Monday, 16th September 2024

ಬಂದ್ ಶಾಂತಿಯುತವಾಗಿರಲಿ

ನಮ್ಮ ನಾಡಿಗೆ ಮತ್ತೊಮ್ಮೆ ಬಂದ್ ಬಿಸಿ ತಟ್ಟಿದೆ. ಕರೋನಾ ಸೋಂಕಿನ ವ್ಯಾಪಕ ಸಾಧ್ಯತೆಯ ನಡುವಿನಲ್ಲೇ, ರೈತರ ಹೋರಾಟದ
ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ.

ನಮ್ಮ ದೇಶದ ಬೆನ್ನೆಲುಬು ಎನಿಸಿರುವ ರೈತರ ಹಿತರಕ್ಷಣೆಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಮತ್ತು ಕೆಲವು ರೈತ ಸಂಘಟನೆಗಳು ಬೆಂಗಳೂರು ಬಂದ್ ಮಾಡಲು ಕರೆ ಕೊಡುವ ಮೂಲಕ ಈ ಒಂದು ವಿವಾದವನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ನಮ್ಮ ದೇಶದ ರೈತರು ಅವಕಾಶ ವಂಚಿತರು. ಬೆವರು ಸುರಿಸಿ ಬೆಳೆ ಬೆಳೆದರೂ, ಮಾರಾಟ ಮಾಡಲು ಮುಕ್ತವಾದ ಅವಕಾಶವಿಲ್ಲದ ಕಾರಣ, ಮಧ್ಯವರ್ತಿಗಳನ್ನು ಅವಲಂಬಿ ಸುವ ಅನಿವಾರ್ಯತೆ. ತೋಟಗಾರಿಕೆ ಬೆಳೆಯೇ ಆಗಲಿ, ಆಹಾರ ಧಾನ್ಯವೇ ಆಗಿರಲಿ, ಅದನ್ನು ಮಾರಿ ಹಣ ಗಳಿಸಬೇಕೆಂದರೆ, ರೈತರು ಮಧ್ಯವರ್ತಿಗಳ ಹಿಡಿತದಲ್ಲಿ ಸಿಕ್ಕಿ ನರಳಾಡುವ ಸ್ಥಿತಿ ಇದೆ. ಅಚ್ಚರಿಯ ವಿಷಯವೆಂದರೆ, ರೈತನನ್ನು ಅಸಹಾಯಕ ನನ್ನಾಗಿಸುವ ಈ ಪದ್ಧತಿಯು ನೂರಾರು ವರ್ಷಗಳಿಂದಲೂ ನಮ್ಮ ದೇಶದಲ್ಲಿದೆ ಮತ್ತು ಅದನ್ನು ಬದಲಿಸಿ, ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಹೆಚ್ಚಿನ ಪ್ರಯತ್ನ ನಡೆದಿಲ್ಲ.

ಈಗ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಕೃಷಿ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸಲು ಅನುವಾಗುವಂತೆ ನಿಯಮಾವಳಿಗಳನ್ನು ರೂಪಿಸಿವೆ. ಆದರೆ ಈ ಹೊಸ ನಿಯಮಗಳು ರೈತನನ್ನು ರಕ್ಷಿಸುವ ಬದಲು ಶೋಷಿತ್ತವೆ ಎಂಬುದೇ ವಿರೋಧ ಪಕ್ಷಗಳ ಮತ್ತು ಹಲವು ಚಿಂತಕರ ವಾದ. ಅದರ ಹಿನ್ನೆಲೆಯಲ್ಲಿ ಇಂದು ಬಂದ್‌ಗೆ ಕರೆ ನೀಡಲಾಗಿದೆ. ಅದೇನಿದ್ದರೂ, ರೈತರ ಬಂದ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ, ಪ್ರತಿಭಟಿಸುವ ಹಕ್ಕು ಹಿಂಸೆಯ ಹಾದಿ ಹಿಡಿಯದಿರಲಿ ಎಂದು ಆಶಿಸುವುದು
ಜನಸಾಮಾನ್ಯನ ಅನಿವಾರ್ಯತೆ ಎನಿಸಿದೆ.

Leave a Reply

Your email address will not be published. Required fields are marked *