Monday, 16th September 2024

ರಕ್ಷಣಾ ಕಾರ‍್ಯಕರ್ತರನ್ನು ಗೌರವಿಸೋಣ

ವಯನಾಡು ದುರಂತದಲ್ಲಿ ರಕ್ಷಣಾ ಕಾರ‍್ಯಾಚರಣೆ ಬಹುತೇಕ ಅಂತಿಮ ಘಟ್ಟ ತಲುಪಿದೆ. ಕಾರ‍್ಯಾಚರಣೆ ವೇಳೆ ಮುಂಡಕೈ- ಚೂರಲ್ಮಲ ಮಧ್ಯೆ ೨೪ ಗಂಟೆಗೊಳಗೆ ತಾತ್ಕಾಲಿಕ ತುರ್ತು ಸೇತುವೆಯನ್ನು ನಿರ್ಮಿಸಿ ನೂರಾರು ಜನರ ಪ್ರಾಣ ರಕ್ಷಣೆಯಲ್ಲಿ ಭಾಗಿಯಾಗಿದವರು ನಮ್ಮ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮದ್ರಾಸ್ ಎಂಜಿನಿಯರ‍್ಸ್ ಗ್ರೂಪ್‌ನ
ಯೋಧರು. ಈ ತಂಡದ ಸದಸ್ಯರು ಪರಿಹಾರ ಕಾರ‍್ಯಾಚರಣೆ ಮುಗಿಸಿ ಬೆಂಗಳೂರಿನ ತಮ್ಮ ಮೂಲ ಶಿಬಿರಕ್ಕೆ ಮರಳಿದಾಗ ಇತರ ಯೋಧರು ವೀರೋಚಿತ ಸ್ವಾಗತ ನೀಡಿದರು. ಆದರೆ ಇವರನ್ನು ಸ್ವಾಗತಿಸಲು ನಮ್ಮ ಸರಕಾರದ ಪರವಾಗಿ ಅಲ್ಲಿ ಯಾರೂ ಇರಲಿಲ್ಲ.

ಗಡಿ ಕಾಯುವ ಸೈನಿಕರು, ಯುದ್ಧದಲ್ಲಿ ಪಾಲ್ಗೊಂಡು ವೈರಿಗಳ ವಿರುದ್ಧ ಹೋರಾಡಿದ ಸೈನಿಕರನ್ನು ನಮ್ಮ ಸಮಾಜ ಗೌರವಿಸುತ್ತದೆ. ಆದರೆ ಪ್ರಾಕೃತಿಕ ವಿಕೋಪದಲ್ಲಿ ಪಾಲ್ಗೊಂಡು ನೂರಾರು
ಜನರ ಪ್ರಾಣವುಳಿಸುವ ಯೋಧರಿಗೆ ಈ ರೀತಿಯ ವಿಶೇಷ ಗೌರವ ಸಿಗದೇ ಇರುವುದು ಬೇಸರದ ಸಂಗತಿ. ಇದೀಗ ಮಳೆ ಎಚ್ಚರಿಕೆಯ ನಡುವೆಯೇ ಗುಡ್ಡ ಕುಸಿತದಿಂದ ಮುಚ್ಚಿಹೋಗಿದ್ದ ರಸ್ತೆಗಳನ್ನು, ರೈಲು ಮಾರ್ಗವನ್ನು ಮತ್ತೆ ಪ್ರಯಾಣಕ್ಕೆ ತೆರವುಗೊಳಿಸಲಾಗುತ್ತಿದೆ. ಪ್ರಮುಖವಾಗಿ ಸಕಲೇಶಪುರದಲ್ಲಿ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ.

ಎಡಕುಮೇರಿ ಬಳಿ ಗುಡ್ಡ ಕುಸಿತದ ಕಾರಣಕ್ಕೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಇಂದಿನಿಂದ (ಆಗಷ್ಟ್ ೮) ಪುನರಾರಂಭಗೊಳ್ಳಲಿದೆ. ಅಂಕೋಲಾ ಹೆದ್ದಾರಿಯೂ ಈಗಾಗಲೇ ಸಂಚಾರಕ್ಕೆ ತೆರವಾಗಿದೆ. ಜೀವದ ಹಂಗು ತೊರೆದು ಹಗಲು ರಾತ್ರಿ ಎನ್ನದೇ ಇಲ್ಲಿ ಪರಿಹಾರ ಕಾರ‍್ಯಾಚರಣೆ ನಡೆಸಿದ್ದರಿಂದಲೇ ಇದು ಸಾಧ್ಯವಾಗಿದೆ. ಈ ಕಾರ‍್ಯಾಚರಣೆಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್ ಎಫ್)ದ ಸದಸ್ಯರು, ನಾಗರಿಕ ಸಿಬ್ಬಂದಿ, ಅಽಕಾರಿಗಳು, ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ಸೇವೆಯನ್ನು ನಾವು ಗುರುತಿಸಲೇಬೇಕು. ಜುಲೈ ೨೬ರಂದು ಸಕಲೇಶಪುರದ ಎಡಕುಮೇರಿಯ ಸೇತುವೆಯ ಕೆಳಭಾಗದಲ್ಲಿ ಸುಮಾರು ೬೦ ಅಡಿ ಆಳಕ್ಕೆ ಮಣ್ಣು ಕುಸಿದಿತ್ತು. ಇದನ್ನು ಒಂದು ದಿನದ ಮಟ್ಟಿಗೆ ಹಾಗೆಯೇ ಬಿಟ್ಟಿದ್ದರೆ ಇಡೀ ಸೇತುವೆ ಉರುಳುವ ಅಪಾಯವಿತ್ತು. ರೈಲ್ವೆಯ ೬೦೦ರಿಂದ ೭೦೦ ಸಿಬ್ಬಂದಿ ಸುಮಾರು ನೂರು ವ್ಯಾಗನ್‌ನಷ್ಟು ಜಲ್ಲಿ, ಒಂದು ಲಕ್ಷ ಮರಳು ಚೀಲ ಬಳಸಿ ಜಡಿ ಮಳೆಯ ನಡುವೆಯೇ ಸಮರೋಪಾದಿಯಲ್ಲಿ ದುಡಿದು ೧೦ ದಿನಗಳೊಳಗೆ ಹಳಿಯನ್ನು ಮರು ಸ್ಥಾಪಿಸಿದ್ದಾರೆ. ಇವರೆಲ್ಲರೂ ನಮ್ಮ ಯೋಧರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ನಾಗರಿಕ ಯೋಧರನ್ನು ಕರೆಸಿ ಗೌರವಿಸುವ ಕೆಲಸ ಆಗಬೇಕು.

Leave a Reply

Your email address will not be published. Required fields are marked *