕ್ಕಂತೆ ಸಿದ್ಧಪಡಿಸಿ, ಎಲ್ಲರಿಗು ವ್ಯವಸ್ಥಿತವಾಗಿ ಬಡಿಸಿ, ಕಿಂಚಿತ್ತೂ ಲೋಪವಾಗದಂತೆ, ಎಲ್ಲರಿಗು ಲಭ್ಯವಾಗುವಂತೆ ನೋಡಿಕೊಂಡ ಭೋಜನ ಸಮಿತಿಯ ಸದಸ್ಯರಿಗೆ ಆಗಮಿಸಿದ್ದ ಎಲ್ಲ ಸದಸ್ಯರು ತುಂಬು ಮನಸ್ಸಿನಿಂದ ತಮ್ಮ ಅಭಿನಂದನೆಯನ್ನು ತಲುಪಿಸಿದ್ದರು. ದಿನವಿಡೀ ಕಾಫಿ ಚಹಾ ದ ಅನಿಯಮಿತ ಪೂರೈಕೆಯು ಎಲ್ಲರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು.
ಕಾರ್ಯಕ್ರಮದ ಕಡೆಯಲ್ಲಿ, ಚಂದನವನದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಅನೂಪ್ ಸೀಳಿನ್ ಹಾಗು ಅವರ ತಂಡ ಸಂಗೀತ ಸಂಜೆಯನ್ನು ನಡೆಸಿಕೊಟ್ಟರು. ಮಧುರ ಕಂಠದ ಗಾಯಕರಾದ ಅನುರಾಧಾ ಭಟ್, ಅಂಕಿತಾ ಕುಂಡು ಹಾಗು ವ್ಯಾಸರಾಜ್ ಸೋಸಲೆ ಅವರು ನೆರೆದ ಪ್ರೇಕ್ಷಕರ ಮನಗಳಿಗೆ ರಾಗಮಾಲಿಕೆಯನ್ನು ಅರ್ಪಿಸಿದ್ದರು. ಕನ್ನಡ ಸಿನಿ ಲೋಕದ ಪ್ರಖ್ಯಾತ ಗೀತೆಗಳನ್ನು ಕೇಳಿ ನೆರೆದವರೆಲ್ಲ ಆನಂದ ಕಡಲಿನಲ್ಲಿ ತೇಲಾಡಿದ್ದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿ, ಚಂದನವನದ ಅನನ್ಯ ನಿರ್ದೇಶಕ, ಕನಸುಗಾರ, ಕ್ರೇಜಿ ಸ್ಟಾರ್ ರವಿಚಂದ್ರನ್ ವೇದಿಕೆಗೆ ಆಗಮಿಸಿದಾಗ ಎಲ್ಲರು ಅಭಿಮಾನದ ಹರ್ಷೋದ್ಗಾರದಿಂದ ಅವರನ್ನು ಸ್ವಾಗತಿಸಿದರು. ರವಿಚಂದ್ರನ್ ಹಾಗು ಹಂಸಲೇಖ ಜೋಡಿಯ ಯಶಸ್ವೀ ಹಾಡುಗಳನ್ನು ಗಾಯಕರು ಹಾಡಿ ಮನರಂಜಿಸಿದರು. ಕಾರ್ಯಕ್ರಮದ ಕಡೆಯಲ್ಲಿ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯವರು, ಶ್ರೀ ರವಿಚಂದ್ರನ್ ಅವರಿಗೆ “ಸುವರ್ಣ ಕಲಾಶ್ರೀ” ಬಿರುದಿನಿಂದ ಗೌರವಿಸಿದರು.
ಒಟ್ಟಿನಲ್ಲಿ, ಎರಡು ದಿನಗಳ ಕಾಲ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಹಬ್ಬವನ್ನು ಮನೋಹರವಾಗಿ ಆಚರಿಸಲಾಯಿತು. ಕರ್ನಾಟಕದಿಂದ ಸಾವಿರಾರು ಮೈಲಿ ದೂರದಲ್ಲಿ ಪುಟ್ಟ ಕರ್ನಾಟಕವನ್ನೇ ಸೃಷ್ಟಿಸಿ, ಕನ್ನಡತನವನ್ನು ಸಂಭ್ರಮಿಸಿದ ಈ ಕನ್ನಡಿಗರ ಹೆಮ್ಮೆ, ಕನ್ನಡದ ಅಭಿಮಾನ ಹೇಳತೀರದು! ‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುವ ಸಾಲುಗಳು ಜೀವಂತವಾಗಿ ಮೂರ್ತರೂಪವನ್ನು ಪಡೆದಿತ್ತೆನೋ ಎನ್ನುವಷ್ಟರ ಮಟ್ಟಿಗೆ ಕನ್ನಡ ವಾತಾವರಣವನ್ನು ಸೃಷ್ಟಿಸಿದ್ದ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಎಲ್ಲ ಪದಾಧಿಕಾರಿಗಳಿಗೆ, ಎಲ್ಲ ಸ್ವಯಂ ಸೇವಕರಿಗೆ ದೊಡ್ಡ ಸಲಾಂ! ಕನ್ನಡ ಸಂಸ್ಕೃತಿ ಇನ್ನಷ್ಟು ತಲೆಮಾರುಗಳಲ್ಲಿ ಜೀವಂತವಾಗಿರಲಿ! ಇನ್ನಷ್ಟು ತೊರೆಗಳನ್ನು ಸೃಷ್ಟಿ ಮಾಡುವ ಜೀವನದಿಯಾಗಿರಲಿ!
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
-ಸಮರ್ಥ ಭೂಷಣ್