Thursday, 19th September 2024

ಸುರಕ್ಷತಾ ಕ್ರಮ: ಮುಂದಿನ ನಡೆ ಏನು

ದೇಶದಲ್ಲಿ ಕರೋನಾ ಸೋಂಕಿನಿಂದ ಇದುವರೆಗೆ 3,74,305 ಜನ ಮೃತಪಟ್ಟಿದ್ದಾರೆ. ಕರೋನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸು ತ್ತಿದ್ದರೂ ಅಪಾಯದ ಸ್ಥಿತಿ ಮುಂದುವರಿದಿದೆ. ಹೊಸ ಹೊಸ ವೈಜ್ಞಾನಿಕ ಪ್ರಯೋಗಗಳು ಮುಂದುವರಿದಿರುವಂತೆಯೇ ಹೊಸ ಹೊಸ ಸಮಸ್ಯೆಗಳು, ಆವಿಷ್ಕಾರಗಳು ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ಬಳಕೆಯಲ್ಲಿರುವ ತಂತ್ರಜ್ಞಾನವನ್ನು ಸಮರ್ಪಕ ವಾಗಿ ಬಳಸಿಕೊಳ್ಳುವಲ್ಲಿನ ಪ್ರಯತ್ನಗಳೂ ಗಮನ ಸೆಳೆಯುತ್ತಿವೆ.

ದೇಶದ ಕಟ್ಟಕಡೆಯ ಹಳ್ಳಿಗೂ ಡ್ರೋನ್ ಮೂಲಕ ಔಷಧ, ಲಸಿಕೆ ತಲುಪಿಸಲು ಸರಕಾರ ಅರ್ಜಿ ಆಹ್ವಾನಿಸಿರುವುದು ಮಹತ್ತರ ವಾದ ಸಂಗತಿ. ಇಂಥ ಪ್ರಯತ್ನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರಗಳ ಪಾತ್ರವೂ ಮುಖ್ಯ. ಕರ್ನಾಟಕ ರಾಜ್ಯವೂ ಇದೀಗ ಎರಡು ಕಾರಣಗಳಿಗಾಗಿ ಗಮನಸೆಳೆಯುತ್ತಿದೆ. ಮೊದಲನೆಯದಾಗಿ ರಾಜ್ಯದ 19 ಜಿಲ್ಲೆಗಳನ್ನು ಅನ್‌ಲಾಕ್‌ಗೊಳಿಸುತ್ತಿರುವ ಪ್ರಯತ್ನ. ಮತ್ತೊಂದು ಕಾರಣ, ಮೃತರ ಬಡಕುಟುಂಬದವರಿಗೆ 1 ಲಕ್ಷ ಪರಿಹಾರ ಘೋಷಿಸಿರು ವುದು. ಈ ಎರಡು ಕಾರಣಗಳಿಂದಾಗಿ ಎಲ್ಲರ ಗಮನ ರಾಜ್ಯದ ಮೇಲೆ ಕೇಂದ್ರೀಕರಿಸಿದೆ. ಆದರೆ ಮತ್ತೊಂದು ಪ್ರಮುಖ ಜವಾ ಬ್ದಾರಿಗೆ ಮತ್ತೆ ಸಜ್ಜುಗೊಳ್ಳ ಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ.

ರಾಜ್ಯದ ವಾಣಿಜ್ಯನಗರವಾಗಿರುವ ಬೆಂಗಳೂರಿಗೆ ಹೊರ ರಾಜ್ಯಗಳು ಹಾಗೂ ಹೊರ ಜಿಲ್ಲೆಗಳಿಂದ ಬದಕನ್ನು ಕಟ್ಟಿಕೊಳ್ಳಲು ಬಂದವರ ಸಂಖ್ಯೆ ಬಹಳಷ್ಟು. ಕೋವಿಡ್ ಮೊದಲನೆಯ ಅಲೆಯಿಂದ ಕಂಗಾಲಾಗಿದ್ದ ಅನೇಕರು ಎರಡನೆ ಅಲೆ ಸಂದರ್ಭದಲ್ಲಿ
ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇದೀಗ ಅನ್‌ಲಾಕ್ ಮಾಹಿತಿ ಪ್ರಕಟಗೊಳ್ಳುತ್ತಿದ್ದಂತೆಯೇ ಮತ್ತೆ ಬದುಕು ಕಟ್ಟಿಕೊಳ್ಳುವ ಮಹತ್ವಕಾಂಕ್ಷೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ ಬೆಂಗಳೂರಿಗೆ ಆಗಮಿಸು ತ್ತಿರುವವರ ಸುರಕ್ಷತೆಯೂ ಸರಕಾರದ ಪಾಲಿಗೆ ಜವಾಬ್ದಾರಿಯ ಕರ್ತವ್ಯ. ಈ ನಿಟ್ಟಿನಲ್ಲಿ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಬೇಕಾದ ಅನಿವಾರ್ಯತೆ ಎದುರಾಗಿದೆ.

ಸರಕಾರದ ಪಾಲಿಗೆ ಇದೊಂದು ಸವಾಲಿನ ಕೆಲಸವಾದರೂ, ಸರಕಾರ ತೆಗೆದುಕೊಳ್ಳುವ ನಿರ್ಣಯಗಳು ಪ್ರಸ್ತುತ ಬಹುಮುಖ್ಯ. ಆದ್ದರಿಂದ ಅನ್‌ಲಾಕ್ ಜತೆಗೆ ಮುಂದಿನ ಸುರಕ್ಷತಾ ಕ್ರಮಗಳನ್ನು ಪ್ರಕಟಿಸಬೇಕಿರುವುದು ಅಗತ್ಯ.

Leave a Reply

Your email address will not be published. Required fields are marked *