Wednesday, 30th October 2024

ಉದ್ಯೋಗ ಮೀಸಲು ಅಗತ್ಯ

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ಸಂಬಂಧ ವಿಧೇಯಕ ಜಾರಿಗೆ ಕರ್ನಾಟಕ ಸರಕಾರ ಮುಂದಾದ ಬೆನ್ನ ಉದ್ಯಮಿ ಗಳಿಂದ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದು ಉದ್ಯಮ ವಲಯದ ಹಿತಾಸಕ್ತಿಯನ್ನು ಕಾಪಾಡುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಮೇಲೆ ಉದ್ಯೋಗ ನೀಡಬೇಕೆಂಬ ಕೂಗು ದಶಕ ಗಳಷ್ಟು ಹಳೆಯದು.

೧೯೮೩ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಲು ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈ ಕುರಿತು ಕೂಲಂಕಶ ಪರಿಶೀಲನೆ ನಡೆಸಿದ್ದ ಸಮಿತಿ ೫೮ ಶಿಫಾರಸು ಅಂಶಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತ್ತು. ಆದರೆ ನಮ್ಮ ರಾಜಕೀಯ ನಾಯಕರ ಇಚ್ಛಾ ಶಕ್ತಿಯ ಕೊರತೆಯಿಂದ ಈ ವರದಿ ಜಾರಿಗೆ ಬರಲೇ ಇಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಸ್ಥಾಪನೆಯಾದ ಕೇಂದ್ರ ಸ್ವಾಮ್ಯದ ಉದ್ಯಮಗಳಲ್ಲೂ ಕನ್ನಡೇತರರೇ ವಿಜೃಂಭಿಸುವಂತಾಯಿತು.

ಯಾವುದೇ ರಾಜ್ಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಆಯಾ ಪ್ರಾದೇಶಿಕ ಭಾಷಿಕರಿಗೆ ಮೀಸಲಿಡುವುದು ಕ್ರಮ. ಆದರೆ ನಮ್ಮ ರಾಜ್ಯದಲ್ಲಿ ಈ ಹುದ್ದೆಗಳೂ ಅನ್ಯಭಾಷಿಕರ ಪಾಲಾಗುತ್ತಿವೆ. ಇದೀಗ ಹೆಚ್ಚು ಉದ್ಯೋಗಾವಕಾಶವಿರುವ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಕನ್ನಡಿಗರ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ. ಆದರೆ ಇದರ ಜಾರಿ ಸುಲಭದ್ದೇ ನಲ್ಲ.

ವಿಧೇಯಕ ಮಂಡನೆಗೆ ಮುನ್ನವೇ ಮೋಹನದಾಸ್ ಪೈ, ಕಿರಣ್ ಮಂಜುಂದಾರ್ ಶಾ ಮುಂತಾದವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಉದ್ಯಮ, ಕಾರ್ಖಾನೆ ಅಥವಾ ಇತರ ಸಂಸ್ಥೆಗಳು ಮ್ಯಾನೇಜ್‌ಮೆಂಟ್ ವಿಭಾಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇ ೫೦ ರಷ್ಟು ಮೀಸಲಾತಿ ನೀಡಬೇಕು. ನಾನ್ ಮ್ಯಾನೇಜಮೆಂಟ ವಿಭಾಗಗಳಲ್ಲಿ ಶೇ ೭೫ರಷ್ಟು ಮೀಸಲಾತಿ ನೀಡಬೇಕು ಎಂಬ ಅಂಶವನ್ನು ಮುಂದಿಟ್ಟು ವಿಧೇಯಕ ರೂಪಿಸಲಾಗಿದೆ. ಆದರೆ
ನೂರಾರು ಬಹುರಾಷ್ಟ್ರೀಯ ಕಂಪನಿಗಳು ಕೆಲಸ ನಿರ್ವಹಿಸುವ ಬೆಂಗಳೂರಿನಲ್ಲಿ ಇಂತಹ ನಿರ್ಬಂಧ ಸಲ್ಲದು ಎನ್ನುವುದು ಉದ್ಯಮ ವರ್ಗದ ಆಕ್ಷೇಪ.

ರಾಜ್ಯದಲ್ಲಿ ಕುಶಲ ಕೆಲಸಗಾರರಿಗೆ ಬರವಿಲ್ಲ. ಒಂದು ವೇಳೆ ನಿರ್ದಿಷ್ಟ ಹುದ್ದೆಗೆ ಕನ್ನಡಿಗರು ಲಭ್ಯವಿಲ್ಲದಿದ್ದರೆ ಹೊರಗಿನ ಪ್ರತಿಭೆಗಳನ್ನು ಆಯ್ಕೆ ಮಾಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗ ಕೆಲವು ಉದ್ಯಮಿಗಳ ಆಕ್ಷೇಪಕ್ಕೆ ಸೊಪ್ಪು ಹಾಕದೇ ಈ ವಿಧೇಯಕ ಜಾರಿಗೆ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು.