Monday, 16th September 2024

ಉದ್ಧಟತನ

ಮಹಾರಾಷ್ಟ್ರದ ಗಡಿ ವಿಚಾರದಲ್ಲಿ ಅಗಾಗ್ಗೆ ಸಂಭವಿಸುತ್ತಿರುವ ವಿವಾದಗಳು ಎರಡು ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ತೊಡಕಾಗಿ ಪರಿಣಮಿಸಿದೆ.

ಗಡಿ ಸಮಸ್ಯೆ ಎರಡು ರಾಜ್ಯಗಳ ನಡುವಣ ಸಮಸ್ಯೆಯಾದರೂ, ಕನ್ನಡಿಗರು ಮತ್ತು ಮರಾಠಿಗರ ನಡುವಿನ ಅಶಾಂತಿಗೆ ಪ್ರಮುಖ ಕಾರಣವಾಗಿದೆ. ಗಡಿ ವಿವಾದವನ್ನೇ ರಾಜಕೀಯ ಅಸವನ್ನಾಗಿಸಿಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಗಡಿ ಭಾಗದ ಜನರ ಅಶಾಂತಿಗೆ ಕಾರಣವಾಗಿದ್ದಾರೆ.

ಗಡಿ ಸಮಸ್ಯೆಗಳನ್ನು ಶಾಸನ ಬದ್ಧ ಹಾಗೂ ಕಾನೂನು ಬದ್ಧವಾಗಿ ಇತ್ಯರ್ಥಪಡಿಸಿಕೊಳ್ಳಬೇಕಿರುವ ಸಂಗತಿಯಾಗಿರುವುದರಿಂದ ವಿವಾದಗಳು ಅನಗತ್ಯ. ಇಂಥ ಸಂದರ್ಭದಲ್ಲಿ ಉದ್ಧವ್ ಠಾಕ್ರೆಯ ಉದ್ಧಟತನದ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗಲೂ ಸಹ ರಾಜ್ಯದ ನಾಯಕರು ಜವಾಬ್ದಾರಿಯಿಂದ ವರ್ತಿಸಬೇಕಿರುವುದು ಅಗತ್ಯ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಶಾಂತಿ ಹಾಗೂ ವಿವಾದವನ್ನು ಬಗೆಹರಿಸಬೇಕಿರುವ ನಾಯಕರು ಠಾಕ್ರೆ ರೀತಿಯಲ್ಲಿಯೇ ಪ್ರತಿಕ್ರಿಯಿಸುವುದು ಪ್ರಚಾರದ ಹೇಳಿಕೆಯಾಗಿ ರಾಜ್ಯಕ್ಕೆ ಅಪಮಾನವಾಗುತ್ತದೆ.

ಇತ್ತೀಚೆಗೆ ಉದ್ಧವ್ ಠಾಕ್ರೆ ನೀಡಿರುವ ಮರಾಠಿ ಮಾತಾನಾಡುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹೇಳಿಕೆಗೆ ಎಷ್ಟು ಅಸಮಂಜಸವೋ ಅದೇ ರೀತಿ ರಾಜ್ಯದ ನಾಯಕರಿಂದಲೂ ಬಾಲಿಶ ಹೇಳಿಕೆಗಳು ಕೇಳಿಬರಲಾರಂಭಿಸಿವೆ. ಪ್ರಸ್ತುತ ಸಂದರ್ಭದಲ್ಲಿ
ಮಹಾರಾಷ್ಟ್ರ ರಾಜಧಾನಿ ಮುಂಬೈಯನ್ನು ಕರ್ನಾಟಕ್ಕೆ ಸೇರಿಸಬೇಕೆಂಬ ಹೇಳಿಕೆಯೂ ಸರಿಯಲ್ಲ. ಇಂಥ ಹೇಳಿಕೆಗಳ ಬದಲಾಗಿ ಉದ್ಧವ್ ಠಾಕ್ರೆ ಸೃಷ್ಟಿಸುತ್ತಿರುವ ಹೇಳಿಕೆಗಳಿಗೆ ಕಾನೂನಾತ್ಮಕವಾಗಿ ತಕ್ಕ ಉತ್ತರ ನೀಡಬೇಕಾಗಿ ರುವುದು ಇಂದಿನ ಅನಿವಾರ್ಯತೆ.

ಗಡಿ ವಿವಾದವನ್ನೇ ಬಹುಮುಖ್ಯ ರಾಜಕೀಯ ನಿಲುವಾಗಿಸಿಕೊಂಡಿರುವ ಉದ್ಧವ್ ಠಾಕ್ರೆಯ ಉದ್ಧಟತನದ ಹೇಳಿಕೆಗಳಿಗೆ ಪ್ರತಿ ಕ್ರಿಯಿಸುವುದಕ್ಕಿಂತಲೂ ಕಾನೂನಾತ್ಮಕ ವಾಗಿ ತಕ್ಕ ಉತ್ತರ ನೀಡಬೇಕಿರುವುದು ರಾಜ್ಯ ನಾಯಕರ ಮಹತ್ತರವಾದ  ಜವಾಬ್ದಾರಿ.

Leave a Reply

Your email address will not be published. Required fields are marked *