Monday, 16th September 2024

ಕರ್ನಾಟಕಕ್ಕೆ ಒದಗಿದ ಕಳವಳಕಾರಿ ಸಂಗತಿ

ದೇಶದ ರಾಜಧಾನಿ ದೆಹಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರಸ್ತುತ ವಾಯುಮಾಲಿನ್ಯ
ಅನೇಕ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಿದೆ.

ಇದರ ನಿಯಂತ್ರಣದ ಚರ್ಚೆಗಳು ಹೆಚ್ಚಳವಾಗಿರುವ ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಭಾರತ ದೇಶದಲ್ಲಿ ಅತಿ ಹೆಚ್ಚು ಗುಜರಿ ವಾಹನಗಳನ್ನು ಹೊಂದಿರುವ ರಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ ಕರ್ನಾಟಕ. ಹಳೆಯ ಹಾಗೂ ದೂಷಪೂರಿತ ವಾಹನಗಳನ್ನು ಗುಜರಿಗೆ ಹಾಕಿ ವಾಯು ಮಾಲಿನ್ಯವನ್ನು ಸುಧಾರಿಸಲು ಕೇಂದ್ರ ಸರಕಾರ ಗುಜರಿ ನೀತಿ ಘೋಷಿಸಿದೆ.

ಈ ನೀತಿಯ ಪರಿಶೀಲನೆ ವೇಳೆ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಹಳೆಯ ವಾಹನಗಳನ್ನು ಹೊಂದಿರುವ ಅಂಶ ಬೆಳಕಿಗೆ ಬಂದಿದೆ. ಇದರಿಂದ ರಾಜ್ಯದಲ್ಲಿ ಗಮನಹರಿಸಬೇಕಿರುವ ಪ್ರಮುಖ ಎರಡು ಸಂಗತಿಗಳೆಂದರೆ, ಮೊದಲನೆಯದಾಗಿ ಚಾಲನೆಗೆ ಅರ್ಹವಲ್ಲದ ವಾಹನಗಳನ್ನು ರದ್ದುಗೊಳಿಸುವುದು. ಎರಡನೆಯದಾಗಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮತ್ತಷ್ಟು ಕ್ರಮಗಳ ಬಗ್ಗೆ ಆದ್ಯತೆ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯದಲ್ಲಿ ಸಂಚರಿಸುತ್ತಿರುವ ವಾಹನಗಳ ಪೈಕಿ 70 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುದು ಇದೀಗ ಪರಿಶೀಲನೆಯಿಂದ ತಿಳಿದುಬಂದಿರುವ ಸಂಗತಿ. ಇವುಗಳಲ್ಲಿ 31.9ಲಕ್ಷ ವಾಹನಗಳು 15-20 ವರ್ಷಗಳಷ್ಟು ಹಳೆಯದಾಗಿದ್ದರೆ, 38.1 ಲಕ್ಷ ವಾಹನಗಳು 20 ವರ್ಷಗಳಷ್ಟು ಹಳೆಯದಾಗಿವೆ. ವಾಹನಗಳ ಡಿಜಿಟಲೀಕೃತ ದಾಖಲೆಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದು, ದೇಶದಲ್ಲಿ 4 ಕೋಟಿ ಹಳೆಯ ವಾಹನಗಳು ಸಂಚರಿಸುತ್ತಿವೆ ಎಂಬುದು ಆಘಾತಕಾರಿ ಸಂಗತಿ.

ದೇಶದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ದಿನಗಳಲ್ಲಿ ಹಳೆಯ ವಾಹನಗಳ ಸಂಚಾರ ಮಾಲಿನ್ಯ ಹೆಚ್ಚಳಕ್ಕೆ ಮತ್ತಷ್ಟು ಪೂರಕ ವಾಗಿದೆ. ಆದ್ದರಿಂದ ಗುಜರಿ ನೀತಿಯ ಅನುಷ್ಠಾನ ಬಹುಮುಖ್ಯ.

Leave a Reply

Your email address will not be published. Required fields are marked *