Monday, 16th September 2024

ಭಾರತ ಸಶಕ್ತ

ಸಶಕ್ತ ಭಾರತದ ಮಹತ್ವದ ಕನಸು ಕಂಡಿದ್ದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರಮುಖರು. ಅವರ ೧೨೫ನೇ ಜನ್ಮ ದಿನದ ಸಂದರ್ಭದಲ್ಲಿ ಈ ಆಶಯ ಈಡೇರಿದೆ ಎಂದೆನಿಸುತ್ತದೆ.

ಕರೋನಾ ವಿಚಾರದಲ್ಲಿ ಭಾರತ ಅನ್ಯರಾಷ್ಟ್ರಗಳಿಗೆ ನೆರವಾಗುವ ವಿಚಾರದಲ್ಲಿ ಸಶಕ್ತ ರಾಷ್ಟ್ರವಾಗಿದೆ. ಇಂದು ನೇತಾಜಿ ಇದ್ದಿದ್ದರೆ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು ಎಂಬುದನ್ನು ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದಾರೆ. ವಿಶ್ವದಲ್ಲಿ ೨೧,೧೮,೪೧೮ ಜನರನ್ನು ಬಲಿ ತೆಗೆದುಕೊಂಡ ಕರೋನಾ ಸೋಂಕು, ಭಾರತದಲ್ಲಿ ೧,೫೩,೧೮೪ ಜನರನ್ನು ಬಲಿತೆಗೆದುಕೊಂಡಿತು.

ಅನೇಕ ರಾಷ್ಟ್ರಗಳು ಲಸಿಕೆಯ ಪ್ರಯತ್ನದಲ್ಲಿರುವಾಗಲೇ ಭಾರತ ಎರಡು ಪರಿಣಾಮಕಾರಿ ಲಸಿಕೆಗಳನ್ನು ಬಿಡುಗಡೆಗೊಳಿಸಿ ಗಮನ ಸೆಳೆಯಿತು. ಇದೀಗ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ಲಸಿಕಾ ಸಂಸ್ಥೆಗಳು ಲಾಭಗಳಿಸುವ ಧಾವಂತದಲ್ಲಿ ಬಡದೇಶಗಳನ್ನು ಕಡೆಗಣಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ವೇಳೆಯಲ್ಲಿ ಅನೇಕ ರಾಷ್ಟ್ರಗಳಿಗೆ ನೆರವಾಗುವ ಪ್ರಯತ್ನದಲ್ಲಿದೆ.

ದೇಶಿಗರಷ್ಟೇ ಅಲ್ಲದೇ ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ಮಾಲ್ಡೀವ್ಸ್, ಸಿಶೆಲ್ಸ್ ದೇಶಗಳಿಗೆ ಲಸಿಕೆಗಳನ್ನು ಪೂರೈಸಲಾಗಿದೆ. ಶ್ರೀಲಂಕ, ಅಫಘಾನಿಸ್ತಾನ, ಮಾರಿಷಸ್‌ಗಳಿಗೆ ರವಾನಿಸಲು ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಈ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತ ಇದೀಗ ವಿಶ್ವದಲ್ಲಿಯೇ ಸಶಕ್ತ ರಾಷ್ಟ್ರವಾಗಿ ಮಹತ್ವ ಪಡೆದಿದೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿ.

Leave a Reply

Your email address will not be published. Required fields are marked *