Monday, 16th September 2024

ಅನಿಶ್ಚಿತ ಆದೇಶಕ್ಕಿಂತ, ಸ್ಪಷ್ಟ ಸೂಚನೆ ಸೂಕ್ತ

ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಇರುವುದು ಈಗಾಗಲೇ ಸರಕಾರ ಒಪ್ಪಿಕೊಂಡಿದೆ. ಇದನ್ನು ನಿಯಂತ್ರಿಸುವುದಕ್ಕೆ ತಗೆದುಕೊಳ್ಳಬೇಕಾದ ವಿಷಯದಲ್ಲಿ ರಾಜ್ಯ ಸರಕಾರ ಈ ಬಾರಿ ಸ್ಪಷ್ಟ ನಿರ್ಧಾರಗಳನ್ನು ತಗೆದುಕೊಳ್ಳದೇ ದಿನಕ್ಕೊಂದು ಆದೇಶ ಮಾಡುತ್ತಿರುವುದು ಗೊಂದಲಗಳಿಗೆ ಕಾರಣವಾಗಿದೆ.

ಕರೋನಾ ಸೋಂಕು ಉಲ್ಬಣವಾಗುತ್ತಿರುವ ಈ ಸಮಯದಲ್ಲಿ ಒಂದೆಡೆ ಸರಕಾರ ಪರೀಕ್ಷೆಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ.
ಆದರೆ ಇನ್ನೊಂದೆಡೆ ಆ-ಲೈನ್ ತರಗತಿಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎನ್ನುವ ಮಾತನ್ನು ಹೇಳುತ್ತಿದೆ. ಆದರೆ ಶಾಲೆ ಅಥವಾ ಕಾಲೇಜಿನಲ್ಲಿರುವ ವಿದ್ಯಾರ್ಥಿ ಅಥವಾ ಶಿಕ್ಷಕರಿಗೆ ಕರೋನಾ ಬಂದರೆ, ಆಗ ಶಾಲೆ ಅಥವಾ ಕಾಲೇಜಿಗಳನ್ನು ಬಂದ್ ಮಾಡಲು ಬಿಬಿಎಂಪಿ ಅಥವಾ ಸ್ಥಳೀಯ ಆಡಳಿತ ಮುಂದಾಗುತ್ತದೆ.

ಈ ರೀತಿ ಬಂದ್ ಮಾಡಿದಾಗ ಆನ್‌ಲೈನ್, ಮಾಡದಿದ್ದಾಗ ಆಫ್ಲೈನ್ ಎನ್ನುವ ನಿರ್ಧಾರ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು
ಗೊಂದಲಕ್ಕೆ ಸಿಲುಕಿಸಿದೆ. ಇದಿಷ್ಟೇ ಅಲ್ಲ ಶಾಲಾ ಕಾಲೇಜು ಆರಂಭಿಸುವಾಗ ಇದ್ದ ಕರೋನಾ ಪರೀಕ್ಷೆಯ ಸವಲತ್ತುಗಳು ಕಣ್ಮರೆಯಾಗಿವೆ. ಆದ್ದರಿಂದ
ಯಾರಿಗೆ ಸೋಂಕಿದೆ ಎನ್ನುವುದನ್ನು ಪತ್ತೆ ಹಚ್ಚುವುದು ಈಗ ಸವಾಲಾಗಿದೆ. ಶಾಲಾ ಕಾಲೇಜುಗಳಲ್ಲಿ ಇರುವ ಮತ್ತೊಂದು ಸಮಸ್ಯೆ ಎಂದರೆ, ಖಾಸಗಿ ಶಾಲಾ ಕಾಲೇಜುಗಳಲ್ಲಿರುವ ಬಹುತೇಕ ಸಿಬ್ಬಂದಿ ೪೫ ವರ್ಷದೊಳಗಿನವರು.

ಸರಕಾರದ ನಿಮಯದ ಪ್ರಕಾರ ಅವರು ಕರೋನಾ ಲಸಿಕೆಯನ್ನು ಪಡೆಯುವಂತಿಲ್ಲ. ಒಂದು ವೇಳೆ ಅವರಿಗೆ ಸೋಂಕು ಕಾಣಿಸಿಕೊಂಡರೂ, ಅದಕ್ಕೆ ಬಹುತೇಕ ಮ್ಯಾನೇಜ್‌ಮೆಂಟ್‌ಗಳು ಜವಾಬ್ದಾರಿ ಹೊರುವುದಿಲ್ಲ. ಈ ಎಲ್ಲ ಸಮಸ್ಯೆಗಳಿರುವುದರಿಂದ ರಾಜ್ಯ ಸರಕಾರ ಶಾಲಾ ಕಾಲೇಜು ವಿಷಯದಲ್ಲಿ ಒಂದು ಸ್ಪಷ್ಟ ನಿರ್ಣಯ ಕೈಗೊಳ್ಳಲಿ. ಈಗಾಗಲೇ ಕರೋನಾ ಎರಡನೇ ಅಲೆ ಇರುವುದು ಸ್ಪಷ್ಟವಾಗಿರುವುದರಿಂದ ಆನ್‌ಲೈನ್ ಅಥವಾ ಆಫ್ಲೈನ್ ತರಗತಿ ಎನ್ನುವ ಸ್ಪಷ್ಟ ಸೂಚನೆ ನೀಡಲಿ.

Leave a Reply

Your email address will not be published. Required fields are marked *