Monday, 16th September 2024

ಮನು ಭಾಕರ್ ಯುವ ಜನತೆಗೆ ಸ್ಪೂರ್ತಿ

ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಅದ್ಭುತ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಮನು ಭಾಕರ್ ರಾತ್ರೋರಾತ್ರಿ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳ ಕ್ರೀಡಾತಾರೆ ಯಾಗಿದ್ದಾರೆ. ಕ್ರೀಡೆಯಲ್ಲಾಗಲಿ ಇತರ ಯಾವುದೇ ಕ್ಷೇತ್ರದಲ್ಲಾಗಲಿ ಗೆಲುವಿಗಷ್ಟೇ ಮಾನ್ಯತೆ. ಆದರೆ ಮನು ಭಾಕರ್ ಒಲಿಂಪಿಕ್ಸ್ ಪದಕ ಗೆದ್ದ ಒಂದೇ ಕಾರಣಕ್ಕೆ ಭಾರತೀಯರಿಗೆ ಸ್ಪೂರ್ತಿ ಯಾಗಿಲ್ಲ.

ಜೀವನದಲ್ಲಿ ಸ್ಪಷ್ಟ ಗುರಿ, ಸಾಧಿಸುವ ಹಂಬಲ ಮತ್ತು ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಮನು ಭಾಕರ್ ಉದಾಹರಣೆ ಯಾಗಿದ್ದಾರೆ. ಕ್ರೀಡೆ ಹೊರತಾಗಿಯೂ ದೇಶದ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಭಾಕರ್, ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಟೆನಿಸ್, ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ನಂತರ ‘ತಂಗ್ ಟಾ’ ಎಂಬ ಪ್ರಾಚೀನ ಮಣಿಪುರಿ ಸಮರ ಕಲೆ ಕಲಿತು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರು.

ತನ್ನ ೧೪ನೇ ವಯಸ್ಸಿನಲ್ಲಿ ಶೂಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರಿಗೆ ತಂದೆ ರಾಮಕಿಶನ್ ಭಾಕರ್ ಆಸರೆಯಾಗಿ ನಿಂತರು. ಕೇವಲ ಎರಡೇ ವರ್ಷ ಗಳಲ್ಲಿ ತಮ್ಮ ೧೬ನೇ ವಯಸ್ಸಿಗೆ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ೯ ಚಿನ್ನದ ಪದಕ, ೨ ಬೆಳ್ಳಿ ಮತ್ತು ೨ ಕಂಚು ಗೆದ್ದು ವಿಶ್ವದಾಖಲೆ ಬರೆದರು. ೨೦೧೭ರ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ನಂ.೧ ಆಟಗಾರ್ತಿ ಹೀನಾ ಸಿಧು ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದರು.

೨೦೧೮ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ ಕ್ರೀಡಾಕೂಟದಲ್ಲಿ ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ
ಗೆದ್ದು ಸಂಭ್ರಮಿಸಿದ್ದರು. ಎಲ್ಲವೂ ಸರಿ ಹೋಗಿದ್ದರೆ ೨೦೨೦ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೇ ಮನು ಭಾಕರ್ ಪದಕ ಗೆಲ್ಲಬೇಕಿತ್ತು. ೧೦ ಮೀಟರ್
ಏರ್ ಪಿಸ್ತೂಲ್ ಅರ್ಹತಾ ಪಂದ್ಯದಲ್ಲಿ ಅಗ್ರಸ್ಥಾನಿಯಾದರೂ ನಡುವೆ ಪಿಸ್ತೂಲ್ ಕೈಕೊಟ್ಟಿದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.
ಆಗ ಬೇಸರಗೊಂಡು ಕ್ರೀಡೆಯನ್ನು ತೊರೆದು ವಯೋಲಿನ್ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಕೋಚ್ ಜಸ್ಪಾಲ್ ರಾಣಾ ಅವರ ಒತ್ತಾಯದ
ಮೇರೆಗೆ ಮರಳಿ ಶೂಟಿಂಗ್ ಕಣಕ್ಕಿಳಿದು ಇದೀಗ ಪದಕಕ್ಕೆ ಗುರಿ ಇಟ್ಟಿದ್ದಾರೆ.

ತಮ್ಮ ಸಾಧನೆಗೆ ಗೀತೆಯ ಅಧ್ಯಯನ ನೆರವಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಮನುಭಾಕರ್ ಅವರ ಈ ಸಾಧನೆಯ ಹಿಂದೆ ಹರಿಯಾಣ ಸರಕಾರದ
ಪ್ರೋತ್ಸಾಹವನ್ನೂ ನೆನಪಿಸಿಕೊಳ್ಳಬೇಕು. ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಹರಿಯಾಣದ ಕಲಿಗಳೇ ಹೆಚ್ಚಿದ್ದಾರೆ. ಎಲ್ಲ ರಾಜ್ಯ ಸರಕಾರಗಳು ಕ್ರೀಡೆಗೆ ಆದ್ಯತೆ ನೀಡಿದರೆ ಭಾರತ ಮುಂದಿನ ವಿಶ್ವಕಪ್ ವೇಳೆಗೆ ಇನ್ನಷ್ಟೂ ಪದಕ ಗೆಲ್ಲವುದು ಅಸಾಧ್ಯವೇನಲ್ಲ.

Leave a Reply

Your email address will not be published. Required fields are marked *