Saturday, 27th July 2024

ಏಕರೂಪ ನಾಗರಿಕ ಸಂಹಿತೆ – ಏನ್ ಕಥೆ, ಏನ್ ವ್ಯಥೆ ?

ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಮುಂದಾಗಿರುವ ಉತ್ತರಾ ಖಂಡ ಸರಕಾರವು ಈ ಸಂಬಂಧದ ವಿಧೇಯಕದ ಅಂತಿಮ ಕರಡನ್ನು ವಿಧಾನಸಭೆ ಯಲ್ಲಿ ಮಂಡಿಸಿ ಸದನದಲ್ಲಿ ಇದಕ್ಕೆ ಧ್ವನಿಮತದ ಅಂಗೀಕಾರದ ಮುದ್ರೆಯನ್ನು ದಕ್ಕಿಸಿ ಕೊಂಡಿದೆ. ತನ್ಮೂಲಕ ಈ ಸಂಹಿತೆ ಯನ್ನು ಅಳವಡಿಸಿ ಕೊಳ್ಳಲಿರುವ ದೇಶದ ಮೊಟ್ಟ ಮೊದಲ ರಾಜ್ಯ ಎನಿಸಿಕೊಳ್ಳಲಿದೆ ಉತ್ತರಾ ಖಂಡ. ಈ ಸಂಹಿತೆಯ ಸುತ್ತ ಮುತ್ತಲ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಕಿರುಪ್ರಯತ್ನ ಇಲ್ಲಿದೆ.

ಒಂದೇ ಜಾತಿ, ಒಂದೇ ನೀತಿ 
‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕನ್ನಡದ ಆದಿಕವಿ ಪಂಪನ ಮಾತು ಒಂದು ಸಾರ್ವಕಾಲಿಕ ಆದರ್ಶವೂ ಹೌದು, ಅನುಕರಣೀಯ ಮೌಲ್ಯ ವೂ ಹೌದು. ಈ ಭೂಮಿಯ ಮೇಲೆ ಜನಿಸಿದ ನಾವೆಲ್ಲಾ ಒಂದೇ ಜಾತಿಯವರು ಎಂಬುದು ಎಷ್ಟು ವಿಶಾಲ ಗ್ರಹಿಕೆಯೋ, ಈ ಜಾತಿಗಿರುವ ನೀತಿಯೂ ಒಂದೇ ಆಗಿರಬೇಕು ಎಂಬ ಆಗ್ರಹವೂ ಸ್ವೀಕಾರಾರ್ಹವೇ. ‘ಧರ್ಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸಬಾರದು, ಇವೆರಡೂ ತಮ್ಮದೇ ನೆಲೆಯುಳ್ಳ ಪರಿಕಲ್ಪನೆಗಳು’ ಎಂಬುದು ಕಾಲಾನುಕಾಲಕ್ಕೆ ವ್ಯಕ್ತವಾಗುವ ಅಭಿಮತ. ಆದರೆ ಮಾನವಜಾತಿ ಒಂದೇ ಎಂದ ಮೇಲೆ, ನೀತಿಯೂ ಒಂದೇ ಇರಲಿ ಎಂಬ ಸಮರ್ಥನೆ ಯನ್ನೂ ತಳ್ಳಿಹಾಕಲಾಗದು ಎಂಬ ಕಾರಣಕ್ಕೆ ರಾಜಕಾರಣವು ಧರ್ಮದ ಎಲ್ಲೆಗಳನ್ನು ಮೀರಿ ಎಲ್ಲರಿಗೂ ಸಮಾನವಾಗಿ ಅನ್ವಯ ವಾಗುವ ಕಟ್ಟುಪಾಡಿನ ಜಾರಿಗೆ ಟೊಂಕಕಟ್ಟಿದೆ. ಅದರ ಫಲಶ್ರುತಿಯೇ ‘ಏಕರೂಪ ನಾಗರಿಕ ಸಂಹಿತೆ’.

ಸಂಹಿತೆಗೊಂದು ಭೂಮಿಕೆ
ಏಕರೂಪ ನಾಗರಿಕ ಸಂಹಿತೆಗೆ (ಯೂನಿಫಾರ್ಮ್ ಸಿವಿಲ್ ಕೋಡ್-ಯುಸಿಸಿ) ಸಮಾನ ನಾಗರಿಕ ಸಂಹಿತೆ ಎಂಬ ಹೆಸರೂ ಇದೆ. ಇದು ಭಾರತದಲ್ಲಿ ಅನುಷ್ಠಾನಕ್ಕೆ ಬರಬೇಕು ಎಂಬ ಮಾತು ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪರಿಕಲ್ಪನೆಯ ಜಾರಿಗೆ ಇನ್ನಿಲ್ಲದ ಮಹತ್ವ ಸಿಕ್ಕಿತು ಎನ್ನಬೇಕು. ಈ ಸಂಹಿತೆಯನ್ನು ಜಾರಿಗೆ ತರುವಂತೆ ಸರ್ವೋಚ್ಚ ನ್ಯಾಯಾ ಲಯವೂ ಸೂಚಿಸಿದ ನಂತರ, ನಮ್ಮ ಆಳುಗ ವ್ಯವಸ್ಥೆಯು ಇದರ ಅನುಷ್ಠಾನಕ್ಕೆ ಭೂಮಿಕೆಯೊಂದನ್ನು ಸಜ್ಜುಗೊಳಿಸಿಕೊಳ್ಳಲು ಮುಂದಾಯಿತು. ಆ ನಿಟ್ಟಿನಲ್ಲಿ ಉತ್ತರಾಖಂಡ ಮೊದಲಿಗ ಎನಿಸಿಕೊಂಡಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?
ದಶಕಗಳ ಹಿಂದೆ ಅಷ್ಟಾಗಿ ಕೇಳಿಬರದಿದ್ದ ಈ ಸಂಹಿತೆಯ ಪರಿಕಲ್ಪನೆ ಕಳೆದ ಕೆಲ ವರ್ಷಗಳಿಂದ ಮತ್ತೆ ಮತ್ತೆ ಮುನ್ನೆಲೆಗೆ ಬರತೊಡಗಿದಾಗ, ಏನಿದು ಏಕರೂಪ ನಾಗರಿಕ ಸಂಹಿತೆ? ಇದು ಅಷ್ಟೊಂದು ಅಗತ್ಯವೇ? ಒಂದೊಮ್ಮೆ ಇದು ಜಾರಿಯಾಗದಿದ್ದರೆ ಬಾಧಕವೇನು? ಎಂಬೆಲ್ಲ ಪ್ರಶ್ನೆಗಳು ಹಲವರಲ್ಲಿ ಸುಳಿದಿದ್ದುಂಟು. ಏಕರೂಪ ನಾಗರಿಕ ಸಂಹಿತೆ ಅಥವಾ ಯುಸಿಸಿ ಎಂಬುದು, ವಿವಾಹ, ವಿಚ್ಛೇದನ, ದತ್ತು ಸ್ವೀಕಾರ ಹಾಗೂ ಉತ್ತರಾಧಿಕಾರ ನೀಡಿಕೆ ಮೊದಲಾದವನ್ನು ಒಳಗೊಂಡಂತೆ ಮತ- ಜಾತಿ-ಧರ್ಮ ಗಳನ್ನು ಲೆಕ್ಕಿಸದೆ ಭಾರತದ ಸಮಸ್ತ ನಾಗರಿಕರಿಗೆ ಅನ್ವಯವಾಗುವ, ವೈಯಕ್ತಿಕ ವಿಷಯ ಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಚ್ಛ. ಪ್ರಸ್ತುತ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ ಬಗೆಬಗೆಯ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಉದ್ದೇಶವು ಈ ಸಂಹಿತೆಯ ಜಾರಿಯ ಹಿನ್ನೆಲೆಯಲ್ಲಿ ಕೆನೆಗಟ್ಟಿದೆ.

ಮಾರ್ಗದರ್ಶಿ ಸೂತ್ರ ಏನನ್ನುತ್ತದೆ?
ಭಾರತೀಯ ಆಡಳಿತ ವ್ಯವಸ್ಥೆ ಮತ್ತು ಜನಜೀವನದ ಪಾಲಿನ ‘ಭಗವದ್ಗೀತೆ’ಯೇ ಆಗಿರುವ ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ‘ರಾಜ್ಯನೀತಿ ಮಾರ್ಗಸೂಚಿ’ಗಳಲ್ಲಿ ಒಂದೆನಿಸಿಕೊಂಡಿರುವ ೪೪ನೇ ವಿಽಯಲ್ಲಿ ‘ಭಾರತ ದೇಶದ ಭೂಭಾಗದಾದ್ಯಂತದ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸರಕಾರವು ಯತ್ನಿಸಬೇಕು’ ಎಂದು ಉಲ್ಲೇಖಿಸಲಾಗಿದೆ. ಆದರೆ ಸಂವಿಧಾನದ ೩೭ನೇ ವಿಧಿ ಅಭಿಪ್ರಾಯಪಡುವಂತೆ, ಈ ಮಾರ್ಗಸೂಚಿ ಗಳು ಅಥವಾ ನಿರ್ದೇಶಕ ತತ್ವಗಳು, ಸರಕಾರಿ ನೀತಿ-ನಿಯಮಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆಯೇ ವಿನಾ, ನ್ಯಾಯಾಲಯದ ಮುಖೇನ ಪಟ್ಟುಹಿಡಿದು ಇವನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ. ಹೀಗಾಗಿ ವಿಭಿನ್ನ ಜಾತಿ-ಭಾಷೆ- ಬಣ್ಣಗಳ ಜನರ ಆಡುಂಬೊಲವೇ ಆಗಿರುವ ಭಾರತದಲ್ಲಿ ಇಂಥದೊಂದು ಸಂಹಿತೆಯನ್ನು ಜಾರಿಗೆ ತರುವುದು ನಿಜಕ್ಕೂ ಸವಾಲಿನ ಬಾಬತ್ತೇ; ಆದರೆ ಇದರ ಹಿನ್ನೆಲೆಯಲ್ಲಿನ ಆಶಯವನ್ನು ಅರ್ಥಮಾಡಿಕೊಂಡು ನಾಗರಿಕರು ಹೃದಯ ವೈಶಾಲ್ಯ ಮೆರೆದರೆ ಇದರ ಜಾರಿ ಕಷ್ಟವೇನಲ್ಲ.

ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು?
‘ವಿವಿಧತೆಯಲ್ಲಿ ಏಕತೆ’ಯನ್ನು ಮೆರೆಯುತ್ತಿರುವ ಭಾರತದಲ್ಲಿ ಶತಮಾನಗಳಿಂದ ಅಸ್ತಿತ್ವ ದಲ್ಲಿರುವ ಜಾತಿಗಳ ಪಾರಮ್ಯವು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದಷ್ಟು ಗೋಜಲಿಗೆ ಕಾರಣವಾಗಿದೆ ಎನ್ನಬೇಕು. ಜಾತಿ-ಮತಗಳ ಆಧಾರದಲ್ಲಿ ನಮ್ಮಲ್ಲಿ ಚಾಲ್ತಿ ಯಲ್ಲಿರುವ ವಿಭಿನ್ನ ವೈಯಕ್ತಿಕ ಅಽಕಾರ/ಹಕ್ಕು, ಸ್ವಾಮ್ಯ ಇತ್ಯಾದಿಗಳೇ ಇದಕ್ಕೆ ಕಾರಣ. ಸ್ತ್ರೀಯರ ಉತ್ತರಾಧಿಕಾರದ ಹಕ್ಕನ್ನೇ ಉದಾಹರಣೆಯಾಗಿ ಪರಿಗಣಿಸಿದರೆ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ ಜನಾಂಗೀಯರ ಹಕ್ಕುಗಳನ್ನು ನಿಯಂತ್ರಿಸುವ ‘ಹಿಂದೂ ಉತ್ತರಾಧಿಕಾರ ಕಾಯ್ದೆ, ೧೯೫೬’ರ ಅನುಸಾರ ಹಿಂದೂ ಸ್ತ್ರೀಯರು ತಮ್ಮ ಹೆತ್ತವರ ಸ್ವತ್ತಿಗೆ ಗಂಡುಮಕ್ಕಳಷ್ಟೇ ಸಮಾನ ಹಕ್ಕುದಾರರಾಗಿರುತ್ತಾರೆ.

ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಅನುಸಾರ, ಮುಸ್ಲಿಂ ಸೀಯರು ತಮ್ಮ ಪತಿಯ ಸ್ವತ್ತಿನಲ್ಲಿ ಎಂಟನೇ ಒಂದು ಭಾಗ ಅಥವಾ ನಾಲ್ಕನೇ ಒಂದು
ಭಾಗದಷ್ಟು ಹಿಸ್ಸೆ ಪಡೆಯಲು ಅರ್ಹರಾಗಿರು ತ್ತಾರೆ. ಇನ್ನು, ನಮ್ಮ ನೆಲದಲ್ಲಿರುವ ಪಾರ್ಸಿ ಗಳು, ಯೆಹೂದಿಗಳು ಮತ್ತು ಕ್ರೈಸ್ತರಿಗೆ ಅನ್ವಯವಾಗುವುದು ೧೯೨೫ರ ಭಾರತೀಯ ಉತ್ತರಾಧಿಕಾರ ಕಾಯ್ದೆ; ಇದರನ್ವಯ ಕ್ರೈಸ್ತ ಮಹಿಳೆಯರಿಗೆ ಮಕ್ಕಳು ಅಥವಾ ಇತರ ಬಂಧುಗಳ ಉಪಸ್ಥಿತಿಯನ್ನು ಆಧರಿಸಿ ಹಿಸ್ಸೆ ದೊರಕಿದರೆ, ಪಾರ್ಸಿ ವಿಧವೆಯರಿಗೆ ತಮ್ಮ ಮಕ್ಕಳಂತೆ ಸಮಾನ ಹಿಸ್ಸೆ ದಕ್ಕುತ್ತದೆ. ಆದರೆ, ಒಂದೊಮ್ಮೆ ಅಂತರ್-ಮತೀಯ/ಅಂತರ್- ಜಾತೀಯ
ವಿವಾಹಗಳಾದರೆ, ಆಸ್ತಿ ಹಕ್ಕಿನ ಬಗ್ಗೆ ಸ್ಪಷ್ಟತೆ ಇರದೆ ಗೊಂದಲಕ್ಕೆ ಕಾರಣವಾಗುತ್ತದೆ. ಈ ಅಸಮಾನತೆಯ ಮೂಲೋತ್ಪಾಟನ ಮಾಡುವುದೇ ಯುಸಿಸಿಯ ಉದ್ದೇಶ.

ಸಮಾನತೆಗೆ ಸಂಚಕಾರ ಒದಗಿದೆ
ವಿವಿಧ ಜಾತಿ-ಧರ್ಮ, ಪಂಥ-ಪಂಗಡಗಳ ಅಸ್ತಿತ್ವದ ಹೊರತಾಗಿಯೂ ಸಮಾಜದಲ್ಲಿ ಸಮಾನತೆಯು ಸ್ಥಾಯಿಯಾಗಬೇಕು ಎಂಬುದು ತಲೆತಲಾಂತರ ಗಳಿಂದಲೂ  ಸಹೃದಯಿಗಳಿಂದ ಹೊಮ್ಮಿರುವ ಆಶಯ. ಆಧುನಿಕ ಭಾರತದ ಸಂವಿಧಾನವೂ ದೇಶದ ಎಲ್ಲ ನಾಗರಿಕರಿಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ನೀಡಿದೆಯಾದರೂ, ಆಸ್ತಿ ಹಕ್ಕು/ಸ್ವಾಮ್ಯ/ಉತ್ತರಾಧಿಕಾರಕ್ಕೆ ಸಂಬಂಧಿಸಿ ವಿಭಿನ್ನ ಧರ್ಮಗಳಲ್ಲಿ ಬಗೆಬಗೆಯ ಕಾನೂನು ಗಳಿರುವು ದರಿಂದ ಸಮಾನತೆಯ ಸಾಕಾರಕ್ಕೆ ಸಂಚಕಾರ ಒದಗಿದೆ. ಮುಸ್ಲಿಂ ಸಮುದಾಯದ ಕಾನೂನುಗಳು ಷರಿಯತ್ ಅನ್ನು ಆಧರಿಸಿರುವುದರಿಂದ, ಮದುವೆ, ವಿಚ್ಛೇದನ, ಜೀವನಾಂಶ, ಆಸ್ತಿ ಹಂಚಿಕೆ, ಉತ್ತರಾಧಿಕಾರದ ಬಾಬತ್ತುಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಜಾತ್ಯತೀತ ಎಂಬ ಹಣೆಪಟ್ಟಿ ಹೊತ್ತಿರುವ ಭಾರತದಲ್ಲಿ ಕಾನೂನುಗಳ ಈ ಭಿನ್ನತೆಯು ಗೋಜಲು-ಗೊಂದಲ ಸೃಷ್ಟಿಸಿರುವುದರ ಜತೆಗೆ ಸಮಾಜದಲ್ಲಿ ಒಡಕಿಗೂ ಕಾರಣವಾಗಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಯಾದಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಇತಿಶ್ರೀ ಹಾಡಬಹುದು ಎಂಬುದು ಅದರ ಸಮರ್ಥಕರ ಪ್ರತಿಪಾದನೆ.

ವೃಂದಗಾನದಲ್ಲಿ ಅಪಸ್ವರ

ಈಗಾಗಲೇ ಬಹುತೇಕರಿಗೆ ಗೊತ್ತಿರುವಂತೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಯುಸಿಸಿ ಜಾರಿಯ ಅಗತ್ಯವನ್ನು ಬಹಳ ಕಾಲ ದಿಂದಲೂ ಒತ್ತಿ ಹೇಳುತ್ತಲೇ ಬಂದಿವೆ. ಭಾರತೀಯ ಸಂವಿಧಾನದ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆಯ ಅನುಷ್ಠಾನ ಅಪೇಕ್ಷಣೀಯ ಎಂದಿದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೂ ಈ ಸಂಹಿತೆಯ ಜಾರಿಯ ಕುರಿತು ಸಹಮತ ವಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್, ಮುಸ್ಲಿಂಲೀಗ್‌ನಂಥ ಪಕ್ಷಗಳು ಈ ಸಂಹಿತೆಯ ಜಾರಿಗೆ ಅಪಸ್ವರ ಎತ್ತುತ್ತಲೇ ಬಂದಿವೆ. ಯುಸಿಸಿ ಜಾರಿಯಾ ದಲ್ಲಿ ಮುಸ್ಲಿಮರ ಹಕ್ಕುಗಳಿಗೆ ಸಂಚಕಾರ ಒದಗುತ್ತದೆ ಎಂಬ ಗ್ರಹಿಕೆಯೇ ಈ ಅಪಸ್ವರಕ್ಕೆ ಕಾರಣ.

ಸ್ವಾತಂತ್ರ‍್ಯ ಹರಣ ಆಗುವುದಿಲ್ಲ
ಏಕರೂಪ ನಾಗರಿಕ ಸಂಹಿತೆಯು ದೇಶದ ಎಲ್ಲ ನಾಗರಿಕರನ್ನೂ ಒಂದೇ ಅಳತೆಗೋಲಿನಲ್ಲಿ ಅಳೆದು ಸಮಾನವಾಗಿ ಪರಿಗಣಿಸುವುದರಿಂದ, ಈ ಸಂಹಿತೆಯ ಜಾರಿಯಿಂದಾಗಿ ಯಾರದೇ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಚಕಾರ ಒದಗುವುದಿಲ್ಲ. ಜತೆಗೆ, ದೇಶದ ಎಲ್ಲ ನಾಗರಿಕರನ್ನೂ ಸಮಾನ ಕಾನೂನಿನ ಛತ್ರಛಾಯೆಯಡಿ ತರುವುದರಿಂದಾಗಿ, ಆಸ್ತಿ ಹಕ್ಕು, ಉತ್ತರಾಧಿಕಾರ ಸಂಬಂಧಿತ ವೈವಿಧ್ಯಮಯ ವ್ಯಾಜ್ಯಗಳನ್ನು ಕ್ಷಿಪ್ರವಾಗಿ ಮತ್ತು ಸುಲಲಿತವಾಗಿ ಇತ್ಯರ್ಥ ಮಾಡಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ. ಹೀಗಾಗಿ ಯುಸಿಸಿ ಕುರಿತಾಗಿ ಸಮಾಜದ ಕೆಲ ಸಮುದಾಯಗಳಲ್ಲಿ ಮಡುಗಟ್ಟಿರಬಹುದಾದ ಭಯಕ್ಕೆ ಅರ್ಥವಿಲ್ಲ.

Leave a Reply

Your email address will not be published. Required fields are marked *

error: Content is protected !!