Monday, 16th September 2024

ಶಾಸನಬದ್ಧ ಕ್ರಮ ಉತ್ತಮ ಬೆಳವಣಿಗೆ

ದಕ್ಷಿಣ ಭಾರತದಲ್ಲಿ ಲಾಟರಿ ನಿಷೇಧ ಜಾರಿಗೊಳಿಸಿ ಹಲವು ವರ್ಷಗಳು ಕಳೆದಿದ್ದರೂ, ಹಿನ್ನೆಲೆಯಲ್ಲಿ ಸಾಗುತ್ತಿರುವ ಆನ್‌ಲೈನ್ ಲಾಟರಿ ಅನೇಕರ ಜೀವನವನ್ನು ದುರಂತಕ್ಕೀಡಾಗಿಸಿದೆ. ಈ ಮಾರಕ ಆನ್‌ಲೈನ್ ಲಾಟರಿ ತಡೆಗೆ ಇದೀಗ ತಮಿಳುನಾಡು ಸರಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ ವಾಗಿದೆ.

ಶಾಸನಬದ್ಧವಾಗಿ ಆನ್‌ಲೈನ್ ಲಾಟರಿ ನಿಷೇಧಕ್ಕೆ ಕ್ರಮಕೈಗೊಂಡಿರುವುದು ಉತ್ತಮವಾದ ಕ್ರಮ. ತಮಿಳುನಾಡು ವಿಧಾನಸಭೆಯಲ್ಲಿ ಅಲ್ಲಿನ ರಾಜ್ಯ ಸರಕಾರ ಗುರುವಾರದಂದು ಆನ್‌ಲೈನ್ ಗೇಮಿಂಗ್ ನಿಷೇಧಿಸುವ ಮಸೂದೆಯನ್ನು ಮಂಡಿಸಿದೆ. ತಮಿಳುನಾಡು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳ (ತಿದ್ದುಪಡಿ) ಕಾಯಿದೆ -2021 ಮಸೂದೆಯನ್ನು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮಂಡಿಸಿದ್ದಾರೆ.

ಆನ್‌ಲೈನ್ ಜೂಜಾಟದಲ್ಲಿ ತೊಡಗುವವರಿಗೆ ಐದು ಸಾವಿರ ರು. ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ಹಾಗೂ ಆನ್‌ಲೈನ್ ಜೂಜಾಟವನ್ನು ಆಯೋಜಿಸುವವರಿಗೆ ಹತ್ತು ಸಾವಿರ ರು. ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವುದಕ್ಕೆ ಹೊಸ ಮಸೂದೆಯಲ್ಲಿ ಅವಕಾಶವಿದೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳ ಬಳಕೆ ಹೆಚ್ಚಿದಂತೆ, ಇವುಗಳ ಮೂಲಕ ಆನ್‌ಲೈನ್ ಜೂಜಾಟ ಹಾಗೂ ಅಮಾಯಕರ ವಂಚನೆ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಮಸೂದೆಯ ಜಾರಿ ಪರಿಣಾಮಕಾರಿ.

ಕರ್ನಾಟಕ ರಾಜ್ಯದಲ್ಲಿ 2007ರಲ್ಲಿಯೇ ಲಾಟರಿ ನಿಷೇಧಗೊಳಿಸಲಾಯಿತಾದರೂ, 2015ರವರೆಗೆ ಅಕ್ರಮ ಲಾಟರಿ ವ್ಯವಹಾರ ಚಾಲ್ತಿಯಲ್ಲಿತ್ತು. ಇದೀಗ ಲಾಟರಿ ವ್ಯವಹಾರ ನಿರ್ಮೂಲನೆಗೊಂಡಿದ್ದರೂ, ಆನ್‌ಲೈನ್ ಲಾಟರಿ ವ್ಯವಹಾರ ತೆರೆಮರೆಯಲ್ಲಿ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯ ದಲ್ಲಿಯೂ ಶಾಸನಬದ್ಧವಾಗಿ ಆನ್‌ಲೈನ್ ನಿಷೇಧಕ್ಕೆ ತಮಿಳುನಾಡು ಮಾದರಿ ಪೂರಕ. ದಕ್ಷಿಣ ಭಾರತದಲ್ಲಿ ಅಕ್ರಮ ಲಾಟರಿ ವ್ಯವಹಾರದ ಕುಖ್ಯಾತಿಗೂ ಕಾರಣವಾಗಿದ್ದ ತಮಿಳುನಾಡಿನಲ್ಲಿಯೇ ಇದೀಗ ಇಂಥದೊಂದು ಮಸೂದೆ ಮಂಡನೆಯಾಗಿರುವುದು ಉತ್ತಮ ಬೆಳವಣಿಗೆ.

Leave a Reply

Your email address will not be published. Required fields are marked *