Monday, 16th September 2024

ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಜಾತಿ ಮಾನದಂಡವೇ

ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಹಿತ್ಯ ಕ್ಷೇತ್ರದ ಸಾಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ.

ಅದೇ ರೀತಿ ಸಾಹಿತ್ಯ ಕ್ಷೇತ್ರದಲ್ಲಿನ ರಾಜಕೀಯ ಕಾರಣಗಳಿಗಾಗಿಯೂ ಕುಖ್ಯಾತಿಗೆ ಪಾತ್ರವಾಗುತ್ತಿರುವುದು ವಿಪರ್ಯಾಸ. ನಾಡಿನ ಸಾಂಸ್ಕೃತಿಕ ಪ್ರಾತಿನಿಽಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯ ಪರಿಚಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಕೆಲವು ಸಮ್ಮೇಳನಗಳ ಬಗ್ಗೆ ಉಂಟಾದ ಅಸಮಾಧಾನದಿಂದ ಕೆಲವು ಪರ್ಯಾಯ ಸಂಘಟನೆಗಳನ್ನು ಸ್ಥಾಪಿಸಿ, ಪರ್ಯಾಯ ಸಮ್ಮೇಳನಗಳನ್ನು ನಡೆಸಿದ್ದರೂ ಕಸಾಪ ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಂಡು ಮುಂದುವರಿದಿದೆ.

ಇದೀಗ ಹಾವೇರಿಯಲ್ಲಿ -26ರಿಂದ ಮೂರು ದಿನಗಳ ಕಾಲ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೇ ವಿಚಾರದಲ್ಲಿ ಮತ್ತೊಮ್ಮೆ ರಾಜಕೀಯ ವಾತವರಣ ಸೃಷ್ಟಿಯಾಗಿದೆ. ಸಾಹಿತಿ ಡಾ.ದೊಡ್ಡರಂಗೇ ಗೌಡ, ಲೇಖಕಿ ಡಾ.ವೀಣಾ ಶಾಂತೇಶ್ವರ ಮತ್ತು ಸಾಹಿತಿ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರ ಹೆಸರು ಅಧ್ಯಕ್ಷ ಸ್ಥಾನದ ಆಯ್ಕೆ
ಪಟ್ಟಿಯಲ್ಲಿವೆ. ಆದರೆ ಅಧ್ಯಕ್ಷ ಸ್ಥಾನದ ಆಯ್ಕೇ ಜಾತಿ ಆಧಾರದಲ್ಲಿ ನಡೆಯಬೇಕೆಂಬ ಕೂಗು ಕೇಳಿಬರುತ್ತಿರುವುದು ಸಾಹಿತ್ಯ ಕ್ಷೇತ್ರದ ಗೌರವಕ್ಕೆ ಕಳಂಕ ತರುವ ಸಂಗತಿ.

ಕಳೆದ ನಾಲ್ಕು ವರ್ಷಗಳಿಂದ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷರ ಸ್ಥಾನ ವನ್ನು ನೀಡಲಾಗಿದೆ. ಆದ್ದರಿಂದ ಈ ಬಾರಿ ಗೌಡ ಸಮುದಾಯಕ್ಕೆ ಸಮ್ಮೇಳನಾಧ್ಯಕ್ಷರ ಸ್ಥಾನವನ್ನು ನೀಡಬೇಕೆಂಬ ಆಗ್ರಹ ಕೇಳಿಬರಲಾರಂಭಿಸಿದೆ. ಸಾಹಿತ್ಯ ಕ್ಷೇತ್ರದ ಗೌರವಯುತ ಸ್ಥಾನವಾದ ಸಮ್ಮೇಳನಾಧ್ಯಕ್ಷರ ಆಯ್ಕೆ, ಸಾಹಿತ್ಯ ಸಾಧನೆ ಆಧಾರದಲ್ಲಿ ನಡೆಯದೆ ಜಾತಿ ಆಧಾರದಲ್ಲಿ ನಡೆಯಬೇಕೆಂಬುದು ಸರಿಯಲ್ಲ. ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಾಧನೆ ಮುಖ್ಯವಾಗಬೇಕೆ ಹೊರತು ಜಾತೀಯತೆ ಆಧಾರದಲ್ಲಿ ನಡೆಯಬೇಕೆಂಬ ಹಕ್ಕೋತ್ತಾಯವೇ ಅವೈಜ್ಞಾನಿಕ.

Leave a Reply

Your email address will not be published. Required fields are marked *