Monday, 16th September 2024

ತ್ಯಾಜ್ಯ ನಿರ್ವಹಣಾ ಮಂಡಳಿ ರಚನೆ ಸ್ವಾಗತಾರ್ಹ ಕ್ರಮ

ಇಂದು ಅನೇಕ ಸಮಾಜಗಳು ತಮ್ಮ ಏಳಿಗೆಗಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸು ವಂತೆ ಒತ್ತಾಯಿಸುತ್ತಿವೆ. ಈ ಬೆಳವಣಿಗೆಯ ನಡುವೆ ವಿವಿಧ ಸಮಾಜಗಳ ನಿಗಮ ಮಂಡಳಿಗಳ ಸ್ಥಾಪನೆಗಿಂತಲೂ ಮುಖ್ಯವಾಗಿ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ನಿಗಮ ಮಂಡಳಿ ರಚನೆಯ ನಿರ್ಧಾರ ಮಹತ್ವದ್ದಾಗಿದೆ.

ಬಹಳಷ್ಟು ದಿನಗಳಿಂದ ತ್ಯಾಜ್ಯ ನಿರ್ವಹಣೆ ಸಮರ್ಪಕ ವಾಗಿಲ್ಲ ಎಂಬ ಆರೋಪದ ಜತೆಗೆ ಹಲವು ಸಮಸ್ಯೆಗಳು ಕಂಡುಬಂದಿ ದ್ದವು. ಕೇವಲ ಆರೋಪ ಮಾತ್ರವಲ್ಲದೆ, ಕಸ ವಿಲೇವಾರಿ ಮತ್ತು ನಿರ್ವಹಣೆಯಲ್ಲಿನ ಲೋಪಕ್ಕೆ ಕಾರಣವಾಗುತ್ತಿರುವ ಬಿಬಿಎಂಪಿ ಬಗ್ಗೆ ಹೈಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಪಾಲಿಕೆಯನ್ನು ಸೂಪರ್ ಸೀಡ್
ಮಾಡುವಂತೆಯೂ ನಿರ್ದೇಶಿತ್ತು. ಇದೀಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವೇ ಖುದ್ದಾಗಿ ಆಸಕ್ತಿವಹಿಸಿದೆ.

ಜಲಮಂಡಳಿ, ಬೆಸ್ಕಾಂ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣಾ ಮಂಡಳಿಯೂ ಕಾರ್ಯನಿರ್ವಹಿಲಿದ್ದು, ಪ್ರತ್ಯೇಕ ಮಂಡಳಿ ಸ್ಥಾಪನೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸರಕಾರ ಬಿಬಿಎಂಪಿಗೆ ಸೂಚಿಸಿದೆ. ಸರಕಾರವೇ ಖುದ್ದಾಗಿ ಆಸಕ್ತಿವಹಿಸಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರುವುದು ರಾಜ್ಯದ ಪಾಲಿಗೆ ಉತ್ತಮ ಬೆಳವಣಿಗೆ. ಆದರೆ ಈ ಮಂಡಳಿಯು ಬಿಬಿಎಂಪಿಯ ಮತ್ತೊಂದು ಅಂಗವಾಗಿ ಕಾರ್ಯನಿರ್ವಹಿಸುವಂತಾಗದೆ, ಇಡೀ ರಾಜ್ಯದ ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸುವಂತಾಗಬೇಕು.

ಹಸಿ ಕಸದಿಂದ ಗೊಬ್ಬರ ಉತ್ಪಾದನೆ ಆರಂಭಿಸುವುದರಿಂದ ರಾಜ್ಯದ ಆರ್ಥಿಕ ಪ್ರಗತಿಗೂ ಪೂರಕವಾಗಲಿದೆ. ಬಿಬಿಎಂಪಿ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಆರಂಭಕ್ಕೆ ಮುಂದಾಗಿರುವ ತ್ಯಾಜ್ಯ ನಿರ್ವಹಣ ಮಂಡಳಿ, ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ತ್ಯಾಜ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಸಾಮರ್ಥ್ಯ ಸಾಧಿಸಬೇಕಿದೆ.

Leave a Reply

Your email address will not be published. Required fields are marked *