Friday, 18th October 2024

ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಸರಿಯಲ್ಲ

ಅಮೆರಿಕ ಎಂದರೆ ಅದು ಇಡೀ ಜಗತ್ತಿನ ರಾಜಧಾನಿ. ಗಾತ್ರ ಮತ್ತು ಜನಸಂಖ್ಯೆೆಯಲ್ಲಿಯೂ ಬಲಿಷ್ಠ ರಾಷ್ಟ್ರ. ಆದರೆ ಇಲ್ಲಿನ ಚುನಾವಣೆಯಲ್ಲಿ ಭಾರತೀಯ ಮೂಲದವರ ಪಾತ್ರವೇ ನಿರ್ಣಾಯಕ.

20ಲಕ್ಷ ಭಾರತೀಯ ಮೂಲದ ಹಿಂದೂಗಳನ್ನು ಒಳಗೊಂಡಿದೆ ಅಮೆರಿಕ. ಇಂಥ ಸ್ಥಳದಲ್ಲಿಯೇ ಇದೀಗ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಸರಿಯಾದ ಕ್ರಮವಲ್ಲ. ಬಲಪಂಥ ಧೋರಣೆಯ ರಿಪಬ್ಲಿಕನ್ ಪಕ್ಷ ಹಾಗೂ ಎಡಪಂಥ
ಧೋರಣೆಯ ಡೆಮಾಕ್ರಟಿಕ್ ಪಕ್ಷದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಮಹಿಳೆ ಸ್ಪರ್ಧಿಸಿರುವುದು ಭಾರತೀಯರ ಪಾಲಿಗೆ ಗೌರವದ ಸಂಗತಿ. ಆದರೆ ಇದೀಗ ಈಕೆಯನ್ನು ಪ್ರಚಾರದ ಪೋಸ್ಟರ್ ‌ನಲ್ಲಿ ಚಿತ್ರಿಸಿರುವ ರೀತಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಪಕ್ಷದಿಂದ ಜೋ ಬಿಡನ್ ಅಭ್ಯರ್ಥಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿ ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಸ್ಪರ್ಧಿಸಿದ್ದಾರೆ. ಇವರಿಗೆ ವಿರುದ್ಧವಾಗಿ ರಿಪಬ್ಲಿಕನ್ ಪಕ್ಷದಿಂದ ಮೈಕ್ ಪೆನ್ಸ್‌ ಸ್ಪರ್ಧೆಯೊಡ್ಡಿದ್ದಾರೆ.

ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭಾರತೀಯ ಮೂಲದಾಕೆಯಾದರೂ, ಈಕೆಯ ಪ್ರಚಾರದ ಪೋಸ್ಟರ್ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ. ಕಮಲ ಹ್ಯಾರಿಸ್‌ರ ಸೋದರ ಸಂಬಂಧಿಯೊಬ್ಬರು, ಈಕೆಯನ್ನು ದುರ್ಗಾಮಾತೆಯ ರೂಪದಲ್ಲಿ ಚಿತ್ರಿಸಲಾದ ಚಿತ್ರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಹಿಂದೂ ಸಂಘಟನೆಗಳು ಆಕ್ರೋಶಗೊಂಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮೂಲದವರು ನಿರ್ಣಾಯಕವಾಗಿರುವ ಚುನಾವಣೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿರುವುದು ವಿಷಾದ ನೀಯ.