Monday, 16th September 2024

ಸುಳ್ಳು ಸುದ್ದಿಗೆ ಕಡಿವಾಣ ಇರಲಿ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಸಮಯದಲ್ಲಿ ದುರದೃಷ್ಟವಶಾತ್ ಓರ್ವ ರೈತ ಮೃತ ಪಟ್ಟನೆಂದು ವರದಿಯಾಗಿತ್ತು. ಈ ಮರಣವು ಪೊಲೀಸರ ಗೋಲಿಬಾರ್‌ನಿಂದ ಆಗಿರಬಹುದು ಎಂದು ಓರ್ವ ಖ್ಯಾತ ಪತ್ರಕರ್ತರು ಟ್ವೀಟ್ ಮಾಡಿದ್ದರು.

ಇದಕ್ಕಾಗಿ ಅವರು ತಮ್ಮದೇ ಮಾಹಿತಿ ಮೂಲಗಳನ್ನು ಅವಲಂಬಿಸಿದ್ದರು ಮತ್ತು ಆ ಸ್ಥಳದಲ್ಲಿ ಇದ್ದರು ಎನ್ನಲಾಗಿತ್ತು. ಆದರೆ ನಂತರ ದೊರೆತ ಅಧಿಕೃತ ಮಾಹಿತಿಯಂತೆ ಮತ್ತು ವಿಡಿಯೋದಲ್ಲಿ ದಾಖಲಾದಂತೆ, ಪ್ರತಿಭಟನೆಯ ಸಮಯದಲ್ಲಿ ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿದ ಒಂದು ಟ್ರ್ಯಾಕ್ಟರ್ ಪಲ್ಟಿಯಾದಾಗ, ಅದರ ಅಡಿ ಸಿಲುಕಿ ಆ ರೈತ ಮೃತಪಟ್ಟನೆಂದು ಖಚಿತವಾಯಿತು.

ಈಗಾಗಲೇ ಈ ಸುದ್ದಿಯನ್ನು ಗುಂಡೇಟಿನಿಂದ ಆದ ಸಾವು ಎಂದು ಟ್ವೀಟ್ ಮೂಲಕ ಸುದ್ದಿ ಪ್ರಸಾರ ಮಾಡಿದ ಆ ಖ್ಯಾತ
ಪತ್ರಕರ್ತರು ನಿಜಕ್ಕೂ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ಆ ಖ್ಯಾತ ಪತ್ರಕರ್ತರು ಇದಕ್ಕಾಗಿ ಶಿಕ್ಷೆಯನ್ನು ಸಹ ಅನುಭವಿಸಬೇಕಾಯಿತು ಎಂದು ವರದಿಯಾಗಿದೆ.

ಆ ಹಿರಿಯ ಪತ್ರಕರ್ತರು ಸುಳ್ಳು ಸುದ್ದಿಯನ್ನು ಅತಿ ಉತ್ಸಾಹದಿಂದ ಬಿತ್ತರಿಸಿದರೋ ಅಥವಾ ಯಾವುದೋ ಉದ್ದೇಶ ವಿಟ್ಟುಕೊಂಡು ಪ್ರಸಾರ ಮಾಡಿದರೋ ಎಂಬುದು ಇಲ್ಲಿ ಮುಖ್ಯವಲ್ಲ. ಸುದ್ದಿ ಮೂಲ ಯಾವುದೇ ಇರಲಿ, ಸುದ್ದಿಯನ್ನು ಅದರಲ್ಲೂ ಸೂಕ್ಷ್ಮ ವಿಚಾರಗಳ ಕುರಿತ ಸುದ್ದಿಯನ್ನು, ಖಚಿತ ಮಾಹಿತಿ ಇಲ್ಲದೇ ನೀಡುವುದು ಎಷ್ಟು ಅಪಾಯಕಾರಿ ಎಂಬುದು
ಇದರಿಂದ ವ್ಯಕ್ತವಾಗುತ್ತದೆ.

ಎಲ್ಲಾ ಮಾಧ್ಯಮಗಳು ಮತ್ತು ಪತ್ರಕರ್ತರು ಸುದ್ದಿ ಪ್ರಸಾರ ಮಾಡುವ ಮುಂಚೆ ಅದನ್ನು ಖಚಿತಪಡಿಸಿಕೊಂಡು, ಜವಾಬ್ದಾರಿ ಯಿಂದ ಜನರಿಗೆ ತಿಳಿಸುವ ಪ್ರಾಮುಖ್ಯತೆಯನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಈ ಎಚ್ಚರವನ್ನು ದೃಶ್ಯ ಮಾಧ್ಯಮಗಳು ಮತ್ತು
ಮುದ್ರಣ ಮಾಧ್ಯಮಗಳು ಅನುಸರಿಸುವುದು ಬಹುಮುಖ್ಯ.

Leave a Reply

Your email address will not be published. Required fields are marked *