Monday, 16th September 2024

ರಾಷ್ಟ್ರಿಯ ಸ್ಥಾನಮಾನ: ನೀರಾವರಿ ಭದ್ರ

ರಾಜ್ಯದ ಮಹತ್ವದ ಯೋಜನೆಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯೂ ಒಂದು. ಮಹತ್ವದ ಯೋಜನೆ ಮಾತ್ರವಲ್ಲ ರಾಜ್ಯದ ಪಾಲಿನ ಬಹುದೊಡ್ಡ ನೀರಾವರಿ ಯೋಜನೆಯಿದು. ಮಧ್ಯ ಕರ್ನಾಟಕದ ಪಾಲಿಗೆ ಬಹುಮುಖ್ಯವಾದ ಈ ಯೋಜನೆ ವಿಳಂಬದ ಕಾರಣದಿಂದಾಗಿ ರೈತರ ಅಸಮಾಧಾನಕ್ಕೂ ಕಾರಣ ವಾಗಿತ್ತು.

ಇದೀಗ ಕೇಂದ್ರದಿಂದ ಸಂತಸದ ಸುದ್ದಿಯೊಂದು ಲಭ್ಯವಾಗಿದ್ದು, ವಿಳಂಬಕ್ಕೆ ಅಡ್ಡಿಯಾಗಿದ್ದ ಆತಂಕ ನಿವಾರಣೆ ಆದಂತಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ – ದಾವಣಗೆರೆ – ತುಮಕೂರು – ಚಿಕ್ಕಮಗಳೂರು ಜಿಲ್ಲೆಗಳಿಗೆ ಅನುಕೂಲ ವಾಗಲಿದೆ. ಭದ್ರಾ ಜಲಾಶಯದಿಂದ ಬಯಲುಸೀಮೆಯ ಚಿತ್ರದುರ್ಗ ಭಾಗಕ್ಕೆ ನೀರು ಹರಿಸಬೇಕೆಂಬ ಕೂಗು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕಾಲದಿಂದಲೂ ಕೇಳಿಬರುತ್ತಿತ್ತು.

ಆದರೆ 2008ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.60:40 ಅನುಪಾತದಲ್ಲಿ
ತಯಾರಿಸಲಾಗಿತ್ತು. ರಾಜ್ಯದ ಮೊದಲ ರಾಷ್ಟ್ರೀಯ ಯೋಜನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು 21,473 ಕೋಟಿಗೆ ಇದೀಗ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಿದೆ. ಇದರಿಂದ ಯೋಜನೆಯ ವಿಳಂಬಕ್ಕಿದ್ದ ತೊಡಕು ನಿವಾರಣೆ ಆದಂತಾಗಿದೆ. ಯೋಜನೆ ಅನುಷ್ಠಾನಕ್ಕೆ ವೇಗ ದೊರೆಯಲಿದೆ. ಮುಂದಿನ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತವಾಗುತ್ತಿದೆ.

ಬರಪೀಡಿತ ಜಿಲ್ಲೆಗಳ ಒಟ್ಟಾರೆ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ಬರಪೀಡಿತ ತಾಲೂಕುಗಳ 367 ಕೆರೆಗಳಿಗೆ ನೀರನ್ನು ತುಂಬಿಸಲು ಈ ಯೋಜನೆ ಪರಿಣಾಮಕಾರಿಯಾಗಿದೆ.

Leave a Reply

Your email address will not be published. Required fields are marked *