Monday, 16th September 2024

ಹಿಂದಿ ಹೇರಿಕೆ; ಮತ್ತದೇ ಹೇವರಿಕೆ

ಉತ್ತರದ ಅನೇಕ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ ಆಗಿರುವುದರಿಂದ ಅದೊಂದು ಪ್ರಬಲ ಮತ್ತು ಪ್ರಭಾವಿ ಭಾಷೆಯಾಗಿ ಬೆಳೆದಿದೆ. ಅಲ್ಲಿಯರೇ ಪ್ರಮುಖ ಅಧಿಕಾರ ಸ್ಥಾನದಲ್ಲಿರುವು ದರಿಂದ ಹಿಂದಿಗೆ ವಿಶೇಷ ಮಾನ ಮರ್ಯಾದೆ ಸಿಕ್ಕಿದೆ. ಆದರೆ ಅದನ್ನು ಇತರರರ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂಬ ಭಾವನೆ ಪ್ರಬಲವಾಗುತ್ತಿದೆ.

ಕಾಲಕಾಲಕ್ಕೆ ಆ ರೀತಿಯ ಧೋರಣೆಗಳು, ವರ್ತನೆಗಳು ಪ್ರಕಟ ಮತ್ತು ಪ್ರದರ್ಶನವಾಗುತ್ತಿರು ವುದೂ ಹೌದು. ಹಿಂದಿ ರಾಜ ಭಾಷೆ, ರಾಷ್ಟ್ರಭಾಷೆ ಎಂಬಂತೆ ಬಿಂಬಿಸಲಾಗುತ್ತದೆ. ಹಿಂದಿ ದಿವಸ್ ಆಚರಿಸಲಾಗುತ್ತಿದೆ. ಇದು ಬಹಳ ಸಮಯದಿಂದ ನಡೆದುಕೊಂಡು ಬರುತ್ತಿದ್ದರೂ ಹೇಗೋ ಸಹಿಸಿಕೊಂಡು ಹೋಗುತ್ತಿದ್ದರು. ಆದರೆ ಸ್ವಾಭಿಮಾನ, ಭಾಷಾಭಿಮಾನ ಮತ್ತು ಹಿಂದಿಯವರ ದುರಭಿಮಾನ ಹೆಚ್ಚಾದಂತೆ ಹಿಂದಿ ವಿರೋಧವೂ ಹೆಚ್ಚಾಗತೊಡಗಿದೆ. ಇದಕ್ಕೆ ಕಾರಣವೂ ಇದೆ.

ಸರಕಾರಿ ಕಚೇರಿಗಳಲ್ಲಿ ವಿಶೇಷವಾಗಿ ಬ್ಯಾಂಕ್ ‌ಗಳಲ್ಲಿ ಹಿಂದಿಭಾಷಿಕ ಸಿಬ್ಬಂದಿ ಹೆಚ್ಚಾಗುತ್ತಿದ್ದು ಗ್ರಾಹಕರು ಪರದಾಡುವಂತಾ ಗಿದೆ. ಈ ಸಂಬಂಧ ಆಗಾಗ ಜಗಳ ನಡೆಯುವುದೂ ಉಂಟು. ಈ ಸಮಸ್ಯೆ ಬಗೆಹರಿಸಲು ಬ್ಯಾಂಕ್ ನೇಮಕದಲ್ಲಿ ಕೇಡರ್ ಸ್ಥಾಪಿಸು ವುದಾಗಿ ಹಣಕಾಸು ಸಚಿವರು ತಿಳಿಸಿದ್ದಾರೆ. ಆದರೆ ಅದರ ಜಾರಿ ಯಾವಾಗಲೋ ಯಾರಿಗೆ ಗೊತ್ತು? ಮೆಟ್ರೋ ರೈಲು, ಸಾರ್ವ ಜನಿಕ ಸ್ವಾಮ್ಯದ ಸಂಸ್ಥೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಕನ್ನಡ ಅಥವಾ ಪ್ರಾದೇಶಿಕ ಭಾಷೆಗಾಗಿ ಮೇಲಿಂದ ಮೇಲೆ ತಗಾದೆ ಮಾಡಬೇಕು. ರೈಲ್ವೆ ನೇಮಕ ಮಂಡಳಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆೆಗಳಿರಲಿ ಎಂಬ ಬೇಡಿಕೆಗೆ ಬೆಲೆ ಸಿಗುತ್ತಿಲ್ಲ.

ನಿನ್ನೆ ನಡೆದ ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆಯಲ್ಲೂ ಮತ್ತದೇ ಎಡವಟ್ಟು ಆಗಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇದೆ. ಇದು ಕನ್ನಡಿಗರ ಆಕ್ರೋಶಕ್ಕೆ ವ್ಯಕ್ತವಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ಕೇಳಿಬಂದಿದೆ. ಹಾಗೆಯೇ ಹಿಂದಿ ವಿಚಾರವಾಗಿ ತಮಿಳುನಾಡಿನಲ್ಲಿ ಮತ್ತೊಮ್ಮೆ ವಿವಾಧ ಭುಗಿಲೆದ್ದಿದೆ.

ಟಿಕೆಟ್ ಬುಕ್ ಆದ ಬಗ್ಗೆ ಕಳಿಸಲಾಗುವ ಸಂದೇಶಗಳು ಹಿಂದಿಯಲ್ಲಿರುವುದಕ್ಕೆ ಅಲ್ಲಿನ ಡಿಎಂಕೆ ಮತ್ತಿತರ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದು ಹಿಂದಿಹೇರಿಕೆಯ ಮತ್ತೊಂದು ಹುನ್ನಾರ ಎಂದಿವೆ. ಇದು ಐಆರ್‌ಸಿಟಿಸಿಯ ಕೆಲಸ, ಆದ್ದರಿಂದ ತನಗೆ ಸಂಬಂಧವಿಲ್ಲ ಎಂಬಂತೆ ರೈಲ್ವೆ ಇಲಾಖೆ ಮಾತನಾಡಿದೆ. ಆದರೆ ಈ ರೀತಿ ಅದು ಕೈತೊಳೆದುಕೊಳ್ಳುವಂತಿಲ್ಲ. ಹೀಗೆ ಪ್ರತಿ ಹಂತದಲ್ಲೂಹಿಂದಿಯೇತರರಿಗೆ ತಮ್ಮ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಭಾವನೆ ಬರುವಂಥ ಘಟನೆಗಳು ಪದೇ ಪದೆ ನಡೆಯುತ್ತಿದ್ದರೆ ಸಂಶಯ ಬರುವುದು ಸಹಜ. ಭಾರತವು ಒಕ್ಕೂಟ ವ್ಯವಸ್ಥೆಯುಳ್ಳ ದೇಶ.

ಇಲ್ಲಿ ಒಂದೇ ಒಂದು ಅಧಿಕೃತ ಭಾಷೆ ಎಂಬುದಿಲ್ಲ. ಹಿಂದಿ ಕೂಡ ಇತರ ಅನೇಕ ಭಾಷೆಗಳಂತೆ ಒಂದು ಅಧಿಕೃತ ಭಾಷೆ. ಇದೆಲ್ಲ ಸುಸ್ಪಷ್ಟವಾಗಿದ್ದರೂ ಕಾಲಕಾಲಕ್ಕೆ ಹಿಂದಿ ಹೇರಿಕೆ ಆದಾಗ ಇತರರು ಕೆರಳುವಂತಾಗುತ್ತದೆ. ಇದಕ್ಕೆ ಅವಕಾಶ ಕೊಡದೆ ಕೇಂದ್ರ
ಸರಕಾರವು ನಡೆದುಕೊಳ್ಳಬೇಕು.

Leave a Reply

Your email address will not be published. Required fields are marked *