Monday, 16th September 2024

ಕಲಾ ಪ್ರೋತ್ಸಾಹಕ್ಕೆ ಕ್ರಮ ಉತ್ತಮ ಬೆಳವಣಿಗೆ

ಕಲೆ ಕೇವಲ ಮನರಂಜನೆಯ ಮಾಧ್ಯಮವಲ್ಲ. ದೇಶದ ಹಾಗೂ ರಾಜ್ಯದ ಸಾಂಸ್ಕೃತಿಕ ಪ್ರತೀಕವೂ ಹೌದು. ಆದರೆ ಇತ್ತೀಚೆಗೆ ಕಲಾ ಪ್ರಕಾರಗಳು ನಾನಾ ರೀತಿಯ ಸಂಕಷ್ಟಗಳಿಗೆ ಸಿಲುಕಿ ಕಡೆಗಣಿಸಲ್ಪಡುತ್ತಿವೆ.

ಮನರಂಜನೆಗಾಗಿ ಇಂದು ಜನರು ಅನೇಕ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸುತ್ತಿರುವ ಇಂದಿನ ದಿನಗಳಲ್ಲಿ ಕಲೆಯನ್ನು ಪ್ರೋತ್ಸಾಹಿಸುವುದು, ರಕ್ಷಿಸುವುದು ಹಾಗೂ ಕಲಾ ಪ್ರಕಾರ ಗಳನ್ನು ಜನತೆಗೆ ಪರಿಚಯಿಸುವಲ್ಲಿ ಸರಕಾರದ ಹೊಣೆಗಾರಿಕೆ ಹೆಚ್ಚಬೇಕಿದೆ. ಪ್ರೇಕ್ಷಕರ ಸಹಕಾರದಿಂದಲೇ ಕಲಾವಿದರು, ಕಲಾತಂಡಗಳು ವಿಜೃಂಭಿಸುತ್ತಿದ್ದ ದಿನಗಳು ಕಣ್ಮರೆಯಾಗಿವೆ.

ಸಿನಿಮಾ – ದೂರದರ್ಶನ ಕಲಾವಿದರು ಹೊರತುಪಡಿಸಿ ಗ್ರಾಮೀಣ ಕಲಾ ತಂಡಗಳು ಅಳಿವಿನಂಚಿಗೆ ಸಾಗುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸರಕಾರದ ಪಾತ್ರ ಮುಖ್ಯ. ಪಠ್ಯದಲ್ಲಿ ಜಾನಪದ ವಿಷಯ ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗಿರುವುದು ಉತ್ತಮ ಬೆಳವಣಿಗೆ. ಜತೆಗೆ ಕಲಾತಂಡಗಳಿಗೆ ಪ್ರೋತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಕಲಾ ಪೋಷಣೆಗಾಗಿ ಕನ್ನಡ ಸಂಸ್ಕೃತಿ ಇಲಾಖೆ ಈಗಾಗಲೇ ಅನೇಕ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದ್ದರೂ, ಇಂದು ಮತ್ತಷ್ಟು ಆದ್ಯತೆ ನೀಡಬೇಕಿರುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ನಾನಾ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಅಧಿಕಾರಿ ಗಳ ಸಭೆ ನಡೆಸಿದ್ದು, ವಿನಾಶದಂಚಿನಲ್ಲಿವ ಕಲಾ ಪ್ರಕಾರಗಳ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮೂಡಲಪಾಯ ಯಕ್ಷಗಾನಕ್ಕೆ ಪ್ರೋತ್ಸಾಹನೀಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ರಾಜ್ಯದ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆ ಜಾರಿಗೊಳಿಸುವುದಾಗಿ ಸಚಿವರು ನೀಡಿರುವ ಭರವಸೆ ಪ್ರಸ್ತುತ ಮಹತ್ವದ್ದಾಗಿದೆ.

ಕೂಡಲೇ ಭರವಸೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಅಳಿವಿನಂಚಿಗೆ ಸರಿಯುತ್ತಿರುವ ಕಲಾ ತಂಡಗಳ ರಕ್ಷಿಸಬೇಕಾದ್ದು ಉತ್ತಮ ಬೆಳವಣಿಗೆ.

Leave a Reply

Your email address will not be published. Required fields are marked *