Monday, 16th September 2024

ನಿಷೇಧ ಸರಿ, ಮುಂದೆ ?

ಕೇಂದ್ರ ಸರಕಾರವು ಚೀನದ ಮತ್ತೆ 118 ಆನ್ ಲೈನ್ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಮೊದಲು ಇಂಥ 58 ಆ್ಯಪ್‌ಗಳಿಗೆ ನಿರ್ಬಂಧ
ಹೇರಿತ್ತು. ಮೊದಲ ಕಂತಿನಲ್ಲಿ ನಿಷೇಧಿಸಲಾದ ಆ್ಯಪ್‌ಗಳಲ್ಲಿ ಟಿಕ್ ಟಾಕ್ ಪ್ರಮುಖವಾಗಿತ್ತು. ಈ ಸುತ್ತಿನಲ್ಲಿ ಪಬ್ ಜಿ ಮತ್ತು ಲುಡೊ ಮುಖ್ಯವಾದವುಗಳಾಗಿವೆ.

ಅಲ್ಲಿಗೆ ಈವರೆಗೆ 176 ಚೀನೀ ಆ್ಯಪ್‌ಗಳನ್ನು ಭಾರತದ ಬ್ಯಾನ್ ಮಾಡಿದ ಹಾಗಾಗಿದೆ. ಆದರೆ ಇವುಗಳಲ್ಲಿ ಗಮನ ಸೆಳೆದವು ಎಂದರೆ ಟಿಕ್ ಟಾಕ್ ಮತ್ತು ಪಬ್ ಜಿ. ಟಿಕ್ ಟಾಕ್ ಹೊಸಪೀಳಿಗೆಯ ಜನರ ಜೀವನದಲ್ಲಿ ಅದೆಷ್ಟು ಹಾಸುಹೊಕ್ಕಾಗಿತ್ತು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಆ್ಯಪ್ ಮೂಲಕ ಚಿಕ್ಕ ಚಿಕ್ಕ ವಿಡಿಯೊಗಳನ್ನು ಮಾಡಿ ಕಳಿಸುವುದು ಸುಲಭವಾಗಿದ್ದರಿಂದ ಬಲುಬೇಗ ಜನಪ್ರಿಯವಾಯಿತು. ನೂರಾರು ಸಂಖ್ಯೆಯ ಟಿಕ್ ಟಾಕ್ ಕಲಾವಿದರು, ಸ್ಟಾರ್‌ಗಳು ಹುಟ್ಟಿಕೊಂಡರು. ಅವರಿಗೆ ತಮ್ಮ ಪ್ರತಿಭೆ, ಕಲೆ ಪ್ರದರ್ಶನಕ್ಕೆ ಇದೊಂದು ವೇದಿಕೆಯಾಗಿತ್ತು.ಅನೇಕರಿಗೆ ಜೀವನೋಪಾಯದ ಮಾರ್ಗವೂ ಆಗಿತ್ತು.

ಅದು ಬ್ಯಾನ್ ಆದ ಮೇಲೆ ಇವರೆಲ್ಲ ತಲೆ ಮೇಲೆ ಕೈಹೊತ್ತು ಕುಳಿತಿದ್ದು ಸುಳ್ಳಲ್ಲ.ಇದೀಗ ಪಬ್ ಜಿ ಪರಿಸ್ಥಿತಿಯೂ ಹಾಗೇ
ಆಗಲಿದೆ. ಕೋಟ್ಯಂತರ ಯುವಜನರು ಪಬ್ಜಿಗೆ ಮನಸೋತಿದ್ದರು. ಈಗ ಅವರೂ ಕೂಡ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಆದರೆ ಇದರ ಜತೆಗೆ ಈ ಎರಡು ಆ್ಯಪ್ ವ್ಯಾನ್ ಆಗಿರುವ ಬಗ್ಗೆ ನಿಟ್ಟಿಸಿರು ಬಿಟ್ಟಿರುವ ಜನರಿಗೂ, ಅದರಲ್ಲೂ ವಿಶೇಷವಾಗಿ ಪೋಷಕರು, ಪಾಲಕರಿಗೆ ಕೊರತೆ ಇಲ್ಲ. ಏಕೆಂದರೆ ಇವೆರಡೂ ಆ್ಯಪ್‌ಗಳು ಯುವ ಜನರಿಗೆ ಅಷ್ಟರ ಮಟ್ಟಿಗೆ ಹುಚ್ಚು ಹಿಡಿಸಿದ್ದವು. ಇವುಗಳ ಗುಂಗಿನಲ್ಲಿ ಊಟ ಆಟ ಪಾಠ ಎಲ್ಲವನ್ನೂ ಮರೆತು ಅವುಗಳ ದಾಸರಾಗಿದ್ದರು.

ಈ ಎರಡೂ ಸೇರಿದಂತೆ ಈಗ ಬ್ಯಾನ್ ಮಾಡಲಾಗಿರುವ ಆ್ಯಪ್‌ಗಳನ್ನು ಇವೆಲ್ಲ ದೃಷ್ಟಿಯಿಂದ ಸಮಗ್ರವಾಗಿ ನೋಡಬೇಕಾಗಿದೆ. ಈಗಾಗಲೇ 176 ಆ್ಯಪ್‌ಗಳನ್ನು ನಿಷೇಧಿಸಲಾಗಿದ್ದು, ಇನ್ನಷ್ಟು ಪಟ್ಟಿಯಲ್ಲಿವೆ ಎಂದು ಸರಕಾರ ಹೇಳಿದೆ. ನಿಷೇಧಕ್ಕೆ ಕೊಟ್ಟಿರುವ ಕಾರಣಗಳೆಂದರೆ ಇವು ಸುರಕ್ಷತಾ ದೃಷ್ಟಿಿಯಿಂದ ಅಪಾಯ ಎಂಬುದು. ಅದೇ ರೀತಿ ಭಾರತ – ಚೀನಾ ನಡುವೆ ಗಡಿ ತಂಟೆ ಹೆಚ್ಚಾದಾಗ ಉಂಟಾದ ಘರ್ಷಣೆಗೆ ಪ್ರತೀಕಾರವಾಗಿಯೂ ಈ ಕ್ರಮ ಜಾರಿಗೆ ಬಂದಿದೆ. ಮೂರನೆಯದು ಆತ್ಮ ನಿರ್ಭರ – ಅಂದರೆ ಸ್ವಾವಲಂಬನೆ.

ಆದರೆ ಇಲ್ಲಿ ಕೊಟ್ಟಿರುವ ಮೂರೂ ಸಮರ್ಥನೆಗಳ ಬಗೆಗೂ ಪ್ರಶ್ನೆಗಳೇಳುತ್ತವೆ. ಇವು ಅಸುರಕ್ಷಿತ ಎಂದಾದರೆ ಆ ವಿಷಯ ಗೊತ್ತಿರಲಿಲ್ಲವೆ ಎಂಬುದು ಆ ಪೈಕಿ ಬಹುಮುಖ್ಯ ಪ್ರಶ್ನೆ. ಅದೇ ರೀತಿ ಟಿಕ್ ಟಾಕ್, ಪಬ್ ಜಿಗಳಂಥ ಆ್ಯಪ್‌ಗಳು ಭಾರತದಲ್ಲಿ ಕೂಡ ಇಷ್ಟು ಜನಪ್ರಿಯ ಆಗಿರಬೇಕಾದರೆ ನಮ್ಮದೇ ಆದ ಆ್ಯಪ್‌ಗಳ ಬಗ್ಗೆ ನಾವು ಯೋಚಿಸಲೇ ಇಲ್ಲವೇಕೆ? ಇದೀಗ ಸ್ವಾವಲಂಬನೆಯ ಹೆಸರಲ್ಲಿ ಪ್ರಯತ್ನಗಳು ಆರಂಭವಾಗಿವೆ. ಆಟಿಕೆಯ ವಿಷಯಗಳನ್ನೇ ತೆಗೆದುಕೊಂಡರೆ ನಮ್ಮಲ್ಲಿ ಬೇಡಿಕೆಗೆ ಅನುಗುಣವಾಗಿ ಆಟಿಕೆ
ವಸ್ತುಗಳ ಉತ್ಪಾದನೆ, ಪೂರೈಕೆ ಇಲ್ಲ. ಅದರ ನಡುವೆಯೇ ಬ್ಯಾನ್ ಮಾಡಲಾಗಿದೆ. ಈ ಕೊರತೆಗೆ ಏನು ಪರಿಹಾರ ಎಂಬುದನ್ನೂ ಯೋಚಿಸಬೇಕಿತ್ತಲ್ಲವೆ.

ಒಟ್ಟಾರೆ, ಚೀನಿ ಆ್ಯಪ್‌ಗಳ ನಿಷೇಧವು ಹತ್ತು ಹಲವು ಪ್ರಶ್ನೆಗಳನ್ನೂ, ಸಮಸ್ಯೆಗಳನ್ನೂ ಹುಟ್ಟು ಹಾಕಿವೆ. ಇವುಗಳಿಗೆ ಸೂಕ್ತ ಪರಿಹಾರಗಳನ್ನು ಕೈಗೊಳ್ಳಬೇಕಿದೆ.

Leave a Reply

Your email address will not be published. Required fields are marked *