Monday, 16th September 2024

ಒಲಿಂಪಿಕ್ಸ್ ಸಾಧನೆಗೆ ಸಜ್ಜಾಗೋಣ

೨೦೨೪ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿಯಾಗಿ ವಿದಾಯ ಹೇಳಲಾಗಿದೆ. ಸುಮಾರು ಮೂರು ವಾರಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ೧೦ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಸುಮಾರು ಸಾವಿರದಷ್ಟು ಪದಕಗಳನ್ನು ಪಡೆದಿದ್ದಾರೆ.

೧೨೬ ಪದಕ ಗೆದ್ದ ಅಮೆರಿಕ, ೪೦ ಚಿನ್ನದ ಪದಕಗಳ ಸಹಿತ ೯೧ ಪದಕ ಗಳಿಸಿದ ಚೀನಾ, ೨೦ ಚಿನ್ನದ ಪದಕಗಳ ಸಹಿತ ೪೫ ಪದಕ ಪಡೆದ ಜಪಾನ್ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಆದರೆ ೧೪೦ ಕೋಟಿ ಜನಸಂಖ್ಯೆಯ ಭಾರತ ಒಂದು ಬೆಳ್ಳಿ ಮತ್ತು ೫ ಕಂಚಿನ ಪದಕಗಳೊಂದಿಗೆ ೭೧ನೇ ಸ್ಥಾನ ಪಡೆದುಕೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ೧ ಚಿನ್ನ ಸೇರಿದಂತೆ ಒಟ್ಟು ೭ ಪದಕಗಳೊಂದಿಗೆ ಭಾರತ ೪೮ನೇ ಸ್ಥಾನ ಪಡೆದುಕೊಂಡಿತ್ತು. ಈ ದೃಷ್ಟಿ ಯಿಂದ ನೋಡಿದರೆ ಭಾರತ ಸಾಧನೆ ಕುಸಿದಿದೆ. ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾರತದ ಸುಮಾರು ೧೦ ಮಂದಿ ಕ್ರೀಡಾಪಟುಗಳು ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾಗಿರುವುದು ಗಮನಾರ್ಹ.

ವಿನೇಶ್ ಪೋಗಟ್ ತೂಕದ ಕಾರಣಕ್ಕಾಗಿ ಚಿನ್ನ ಇಲ್ಲವೇ ಬೆಳ್ಳಿ ಖಚಿತವಾಗಿದ್ದ ಪಂದ್ಯದಿಂದ ಹೊರಬೀಳಬೇಕಾಯಿತು. ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಶಾಂತ್ ದೇವ್ ಉತ್ತಮ ಪ್ರದರ್ಶನ ತೋರಿದರೂ ವಿವಾದಾತ್ಮಕ ತೀರ್ಪಿಗೆ ಬಲಿಯಾಗ ಬೇಕಾಯಿತು. ಶೂಟಿಂಗ್‌ನಲ್ಲಿ ಅರ್ಜುನ್ ಬಬೂಟಾ, ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್, ವೆಯ್ಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ೨೫ ಮೀಟರ್ ಏರ್ ರೈಫಲ್‌ನಲ್ಲಿ ಮನುಭಾಕರ್, ಶೂಟಿಂಗ್‌ನ ಮತ್ತೊಂದು ಸ್ಪರ್ಧೆಯಲ್ಲಿ ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೋಡಿ, ಮಿಶ್ರ ಆರ್ಚರಿಯಲ್ಲಿ ಧೀರಜ್-ಅಂಕಿತಾ ಜೋಡಿ, ಆರ್ಚರಿ ಯಲ್ಲಿ ದೀಪಿಕಾ ಕುಮಾರಿ ಪದಕದ ಸನಿಹಕ್ಕೆ ಬಂದು ಎಡವಿದ್ದಾರೆ.

ಇವರೂ ಕನಿಷ್ಠ ಕಂಚಿನ ಪದಕಕ್ಕೆ ಕೊರಳೊಡ್ಡುವಂತಾಗಿದ್ದರೆ ಭಾರತ ೨೫ರೊಳಗಿನ ಗೌರವಾರ್ಹ ಸ್ಥಾನ ಪಡೆಯಲು ಸಾಧ್ಯವಿತ್ತು. ೨೦೪೭ರ ಹೊತ್ತಿಗೆ ಒಲಿಂಪಿಕ್ಸ್ ಕೂಟ ಸಂಘಟಿಸುವ ಕನಸು ಕಾಣುತ್ತಿರುವ ನಾವು ಇದಕ್ಕೆ ಮುನ್ನ ಈ ಕ್ರೀಡಾಕೂಟದಲ್ಲಿ ಕನಿಷ್ಠ ೧೦ರೊಳಗಿನ ಸ್ಥಾನವನ್ನಾದರೂ ಪಡೆಯ ಬೇಕಾಗಿದೆ. ನಮ್ಮ ಮಕ್ಕಳ ಶಿಕ್ಷಣದಲ್ಲಿ ಕ್ರೀಡೆಗೆ ಆದ್ಯತೆ ಸಿಗದ ಹೊರತು ಇದು ಸಾಧ್ಯವಿಲ್ಲ. ಅಮೆರಿಕ, ಚೀನಾದಂತಹ ರಾಷ್ಟ್ರಗಳು ಈಜು ಸ್ಪರ್ಧೆಯೊಂದ ರಲ್ಲಿಯೇ ಹತ್ತಾರು ಪದಕಗಳನ್ನು ಕೊಳ್ಳೆ ಹೊಡೆದಿವೆ.

ನಮ್ಮಲ್ಲಿ ಈಜು ಕೂಡ ಶ್ರೀಮಂತರ ಕ್ರೀಡೆಯಾಗಿದೆ. ಈಜು ಕಲಿಕೆ ನಗರಗಳಿಗಷ್ಟೇ ಸೀಮಿತವಾಗಿದೆ. ಆಳೆತ್ತರದ ಸಮುದ್ರದ ಅಲೆಗಳನ್ನು ಎದು ರಿಸಿ ಗಂಟೆ
ಗಟ್ಟಲೆ ಈಜುವ ನಮ್ಮ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ತರ ಬೇತಿ ನೀಡಿದರೆ ವಿಶ್ವಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಬಹುದು. ನಮ್ಮ ಪ್ರತೀ
ಜಿಲ್ಲೆಯಿಂದ ಒಬ್ಬ ಕ್ರೀಡಾಪಟುವನ್ನು ತಯಾರು ಮಾಡಿದರೂ ೮೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆಗೆ ಪೈಪೋಟಿ ನಡೆಸುವಂತಾ
ಗುತ್ತದೆ. ಈ ನಿಟ್ಟಿನಲ್ಲಿ ಮೂಲಸೌಕರ‍್ಯ ಕಲ್ಪಿಸುವ ಕೆಲಸ ತಕ್ಷಣವೇ ಆಗಬೇಕು.

Leave a Reply

Your email address will not be published. Required fields are marked *