Thursday, 19th September 2024

ಹಾವು ಸಾಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ

ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪುರಾಣ, ಸಾಮಾಜಿಕ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಬಳಿಕ, ಇದೀಗ ಸದನದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ನಾಯಕರು ಆರಂಭದಲ್ಲಿ ಸಿ.ಡಿ ವಿಷಯವನ್ನು ಎತ್ತಿಕೊಳ್ಳದೇ, ಬಜೆಟ್ ವಿಷಯ ಹಾಗೂ ಸರಕಾರ ಇನ್ನಿತ್ತರೆ ವಿಷಯದ ಬಗ್ಗೆ ಟೀಕಾಪ್ರಹಾರ ನಡೆಸಿದ ಬಳಿಕ ಇದೀಗ ಸಿಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮಾಡಬೇಕು ಎನ್ನುವ ಪಟ್ಟು ಹಿಡಿದಿದೆ.

ಸೋಮವಾರದಿಂದ ವಿಧಾನಸಭೆಯಲ್ಲಿ ಈ ವಿಷಯವನ್ನಿಟ್ಟುಕೊಂಡು ಧರಣಿ ನಡೆಸುತ್ತಿರುವ ಕಾಂಗ್ರೆಸ್, ಮಂಗಳವಾರವೂ ಇಡೀ ದಿನ ಇದೇ ವಿಷಯಕ್ಕೆ ಸದನದ ಕಾರ್ಯಕಲಾಪ ನಡೆಯಲು ಬಿಡಲಿಲ್ಲ. ತಮ್ಮ ಆಗ್ರಹವನ್ನು ಈಡೇರಿಸುವ ತನಕ ಈ ಧರಣಿ ಮುಂದುವರಿಸುವುದಾಗಿ ಈಗಾಗಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇನ್ನು ಆಡಳಿತ ಪಕ್ಷ ಬಿಜೆಪಿಯೂ ಸಹ, ಕಾಂಗ್ರೆಸ್ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದಾರೆ. ಆಡಳಿತ ಹಾಗೂ ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸದೇ ಇರುವುದರಿಂದ, ಆರೋಪ-ಪ್ರತ್ಯಾರೋಪ ಹಾಗೂ ವಾಕ್ಸಮರ ನಡೆಯುತ್ತಿದೆ ಹೊರತು, ರಾಜ್ಯದ ಅಭಿವೃದ್ಧಿಗೆ ಸಂಬಂಽಸಿದ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ.

ಶಾಸನ ರಚನೆ, ರಾಜ್ಯ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹಾಗೂ ತಪ್ಪು ದಾರಿಗೆ ಹೋಗ ದಂತೆ ಸರಕಾರವನ್ನು ಪ್ರತಿಪಕ್ಷಗಳು ಎಚ್ಚರಿಸುವುದಕ್ಕೆ ವೇದಿಕೆಯಾಗಬೇಕಿದ್ದ ಸದನ ಹಗ್ಗಜಗ್ಗಾಟದ ವೇದಿಕೆಯಾಗುತ್ತಿದೆ. ಕರೋನಾ ಸಂಕಷ್ಟ, ಆರ್ಥಿಕ ಸವಾಲು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿರುವ ಕರ್ನಾಟಕವನ್ನು ಈ ಎಲ್ಲದರಿಂದ
ಹೊರತರಲು ಆಗಬೇಕಿರುವ ಕೆಲಸ ಬಿಟ್ಟು, ತಾರ್ತಿಕ ಅಂತ್ಯ ಕಾಣದ ವಿಷಯದಲ್ಲಿ ಆಡಳಿತ-ವಿರೋಧ ಪಕ್ಷಗಳು ಹಗ್ಗಜಗ್ಗಾಟ
ಮುಂದುವರಿಸಿವೆ. ಇನ್ನಾದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ, ಸ್ವಪ್ರತಿಷ್ಠೆಯನ್ನು ಬದಿಗಿಟ್ಟು, ಸುಗಮ ಸದನ ಕಲಾಪಕ್ಕೆ ಕ್ರಮವಹಿಸಬೇಕಿದೆ.

Leave a Reply

Your email address will not be published. Required fields are marked *