Wednesday, 30th October 2024

ಪಠ್ಯ ಪರಿಷ್ಕರಣೆ: ಪಠ್ಯದ ಮೂಲಕ ಸಿದ್ಧಾಂತದ ಹೇರಿಕೆ ಸರಿಯಲ್ಲ

ಈ ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರಕಾರವು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ, ತನಗೆ ಬೇಕಿದ್ದ ಕೆಲವು ಪಾಠಗಳನ್ನು ಸೇರಿಸಿತ್ತು ಹಾಗೂ ತನ್ನ ಸಿದ್ಧಾಂತಕ್ಕೆ ಒಗ್ಗದ ಕೆಲವು ಪಾಠಗಳನ್ನು ಕೈಬಿಟ್ಟಿತ್ತು ಎಂಬ ಕಾರಣಕ್ಕಾಗಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರವು ಶಾಲಾ ಪಠ್ಯಪುಸ್ತಕವನ್ನು ಪರಿಶೀಲನೆಗೆ ಒಳಪಡಿಸುವ ಕುರಿತು  ಚಿಂತನೆ ನಡೆಸಿದೆ.

೨೦೧೩ರಿಂದ ೨೦೧೮ರ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ನೇತೃತ್ವದ ಸರಕಾರವೂ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿತ್ತು. ಸರಕಾರ ಬದಲಾದಂತೆಲ್ಲ ಪಠ್ಯ ಪರಿಷ್ಕರಣೆ ಮಾಡುವುದು ತೀರ ಅಗತ್ಯ ಎಂಬಂತೆ ಕಳೆದ ಎರಡು ಮೂರು ಸರಕಾರಗಳು ವರ್ತಿಸುತ್ತಿವೆ. ಪಠ್ಯವನ್ನು ತಿರುಚ ಲಾಗಿದ್ದರೆ ಅದನ್ನು ಸರಿಪಡಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಪಠ್ಯದಲ್ಲಿ ಸಂವಿಧಾನ ವಿರೋಧಿ, ಕೋಮು ಭಾವನೆ ಕೆರಳಿಸುವ ಅಂಶಗಳಿದ್ದರೆ ಅವುಗಳನ್ನು ಸರಿಪಡಿಸಲೇಬೇಕು.

ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವುದಕ್ಕೆ ಪಠ್ಯ ಪುಸ್ತಕಗಳು ಬಳಕೆ ಆಗಬಾರದು. ನಿಗದಿತ ಅವಧಿಯಲ್ಲಿ ಪಠ್ಯ ಪರಿಷ್ಕರಣೆ
ಆಗಬೇಕಾದುದು ಅಗತ್ಯ. ಆದರೆ, ಪಠ್ಯಪುಸ್ತಕವನ್ನು ಆಗಾಗ ಬದಲಾಯಿಸಿದರೆ ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಎಚ್ಚರ ಸರಕಾರಕ್ಕೆ ಇರಬೇಕು. ಅಲ್ಲದೆ, ಆಡಳಿತಾರೂಢ ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದಕ್ಕಾಗಿ ಪಠ್ಯ ಪರಿಷ್ಕರಣೆ ಮಾಡುವುದು ಸರಿಯಲ್ಲ.

ಪಠ್ಯಗಳನ್ನು ಇನ್ನಷ್ಟು ಪರಿಣಾಮಕಾರಿ ರೂಪಿಸುವುದು ಮತ್ತು ವಿದ್ಯಾರ್ಥಿಗಳ ಕೌಶಲವನ್ನು ಮೇಲ್ದರ್ಜೆಗೆ ಏರಿಸುವುದು ಮಾತ್ರ ಪಠ್ಯ ಪರಿಷ್ಕರಣೆಯ ಗುರಿಯಾಗಿರಬೇಕು. ಆದರೆ ವಾಸ್ತವವಾಗಿ ತನ್ನ ಸಿದ್ಧಾಂತಕ್ಕೆ ಒಗ್ಗುವ ಪಾಠಗಳನ್ನು ಪಠ್ಯದಲ್ಲಿ ಸೇರಿಸುವುದೇ ಪಠ್ಯ ಪರಿಷ್ಕರಣೆಯ ಉದ್ದೇಶವಾಗಿದೆ. ಇದೊಂದು ಸ್ವೇಚ್ಛಾಚಾರವಾಗಿದ್ದು, ಇದಕ್ಕೆ ತಡೆ ಒಡ್ಡಬೇಕಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ವರ್ಷದ ಮಧ್ಯದಲ್ಲಿ ಪಠ್ಯ ಪರಿಷ್ಕರಣೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು
ಗೊಂದಲಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಸರಕಾರ ಪಠ್ಯ ಪರಿಷ್ಕರಣೆ ನಿರ್ಧಾರದಿಂದ ಹಿಂದೆ ಸರಿಯಬೇಕು.

ರಾಜಕೀಯ ಪಕ್ಷಗಳ ನಡುವಣ ಸಿದ್ಧಾಂತದ ಜಟಾಪಟಿಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳ ಬೇಕು.