Thursday, 19th September 2024

ವಾಯು ಮಾಲಿನ್ಯ ಸೃಷ್ಟಿಸುತ್ತಿದೆ ಆತಂಕಕಾರಿ ಬೆಳವಣಿಗೆ

ಜನರು ಸರಕಾರಗಳಿಂದ ರಸ್ತೆ, ನೀರು ಪೂರೈಕೆ, ಸ್ವಚ್ಛತೆ, ಅಭಿವೃದ್ಧಿ ಕಾಮಗಾರಿಗಳನ್ನು ಅಪೇಕ್ಷಿಸುವಂತೆಯೇ ಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ಕೋರುವುದು ಅಗತ್ಯ.

ಇಲ್ಲವಾದಲ್ಲಿ ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿ ಅನುಭವಿಸುತ್ತಿರುವ ಸಂಕಷ್ಟ ಇತರ ರಾಜ್ಯಗಳೂ ಎದುರಿಸಬೇಕಾದ ದಿನಗಳು
ದೂರವಿಲ್ಲ. ಏಕೆಂದರೆ ಕಳೆದ ವರ್ಷ ಮಾ.24ರಂದು ಜಾರಿಗೊಳಿಸಲಾದ ಲಾಕ್ ಡೌನ್ ವೇಳೆ ವಾಹನ ಸಂಚಾರ, ಕೈಗಾರಿಕೆಗಳು ಬಂದ್ ಆಗಿದ್ದರಿಂದ ವಾಯು ಮಾಲಿನ್ಯ ಕ್ಷೀಣಿಸಿತ್ತು. ಆದರೆ ಇದೀಗ ಮತ್ತೆ ವಾಹನ ಸಂಚಾರ, ಕೈಗಾರಿಕೆಗಳು ಆರಂಭ ಗೊಂಡಿರುವುದರಿಂದ ವಾತಾವರಣದಲ್ಲಿ ಶೇ.60ರಷ್ಟು ವಾಲಿನ್ಯ ಹೆಚ್ಚಾಗಿದೆ.

ಇದೊಂದು ಆತಂಕಕಾರಿ ಬೆಳವಣಿಗೆ. ವಾಯುಮಾಲಿನ್ಯವನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಲಾಗುತ್ತಿದೆ ಯಾದರೂ, ಇದರ ಪರಿಣಾಮ ಭೀಕರವಾಗಿದೆ. ದೇಶದಲ್ಲಿ ವಾಯು ಮಾಲಿನ್ಯದಿಂದಾಗಿ 2019ನೇ ಸಾಲಿನಲ್ಲಿ 16.7ಲಕ್ಷ ಜನರು ಮೃತಪಟ್ಟಿದ್ದಾರೆ. ದೇಶದಲ್ಲಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಪ್ರತಿಶತ 17.8ರಷ್ಟು ಸಾವುಗಳು ಮಾಲಿನ್ಯದ ಕಾರಣದಿಂದಾಗಿಯೇ ಸಂಭವಿಸುತ್ತಿವೆ
ಎಂಬುದು ಮತ್ತಷ್ಟು ಕಳವಳಕಾರಿ ಸಂಗತಿ.

ಈ ಹಿಂದೆ ಮನೆಗಳಲ್ಲಿ ಅಡುಗೆ ಒಲೆಗಳನ್ನು ಹೆಚ್ಚಾಗಿ ಬಳಸುತ್ತಿದ್ದ ಕಾರಣ ಮಾಲಿನ್ಯ ಹೆಚ್ಚುತ್ತಿತ್ತು. ಆದರೆ 1990ರಿಂದ 2019ರ ಅವಧಿಯಲ್ಲಿ ಮನೆಗಳಿಂದ ಉಂಟಾಗುವ ಮಾಲಿನ್ಯದ ಪ್ರಮಾಣದಲ್ಲಿ ಶೇ.64.2ರಷ್ಟು ಇಳಿಕೆ ಕಂಡುಬಂದಿದೆ. ಆದರೆ ಇತ್ತೀ ಚೆಗೆ ವಾತಾವರಣದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇದರಿಂದಾಗಿ ಸಾವುಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ.  ಆದ್ದರಿಂದ ವಾಯು ಮಾಲಿನ್ಯ ನಿಯಂತ್ರಣ ಎಂಬುದು ಪ್ರಸ್ತುತದ ಸಂದರ್ಭದಲ್ಲಿ ದೇಶದ ಪಾಲಿಗೆ ಬಹುಮುಖ್ಯ ವಿಷಯ. ಸರಕಾರಗಳು ಅಭಿವೃದ್ಧಿ ಸಾಧಿಸಿದರೂ ವಾಯುಮಾಲಿನ್ಯದಿಂದ ಉಂಟಾಗುತ್ತಿರುವ ಅಕಾಲಿಕ ಮರಣಗಳ ಪ್ರಮಾಣ ಅಭಿವೃದ್ಧಿಗೂ ಅಡ್ಡಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ದೆಹಲಿ ನಂತರ ಹರಿಯಾಣ, ಉತ್ತರ ಪ್ರದೇಶ, ಬಿಹಾರ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಹೆಚ್ಚು ವಾಯು
ಮಾಲಿನ್ಯದ ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಾಗಿದ್ದ, ಕರ್ನಾಟಕ ಒಂದಷ್ಟು ಉತ್ತಮ ಸ್ಥಿತಿಯಲ್ಲಿದೆ. ಆದರೆ ಇದೀಗ ಮತ್ತೆ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆದ್ಯತೆ ಅವಶ್ಯಕವಾಗಿದೆ.

Leave a Reply

Your email address will not be published. Required fields are marked *