Monday, 16th September 2024

ರಾಜಕಾರಣಿಗಳಿಂದ ರಾಮ ಮಂದಿರ ಜಪ

ಹಲವು ದಶಕಗಳ ಆಕಾಂಕ್ಷೆಯಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಇದ್ದ ಅಡೆತಡೆಗಳೆಲ್ಲವನ್ನು ಪರಿಹರಿಸಿ ಕೊಂಡು ಪ್ರಗತಿ ಪಥದಲ್ಲಿ ಸಾಗುತ್ತಿದೆ.

ಇಂಥ ಸುಸಂದರ್ಭದ ಬೆಳವಣಿಗೆಯನ್ನು ಸಂಭ್ರಮಿಸಬೇಕಿದ್ದ ರಾಜಕಾರಣಿಗಳು ರಾಮ ಮಂದಿರದ ವಿಚಾರವನ್ನು ರಾಜಕೀಯ ಹೇಳಿಕೆಗಳಿಗೆ ದುರ್ಬಳಕೆಪಡಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ರಾಮ ಮಂದಿರ ದೇಣಿಗೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟರ್ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯದಿಂದಾಗಿ ರಾಜ್ಯದಲ್ಲಿ ಮತ್ತೊಮ್ಮೆ ವಿವಾದ ಸೃಷ್ಟಿಯಾಗಿದೆ. ಪರ – ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳೂ ವಿವಾದಕ್ಕೆ ಕಾರಣವಾಗಿವೆ. ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದು ವಿವಾದಿತ ಜಮೀನಿನಲ್ಲಿ. ಆದ್ದರಿಂದ ನಾನು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ ಎಂಬುದು ಸಿದ್ದರಾಮಯ್ಯ ಹೇಳಿಕೆ. ಹೀಗೆ ಇಬ್ಬರು ಮಾಜಿ ಸಿಎಂಗಳ ಹೇಳಿಕೆಯಿಂದಾಗಿ ರಾಜ್ಯದಲ್ಲಿ
ಮತ್ತೊಮ್ಮೆ ರಾಮ ಮಂದಿರದ ವಿಚಾರವಾಗಿ ವಿವಾದಗಳು ಕೇಳಿಬರಲಾರಂಭಿಸಿವೆ.

ಇದು ಅವರ ವೈಯಕ್ತಿಕ ಅಭಿಪ್ರಾಯಗಳೇ ಆದರೂ ರಾಮ ಮಂದಿರದ ವಿಚಾರ ರಾಜ್ಯದ ಬಹುತೇಕ ಜನರ ನಂಬಿಕೆ ಸಂಭವಿ ಸಿದ್ದು. ಜಾಗದ ವಿಚಾರದ ಬಗ್ಗೆ ಇದ್ದ ವಿವಾದವನ್ನು ನ್ಯಾಯಾಲಯವೇ ಇತ್ಯರ್ಥಪಡಿಸಿದೆ. ದೇಣಿಗೆ ನೀಡುವುದು ಅವರವರ ವೈಯಕ್ತಿಕ ನಿಲುವು. ಆದರೆ ಅಯೋಧ್ಯೆ ರಾಮ ಮಂದಿರದ ವಿಚಾರವಾಗಿ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳು ಪದೇ ಪದೆ ವಿವಾದ ಸೃಷ್ಟಿಸುತ್ತಿವೆ. ಹಲವು ದಶಗಳ ವಿವಾದವನ್ನು ನ್ಯಾಯಾಲಯದ ಮೂಲಕ ಪರಿಹರಿಸಿಕೊಂಡರೂ ರಾಮ ಮಂದಿರ ನಿರ್ಮಾಣ ಪದೇ ಪದೆ ರಾಜಕಾರಣಿಗಳ ವಿವಾದಿತ ಹೇಳಿಕೆಗಳಿಗೆ ಆಸ್ಪದವಾಗುತ್ತಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *