Thursday, 19th September 2024

ಮಕ್ಕಳ ಸುರಕ್ಷತೆಗೆ ಮಾರ್ಗಸೂಚಿ ಜಾರಿ

ರಾಜ್ಯದಲ್ಲಿ ಬಹಳಷ್ಟು ಜಿಲ್ಲೆಗಳು ಲಾಕ್‌ಡೌನ್‌ನಿಂದ ಹಂತಹಂತವಾಗಿ ತೆರವುಗೊಳ್ಳುತ್ತಿರುವ ದಿನಗಳಲ್ಲಿ ಎದುರಾಗುತ್ತಿರುವ ಮತ್ತೊಂದು ಆತಂಕ ಮಕ್ಕಳ ಸುರಕ್ಷತೆ. ಶಾಲೆಗಳನ್ನು ಆರಂಭಿಸುವಂತೆ ಸರಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿರುವ ತಜ್ಞರ ಸಮಿತಿ ಪ್ರತಿಯೊಬ್ಬ ವಿದ್ಯಾರ್ಥಿಗೂ 2 ಲಕ್ಷ ರು. ಗಳ ವಿಮೆ ಮಾಡಿಸುವಂತೆ ಸಲಹೆ ನೀಡಿದೆ.

ಸುರಕ್ಷತೆ ದೃಷ್ಟಿಯಿಂದ ಈ ಬೆಳವಣಿಗೆ ಸರಿಯೆನಿಸಿದರೂ, ವಿಮೆಗಿಂತಲೂ ಮಕ್ಕಳ ಸುರಕ್ಷತೆಯೇ ಮತ್ತಷ್ಟು ಮುಖ್ಯವಾಗಬೇಕು. ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳಿಗಾಗಿ ಮಾರ್ಗಸೂಚಿಗಳನ್ನು ರಚಿಸಬೇಕಿರುವ ಅವಶ್ಯಕತೆಯಿದೆ. ಸಮಿತಿ ಪ್ರಕಾರ, ಕರ್ನಾಟಕದ 2.3 ಕೋಟಿ ಮಕ್ಕಳಲ್ಲಿ 18 ವಯಸ್ಸಿನ 3.4 ಲಕ್ಷ ಮಕ್ಕಳಿಗೆ ಕರೋನಾ 3ನೇ ಅಲೆಯ ಪರಿಣಾಮ 23,804 ಮಕ್ಕಳಿಗೆ ಆಸ್ಪತ್ರೆಯ ಅವಶ್ಯಕತೆ ಇರುತ್ತದೆ.

6,801 ಮಕ್ಕಳಿಗೆ ಐಸಿಯು ಹಾಗೂ 43,358 ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಉಳಿದ ಅಂದರೆ 2.6 ಲಕ್ಷ ಮಕ್ಕಳು ಮನೆಯ ಚಿಕಿತ್ಸೆ ಪಡೆಯಬಹುದು. ಶೇ.85ರಷ್ಟು ಮಕ್ಕಳಿಗೆ ರೋಗ ಲಕ್ಷಣಗಳೇ ಇರುವುದಿಲ್ಲ ಎಂಬುದು ತಜ್ಞರ ಸಮಿತಿ ವಿವರ. ಆದರೆ ರೋಗದ ನಂತರದ ಕ್ರಮಗಳಿಗಿಂತಲೂ ರೋಗದ ಹರಡುವಿಕೆಯನ್ನು ತಡೆಯುವಲ್ಲಿ ಮೊದಲಿನಿಂದಲೇ ಸುರಕ್ಷತಾ ಕ್ರಮಗಳಿಗಾಗಿ ಮಾರ್ಗಸೂಚಿಗಳನ್ನು ರೂಪಿಸುವುದು ಜವಾಬ್ದಾರಿಯುತ ಕಾರ್ಯ.

ಪ್ರತಿ ವಿದ್ಯಾರ್ಥಿಗಳಿಗೆ ವಿಮೆ ಮಾಡಿಸುವುದು ಉತ್ತಮವಾದರೂ, ಅದಕ್ಕಿಂತಲೂ ಮುಖ್ಯವಾದದ್ದು ಸುರಕ್ಷತೆ. ಆದ್ದರಿಂದ ಪೋಷಕರು ಮಕ್ಕಳ ಸುರಕ್ಷತೆಗಾಗಿ ಅನುಸರಿಸಬೇಕಾದ ಕ್ರಮಗಳು ಹಾಗೂ ಶಾಲೆಯ ಆಡಳಿತ ಮಂಡಳಿಗಳು ಅಳವಡಿಸಿಕೊಳ್ಳ
ಬೇಕಿರುವ ಕ್ರಮಗಳ ಬಗ್ಗೆ ಸರಕಾರ ಸ್ಪಷ್ಟವಾದ ಮಾರ್ಗಸೂಚಿಯೊಂದನ್ನು ಪ್ರಕಟಿಸಬೇಕಾದ ಅವಶ್ಯಕತೆಯೇ ಇಂದಿನ ಮೊದಲ ಆದ್ಯತೆಯಾಗಬೇಕು.

Leave a Reply

Your email address will not be published. Required fields are marked *