Monday, 16th September 2024

ಆನೆ ದಾಳಿ, ಸಾವಿಗೆ ಕಡಿವಾಣ ಅಗತ್ಯ

ಒಂದೆಡೆ ಪ್ರಕೃತಿ ವಿಕೋಪ ಇನ್ನೊಂದೆಡೆ ವನ್ಯಜೀವಿಗಳ ದಾಳಿಯಿಂದ ರಾಜ್ಯದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ದಕ್ಷಿಣ ಕರ್ನಾಟಕದ ೧೦ಕ್ಕೂ ಹೆಚ್ಚು ಜಿಲ್ಲೆಗಳ ಜನತೆ ತತ್ತರಿಸುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ ಮಾನವ ಹಾಗೂ ಆನೆಗಳ ನಡುವಿನ ಸಂಘರ್ಷದಲ್ಲಿ ಕರ್ನಾಟಕದಲ್ಲಿ ೧೬೦ ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಇದೇ ವೇಳೆ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ೨೮೫ ಆನೆಗಳು ಅಸಹಜ ಸಾವು ಕಂಡಿವೆ. ಕಳೆದ ಒಂದೇ ವರ್ಷದಲ್ಲಿ ೯೪ ಆನೆಗಳು ಮೃತಪಟ್ಟಿವೆ. ದೇಶದಲ್ಲಿಯೇ ಅತಿ ಹೆಚ್ಚು ( ೬,೩೯೫- ೨೦೨೩ರ ಗಜಗಣತಿ) ಗಜಸಂತತಿ ಹೊಂದಿರುವ ಕರ್ನಾಟಕದಲ್ಲಿ ವನ್ಯಜೀವಿ ಸಂಘರ್ಷ ಹೊಸದೇನೂ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆನೆಗಳು ನಾಡಿಗೆ ಪ್ರವೇಶಿಸಿ ಎಲ್ಲೆಂದರಲ್ಲಿ ದಾಳಿ ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ನಡುರಸ್ತೆಯಲ್ಲಿ ಅಡ್ಡ ವಾಗಿ ನಿಂತು ತೊಂದರೆ ನೀಡುತ್ತಿವೆ.

ಕರಾವಳಿ ಜಿಲ್ಲೆಗಳಲ್ಲೂ ಆನೆ ಹಾವಳಿ ವ್ಯಾಪಕವಾಗಿದೆ. ಆನೆಗಳ ಸಾವಿಗೂ, ಈ ದಾಳಿಗೂ ನೇರ ಸಂಬಂಧವಿದೆ. ಆನೆ ದಾಳಿಯಿಂದ ತಮ್ಮ ಬೆಳೆ ರಕ್ಷಿಸಿ ಕೊಳ್ಳಲು ಮತ್ತು ಪ್ರಾಣ ಉಳಿಸಿಕೊಳ್ಳಲು ಕಾಡಂಚಿನ ರೈತರು ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಾರೆ. ಇದೊಂದೇ ಕಾರಣದಿಂದ ಕಳೆದ ವರ್ಷ ೩೦ಕ್ಕೂ ಹೆಚ್ಚು ಆನೆಗಳು ಸಾವಿಗೀಡಾಗಿವೆ. ಕರ್ನಾಟಕ ಹೈಕೋರ್ಟ್ ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಯನ್ನೂ ನಡೆಸುತ್ತಿದೆ. ರಾಜ್ಯ ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಈ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ೩೫ ಆನೆಗಳು ಸಾವಿಗೀಡಾಗಿವೆ. ಚಾಮರಾಜನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ೧೭ ಆನೆಗಳು ಮೃತಪಟ್ಟರೆ, ಕೊಡಗು ಅರಣ್ಯ ವ್ಯಾಪ್ತಿಯಲ್ಲಿ ೧೧ ಆನೆಗಳು ಮೃತಪಟ್ಟಿವೆ. ತಿಂಗಳಲ್ಲಿ ಸರಾಸರಿ ೧೦ಕ್ಕೂ ಹೆಚ್ಚು ಆನೆಗಳು ದುರಂತ ಸಾವು ಕಾಣುತ್ತಿರುವುದು ಕಳವಳಕಾರಿ ವಿಚಾರ.

ಅವುಗಳ ದಾಳಿಗೆ ಕಾರಣವಾದ ಅಂಶಗಳ ಬಗ್ಗೆ ಸಂಶೋಧನೆಯ ಜೊತೆಗೆ ಸಂಘರ್ಷವನ್ನು ತಪ್ಪಿಸುವ ಮಾರ್ಗೋಪಾಯಗಳನ್ನೂ ಕಂಡುಕೊಳ್ಳ ಬೇಕಾಗಿದೆ. ಆನೆಗಳ ದಾಳಿ ಕಾರಣದಿಂದ ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಕಾಡಂಚಿನ ನೂರಾರು ರೈತರು ತಮ್ಮ ಕೃಷಿ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಇಲ್ಲಿ ಕಾರ್ಮಿಕರೂ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮುಂದೊಂದು ದಿನ ಕರಾವಳಿ ಜಿಲ್ಲೆಗಳಲ್ಲೂ ಜನರು ಅಡಕೆ ತೋಟಕ್ಕಿಳಿ ಯಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಬಹುದು. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ.

Leave a Reply

Your email address will not be published. Required fields are marked *