Wednesday, 30th October 2024

ಸಂಕಷ್ಟ ಸೂತ್ರವೊಂದೇ ಪರಿಹಾರ

ಕಳೆದ ವರ್ಷವಿಡೀ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ತಮಿಳುನಾಡು ಈ ಬಾರಿ ಮುಂಗಾರು ಆರಂಭ ದಲ್ಲಿಯೇ ತನ್ನ ಪಾಲಿನ ನೀರಿಗಾಗಿ ಕ್ಯಾತೆ ತೆಗೆದಿದೆ. ತಮಿಳುನಾಡಿನ ಒತ್ತಡ ತಂತ್ರದ -ಲವಾಗಿ ಕಳೆದ ವರ್ಷ ಕಾವೇರಿ ಕೊಳ್ಳದ ನಮ್ಮ ರೈತರ ಹಿತಾಸಕ್ತಿ ಯನ್ನು ಬಲಿಗೊಟ್ಟು ನೀರು ಬಿಡಲೇಬೇಕಾಯಿತು. ಮೂರು ಬೆಳೆಯ ಕನಸು ಕಂಡಿದ್ದ ಮೈಸೂರು, ಮಂಡ್ಯ ಭಾಗದ ರೈತರು ಎರಡು ಬೆಳೆಯನ್ನೂ ಸರಿಯಾಗಿ ಬೆಳೆಯಲಾಗಲಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಆಶಾದಾಯಕವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದೆ. ಆದರೆ ಈ ತನಕ ರಾಜ್ಯದ ಯಾವ ಜಲಾಶಯವೂ ಪೂರ್ತಿಯಾಗಿ ತುಂಬಿಲ್ಲ. ಕಾವೇರಿ ಜಲಾಯನ ಪ್ರದೇಶದಲ್ಲಿ ಕೆಆರ್‌ಎಸ್ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟ ಇನ್ನೂ ಅರ್ಧದಷ್ಟಿದೆ. ಈ ವರ್ಷ ಜುಲೈ ನಂತರ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ರಾಜ್ಯದ ಪಾಲಿಗೆ ಆತಂಕ ತಂದೊಡ್ಡಿದೆ.

ರೈತರ ಬೆಳೆ, ಕುಡಿಯುವ ನೀರು, ಕೈಗಾರಿಕೆ ಉದ್ದೇಶ ಸೇರಿ ಕಾವೇರಿ ಆಶ್ರಿತ ಜಿಲ್ಲೆಗಳಿಗೆ ವಾರ್ಷಿಕ ಒಟ್ಟು ೧೦೬ ಟಿಎಂಸಿ ನೀರು ಅಗತ್ಯವಿದೆ. ಆದರೆ ನಮ್ಮ ಬಳಿ ಸದ್ಯ ಇರುವುದು ಕೇವಲ ೬೦ ಟಿಎಂಸಿ ನೀರು. ಇದರ ನಡುವೆಯೇ ರೈತರ ಮುಂಗಾರು ಬೆಳೆಗಳಿಗೆ ಮತ್ತು ಕುಡಿಯುವ ನೀರಿನ ಅವಶ್ಯಕತೆಗಳಿಗೆ ನೀರು ಬಿಡಬೇಕಾಗಿದೆ. ತಮಿಳುನಾಡಿಗೆ ಆರಂಭದಲ್ಲಿಯೇ ೨೦ ಟಿಎಂಸಿ ನೀರನ್ನು ಬಿಟ್ಟರೆ ನಮ್ಮ ರೈತರ ಬೆಳೆಗಳಿಗೆ ನೀರು ಸಿಗುವುದು ಕಷ್ಟ. ಸದ್ಯ ತಮಿಳು ನಾಡಿನ ಮೆಟ್ಟೂರು, ಭವಾನಿ ಜಲಾಶಯಗಳಲ್ಲಿ ೨೫ ಟಿಎಂಸಿ ನೀರಿದ್ದು ಆ ರಾಜ್ಯಕ್ಕೆ ನೀರಿನ ತುರ್ತು ಇಲ್ಲ.

ಆದರೆ ತನ್ನ ಪಾಲಿನ ನೀರನ್ನು ಆಯಾ ತಿಂಗಳು ಪಡೆದೇ ತೀರಬೇಕೆಂಬ ಹಠ ತಮಿಳುನಾಡಿನ ನಾಯಕರದ್ದು. ಬರ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳು ಸಂಕಷ್ಟ ಸೂತ್ರದ ಪ್ರಕಾರ ನೀರನ್ನು ಹಂಚಿಕೊಳ್ಳಬೇಕೆಂದು ಅಂತಿಮ ತೀರ್ಪಿನಲ್ಲಿ ತಿಳಿಸಿರುವ ಸುಪ್ರೀಂ ಕೋರ್ಟ್ ತಾನೇ ಈ ಕೆಲಸ ಮಾಡಿದ್ದರೆ ರಾಜ್ಯದ ಭಾರ ಕಡಿಮೆಯಾಗಿರುತ್ತಿತ್ತು. ಇದೀಗ ಕಾವೇರಿ ನೀರು ನಿಯಂತ್ರಣ ಸಮಿತಿ ಇಲ್ಲವೇ ಕೇಂದ್ರ ಸರಕಾರದ ಈ ಜವಾಬ್ದಾರಿ ನಿರ್ವಹಿಸಬೇಕಿದೆ. ರಾಜ್ಯ ಸರಕಾರ ಈ ಸಂಬಂಧ ಒತ್ತಡ ಹೇರುವ ಕೆಲಸ ಮಾಡಬೇಕು. ತಮಿಳುನಾಡಿನ ಒತ್ತಡ ತಂತ್ರಕ್ಕೆ ಬಲಿಯಾಗಬಾರದು.